Monday, October 14, 2024

Top 5 This Week

spot_img

Related Posts

Rural Life: ನಾವು ರೈತರು, ನಮ್ಮ ಮಕ್ಕಳಿಗೂ ಹೆಣ್ಣು ಕೊಡಿ !

ರೈತರ ಮಕ್ಕಳಿಗೆ ಮದುವೆಯಾಗಲಿಕ್ಕೆ ಹೆಣ್ಣು ಸಿಗುತ್ತಿಲ್ಲ..ಯಾವ ಪೋಷಕರೂ ರೈತರ ಮಗನಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವುದಿಲ್ಲವಂತೆ. ಈ ಸಮಸ್ಯೆ ಇನ್ನೂ ಹಲವು ಕ್ಷೇತ್ರದ ಉದ್ಯೋಗಿಗಳಿಗೆ ಎದುರಾಗಿದೆ. ಮುಖ್ಯವಾಗಿ ಸ್ವಯಂ ಉದ್ಯೋಗವೆಂದರೆ ಸ್ವಲ್ಪ ಹಿಂದೆಯೇ. ಬಹುತೇಕರ ಒಲವು ಐಟಿ ಕ್ಷೇತ್ರದವರ ಮೇಲೆ. ಅದರಲ್ಲೂ ಒಂದು ತಮಾಷೆ ಇದೆ. ಮೊದ ಮೊದಲು ಐಟಿ ಕ್ಷೇತ್ರದವರಾಗಿದ್ದರೆ ಪರವಾಗಿಲ್ಲ, ಸಾಕು. ಅಷ್ಟೇ ಮದುವೆ ಮಾಡಿಕೊಡುತ್ತಿದ್ದರು.

ಹುಡುಗ ಯಾವುದೋ ಐಟಿ ಕಂಪನಿಯಲ್ಲಿದ್ದಾನಂತೆ, ಬೆಂಗಳೂರನಂತೆ ಕೆಲಸ ಎಂದು ಒಪ್ಪಿ ಬಿಡುತ್ತಿದ್ದರು. ಕ್ರಮೇಣ ಅಮೆರಿಕದ ಮೇಲಿನ ಒಲವು ಮನೆಯೊಳಗೆ ಬಂದಿತು. ಹುಡುಗ ಐಟಿ ಕ್ಷೇತ್ರದವನಾಗಿದ್ದರೂ ಅವನು ಅಮೆರಿಕದಲ್ಲಿದ್ದಾನಾ? ಎಂಬ ಪ್ರಶ್ನೆ ಉದ್ಭವಿಸತೊಡಗಿತು. ಬಳಿಕ ಇಂಗ್ಲೆಂಡ್‌, ಜರ್ಮನಿ, ಆಸ್ಟ್ರೇಲಿಯಾ-ಹೀಗೆ ಎಲ್ಲ ದೇಶಗಳನ್ನೂ ಸುತ್ತಿ ವಿಶ್ವ ಪರ್ಯಟನೆ ಮಾಡಿ ಈಗ ಮತ್ತೆ ಐಟಿ ಕ್ಷೇತ್ರಕ್ಕೆ ಬಂದು ನಿಂತಿದೆ ! ಈ ಮಧ್ಯೆ ರೈತರ ಮಕ್ಕಳು, ಬೇರೆ ಉದ್ಯೋಗ ಕ್ಷೇತ್ರದ ಮಕ್ಕಳು ಆಸ್ತಿ, ಬ್ಯಾಂಕ್‌ ಬ್ಯಾಲೆನ್ಸ್‌ ಎಲ್ಲ ತೋರಿಸಿದರೂ ಒಪ್ಪುವವರು ಕಡಿಮೆ. ನಾವು ಮನುಷ್ಯರೂ, ನಮಗೂ ಹೆಣ್ಣು ಕೊಡಿ ಎಂದು ಕೇಳುವ ಪರಿಸ್ಥಿತಿ.

ನಿಮ್ಮೂರಿನ ಒಂದು ದಿನಸಿ ಅಂಗಡಿ ಮುಚ್ಚಿದರೆ ಏನು ಮಹಾ ಎನ್ನಬೇಡಿ

ಬಹಳ ಆಸಕ್ತಿಕರವಾದ ಲೇಖನವೊಂದು ಡೌನ್‌ ಟು ಅರ್ಥ್‌ ಮ್ಯಾಗಜೈನ್‌ ನಲ್ಲಿ ಬಂದಿದೆ. ಅದರಲ್ಲಿ ಉಲ್ಲೇಖವಾಗಿರುವಂತೆ ಮೈಸೂರು ಜಿಲ್ಲೆಯ ಹುಡುಗನೊಬ್ಬನಿಗೆ ಈಗ ೩೫ ವರ್ಷ. ಎಂಟು ವರ್ಷದಿಂದ ಮದುವೆಯಾಗಲು ಸಿದ್ಧನಾಗಿ ಹುಡುಗಿಯನ್ನು ಹುಡುಕುತ್ತಿದ್ದಾನೆ. ಅವನ ಪೋಷಕರು ಸುಮಾರು ನೂರು ಹೆಣ್ಣ ಮಕ್ಕಳನ್ನು ನೋಡಿರಬಹುದು, ಎಲ್ಲರದ್ದೂ ಹಾಗೂ ಹೀಗೂ ಒಂದೇ ಅಭಿಪ್ರಾಯ – ಐಟಿ ಕ್ಷೇತ್ರದವರಿದ್ದರೆ ನೋಡೋಣ. ಇನ್ನು ಕೆಲವರದ್ದು ರೈತ ಮಕ್ಕಳಿಗೆ ಕೊಡುವುದಿಲ್ಲ. ಇದು ಒಬ್ಬರ ಕಥೆಯಲ್ಲ, ಹಲವರದ್ದು. ನಮ್ಮ ಮಕ್ಕಳಿಗೂ ಉದ್ಯೋಗವಿದೆ, ಆದಾಯವಿದೆ, ನಮ್ಮ ಮಕ್ಕಳಿಗೂ ಹೆಣ್ಣು ಕೊಡಿ ಎನ್ನಬೇಕಾಗಿದೆ.

ಹೆಣ್ಣಿನ ಪೋಷಕರ ಲೆಕ್ಕಾಚಾರವೆಂದರೆ, ಐಟಿ ಕ್ಷೇತ್ರ ಅಥವಾ ಸರಕಾರಿ ಉದ್ಯೋಗವಿದ್ದರೆ ಸಾಮಾಜಿಕ ಭದ್ರತೆ ಸಿಕ್ಕಂತೆ. ಅರ್ಥಿಕ ಸ್ಥಿರತೆಯ ಸಿಕ್ಕಂತೆ. ರೈತರಿಗಾದರೆ ನಿರ್ದಿಷ್ಟ ಆದಾಯವಿಲ್ಲ ಹಾಗೂ ಆದಾಯದಲ್ಲೂ ನಿರ್ದಿಷ್ಟತೆ ಇಲ್ಲ. ಅಂಥವರಿಗೆ ಮಗಳನ್ನು ಕೊಟ್ಟರೆ ಭವಿಷ್ಯ ಹೇಗಪ್ಪ ಎಂಬ ಆತಂಕ ಅವರದ್ದು. ವಿಪರ್ಯಾಸವೆಂದರೆ ಈ ಅಭಿಪ್ರಾಯ ಬಡ ರೈತರಿಗಂತಲ್ಲ, ಶ್ರೀಮಂತ ರೈತರ ಮಕ್ಕಳ ಬಗ್ಗೆಯೂ ಇದೆ. ಒಂದೆರಡು ಎಕ್ರೆ ಗದ್ದೆಯಿಂದ ಹಿಡಿದು ೨೫ ಎಕ್ರೆಯ ದೊಡ್ಡ ಭೂ ಹಿಡುವಳಿದಾರನ ಮಕ್ಕಳಿಗೂ ಹೆಣ್ಣು ಸಿಗುವುದಿಲ್ಲ ಮದುವೆಗೆ.

ಇದಕ್ಕೆ ಮತ್ತೊಂದು ಆಯಾಮವಿದೆ. ರೈತರ ಕುಟುಂಬವೆಂದರೆ ಕೊಂಚ ಕೆಲಸ ಹೆಚ್ಚು, ದೊಡ್ಡ ಕುಟುಂಬ, ಮನೆ ಜವಾಬ್ದಾರಿ ಇತ್ಯಾದಿ. ಅವೆಲ್ಲ ತಲೆನೋವು ಯಾಕೆ ಎನ್ನುವುದು ಮತ್ತೊಂದು ಕಾರಣ.  ಹಳ್ಳಿ ಜೀವನ, ಕೈ ಕೆಸರಾದರೆ ಬಾಯಿ ಮೊಸರೆಂಬ ಗಾದೆ ಯಾವುದೂ ಬೇಕಿಲ್ಲ. ಕೈ ಮಣ್ಣಾಗಬಾರದು, ಬಟ್ಟೆ ಹಾಳಾಗಬಾರದು. ಬದುಕು ನಡೆಯಬೇಕು.

ಇನ್ನೊಂದು ಕಥೆ ಕೇಳಿ. ಮತ್ತೊಬ್ಬನಿಗೆ ಕೃಷಿ ಜಮೀನಿದೆ. ಜತೆಗೆ ಒಂದು ವ್ಯಾಪಾರವಂತೂ ಮಾಡುತ್ತಿದ್ದಾನೆ. ಮೂರ್ನಾಲ್ಕು ಮನೆಗಳು, ಸೈಟುಗಳು, ೩ ಎಕ್ರೆಯಷ್ಟು ಭೂಮಿ ಎಲ್ಲವೂ ಇದೆ. ಅವರದ್ದೂ ಅದೇ ಕಥೆ. ಈ ಕಥೆಯಲ್ಲಿ ಒಂದು ಸಣ್ಣ ಟರ್ನಿಂಗ್‌ ಪಾಯಿಂಟ್‌ –ತಿರುವು ಎಂದರೆ ಸುಮಾರು ೬೦ ವಧೂ ಅನ್ವೇಷಣೆಯ ಬಳಿಕ ಒಬ್ಬ ವಧು ಒಪ್ಪಿಕೊಂಡಿದ್ದಕ್ಕೆ ಕಂಕಣ ಭಾಗ್ಯ ಕೂಡಿಬಂದಿತು. ಈಗ ಮದುವೆಯಾದರು, ಸುಖವಾಗಿದ್ದಾರೆ ಎನ್ನುವ ಕ್ಲೈಮ್ಯಾಕ್ಸ್‌ ಇವರ ಕಥೆಗೆ. ಈ ಅದೃಷ್ಟ ಎಷ್ಟು ಮಂದಿಗಿದೆ ಎಂದು ಕೇಳುವಂತಿಲ್ಲ.

ಇನ್ನು ಕೆಲವು ಹೆಣ್ಣುಮಕ್ಕಳಿಗೆ ಪೇಟೆ ಮಂದಿ ಬೇಕು. ನಗರದಲ್ಲಿರುವ ಹುಡುಗರಾಗಬೇಕು. ಅವರು ತಮ್ಮ ಊರಿನವರೇ ಆಗಿದ್ದರೂ ಪರವಾಗಿಲ್ಲ. ಆದರೆ ಸಿಟಿಗೆ ಹೋಗಿ ಕಲಿತು, ಅಲ್ಲೊಂದು ನೌಕರಿಗೆ ಪಡೆದಿರಬೇಕು. ಆಗ ಅರೆ ಮನಸ್ಸಿನಿಂದ ಒಪ್ಪುವವರಿದ್ದಾರೆ. ಊರು ಬೇಡ, ಇಲ್ಲಿ ಏನೂ ಚೆನ್ನಾಗಿಲ್ಲ, ನಮ್ಮ ಮಕ್ಕಳಿಗೂ ಈ ಸ್ಥಿತಿ ಇರಬಾರದು ಎನ್ನುವ ಬಗೆಗಿನ ಕಾಳಜಿಯೂ ಇದರ ಹಿಂದಿದೆ ಎಂಬ ಅಭಿಪ್ರಾಯವಿದೆ. ಈ ಸಮಸ್ಯೆ ಹಲವು ಜಿಲ್ಲೆಗಳಲ್ಲಿದೆ. ಈ ಸಮಸ್ಯೆ ಹೆಚ್ಚಳಕ್ಕೆ ಇರುವ ಹೆಣ್ಣುಗಳ ಕೊರತೆಯೂ ಕಾರಣ. ಇದರೊಟ್ಟಿಗೇ ಕೆಲವು ಜಿಲ್ಲೆಗಳಲ್ಲಿರುವ ಹೆಣ್ಣ ಭ್ರೂಣ ಹತ್ಯೆಯಂಥ ಕುಕೃತ್ಯಗಳೂ ಈ ಸಮಸ್ಯೆ ಬಿಗಡಾಯಿಸಲು ಕಾರಣವಾಗುತ್ತಿವೆ.

ಹೌಸ್‌ ಫುಲ್…ಮಹಾನಗರಗಳು ಭರ್ತಿಯಾಗಿವೆ !

ಉದಾಹರಣೆಗೆ, ಮಂಡ್ಯ ಸೇರಿದಂತೆ ಮೈಸೂರು ಭಾಗದಲ್ಲಿ ಚಾಲ್ತಿಯಲ್ಲಿರುವ ಹೆಣ್ಣು ಭ್ರೂಣ ಹತ್ಯೆ ಸಮಸ್ಯೆಯೂ ಅಡ್ಡಿಯಾಗುತ್ತಿದೆ. ಇದಕ್ಕೂ ಪರಿಹಾರ ಹುಡುಕಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಇದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿರುವುದು ಸುಳ್ಳಲ್ಲ. ರೈತರಿಗೂ ತಮ್ಮ ಮಕ್ಕಳನ್ನು ಅನಿವಾರ್ಯವಾಗಿ ಸಣ್ಣದೋ, ಪುಟ್ಟದೋ ಉದ್ಯೋಗಕ್ಕೆ ನಗರಕ್ಕೆ ತಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇಳಿ ವಯಸ್ಸಿನ ಅಪ್ಪ-ಅಮ್ಮ ಹಳ್ಳಿಯಲ್ಲಿ ಉಳಿದರೆ, ಮಗ ದೂರದ ನಗರದಲ್ಲಿರುತ್ತಾನೆ. ಕ್ರಮೇಣ “ನೀವೂ ಬಂದು ಬಿಡಿʼ ಎನ್ನುತ್ತಾನೆ. ಊರಿಗೇ ಊರು ಖಾಲಿಯಾಗುತ್ತದೆ. ಇದರ ನೇರ ಪರಿಣಾಮ ಸ್ಥಳೀಯ ಆರ್ಥಿಕತೆ ಮೇಲಾಗುತ್ತದೆ. ಒಂದು ದಿನ ಇಡೀ ಊರಿಗೆ ಬೀಗ ಜಡಿಯಬೇಕಾದ ದಿನ ಎದುರಾಗುತ್ತದೆ. ಅದಕ್ಕೇ ಸಮಸ್ಯೆ ಯಾವ ಕಡೆಯಿಂದ ಆರಂಭವಾದರೂ ಬಂದು ತಲುಪುವುದು ಗ್ರಾಮೀಣ ಬದುಕಿಗೇ.

ಇದೇ ಸದ್ಯದ ದೊಡ್ಡ ಸಮಸ್ಯೆ ಎಂದುಕೊಳ್ಳುವುದು ಬೇಡ. ಇದು ಹಳೆಯ ಸಮಸ್ಯೆ ಎಂದೇ ತಿಳಿದುಕೊಳ್ಳೋಣ. ಆದರೆ ಹಾಗೆಯೇ ಬಿಡದೇ, ಅದಕ್ಕೆ ಪರಿಹಾರ ಹುಡುಕಬೇಕಿದೆ.

(pic csy: amazon)

RurbanIndia
RurbanIndia
RurbanIndia is a space to redesign, revalue and rejuvenate our Rurban Development. A comprehensive strategy and think tank towards our Rurbansphere. RurbanIndia is a webspace of EkaAneka Media.

LEAVE A REPLY

Please enter your comment!
Please enter your name here

Popular Articles