Saturday, September 14, 2024

Top 5 This Week

spot_img

Related Posts

ಯಮುನಾ ಒತ್ತುವರಿ: ನದಿಗಳು ಉಳಿದರಷ್ಟೇ ನಾವು !

ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ ಹೈಕೋರ್ಟ್‌ ಹಾಗೂ ರಾಷ್ಟ್ರೀಯ ಹಸಿರು ಪೀಠಕ್ಕೆ ತಿಳಿಸಿರುವ ಮಾಹಿತಿ ಹಾಗೂ ಅಂಕಿಅಂಶಗಳ ಪ್ರಕಾರ ಯಮುನಾ ನದಿಯ ಪ್ರವಾಹ ಪಾತ್ರದ ಶೇ. 75 ರಷ್ಟು ಪ್ರದೇಶ ಒತ್ತುವರಿಯಾಗಿದೆ.

ಅದರ ತೆರವಿಗೆ 2022 ರಿಂದ ಪ್ರಯತ್ನಗಳು ನಡೆದಿದೆ. ಇದೂವರೆಗೆ ಕೇವಲ 400 ಎಕರೆಯಷ್ಟು ಪ್ರದೇಶವನ್ನು ವಾಪಸು ಪಡೆಯಲು ಸಾಧ್ಯವಾಗಿದೆ. ಒಟ್ಟೂ ಪ್ರವಾಹ ಪಾತ್ರದ 9, 700 ಎಕರೆಯಷ್ಟು ಪ್ರದೇಶದ ಶೇ. 75 ಒತ್ತುವರಿಯಾಗಿದ್ದರಲ್ಲಿ ಈಗ ವಶಪಡಿಸಿಕೊಂಡಿರುವುದು ಕೇವಲ 400 ಎಕರೆಗಳು.

ವಿಚಿತ್ರ ನೋಡಿ. ಈ ಒತ್ತುವರಿ ಪ್ರದೇಶದಲ್ಲಿದ್ದ 3, 900 ಕ್ಕೂ ಹೆಚ್ಚು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲಾಗಿದೆ. ಇನ್ನೂ ತಮಾಷೆಯ ಸಂಗತಿಯೆಂದರೆ ಈ ಒತ್ತುವರಿ ಪ್ರದೇಶದಲ್ಲಿ ಎರಡು ಕ್ರಿಕೆಟ್‌ ಮೈದಾನಗಳೂ ಇದ್ದವಂತೆ. ಆರು ಡೈರಿ ಫಾರ್ಮಗಳೂ ಕಾರ್ಯ ನಿರ್ವಹಿಸುತ್ತಿದ್ದವಂತೆ.

ದಿಲ್ಲಿ ಹೈಕೋರ್ಟ್‌ ಈಗಾಗಲೇ ಪ್ರಾಧಿಕಾರಕ್ಕೆ ಎಲ್ಲ ಒತ್ತುವರಿ ತೆರವುಗೊಳಿಸಿ ಬೇಲಿ ಹಾಕಿ. ನದಿಗೆ ನೀರು ಬರುವ ಹಾದಿಯನ್ನೆಲ್ಲ ತೆರೆದಿಡಿ ಎಂದು ಹೇಳಿದೆ. ಆದರೆ ಇದಕ್ಕಾಗಿ ಗುದ್ದಲಿ, ಪಿಕಾಸಿ ಹಿಡಿದುಕೊಂಡು ಹೋದರೆ ಸಾಕೇ? ಬುಲ್ಡೋಜರ್‌ ತೆಗೆದುಕೊಂಡು ಹೋಗಬೇಕು. ಇಲ್ಲವಾದರೆ ಇನ್ನೂ ನೂರು ವರ್ಷಗಳು ಬೇಕು ಈ ಒತ್ತುವರಿ ತೆರವುಗೊಳಿಸಲು. ವಿಪರ್ಯಾಸವೆಂದರೆ ಆ ಹೊತ್ತಿಗೆ ಹೊಸ ಒತ್ತುವರಿದಾರರು ಅವತರಿಸಿರುತ್ತಾರೆ !

ಈ ಮಾತು ಬರೀ ಯುಮನಾಕ್ಕೆ ಅನ್ವಯಿಸುವುದಿಲ್ಲ, ಗಂಗೆಗೂ ಅನ್ವಯಿಸುತ್ತದೆ. ನಮ್ಮ ಕಾವೇರಿಗೂ ಅನ್ವಯಿಸುತ್ತದೆ, ತುಂಗಾಳಿಗೂ ಅನ್ವಯಿಸುತ್ತದೆ, ಮಲಪ್ರಭಾದಿಂದ ಹಿಡಿದು ಗೋದಾವರಿವರೆಗೂ ಎಲ್ಲ ನದಿಗಳಿಗೂ ಅನ್ವಯಿಸುತ್ತದೆ. ಕಾರಣವೇನೆಂದರೆ , ಎಲ್ಲ ನದಿಗಳ ಪಾತ್ರಗಳೂ ಒತ್ತುವರಿಗೆ ಒಳಗಾಗಿವೆ.

ಇದನ್ನೂ ಓದಿ :ಇದು ಡಾರ್ಜಿಲಿಂಗ್‌ ಸಮಸ್ಯೆಯಷ್ಟೇ ಎಂದುಕೊಳ್ಳಬೇಡಿ; ನಮ್ಮ ಊರಿನದ್ದೂ ಸಹ

ಕರ್ನಾಟಕದ ಕಥೆಯೆಂದರೆ ವೃಷಭಾವತಿಯ ಎಷ್ಟು ಎಕರೆ ಒತ್ತುವರಿಯಾಗಿಲ್ಲ? ಈಗ ವೃಷಭಾವತೆ ಕಣ್ಣಿಗೆ ಗೋಚರವಾಗದಷ್ಟು ಕೃಶವಾಗಿದ್ದಾಳೆ. ಕಾವೇರಿ ಕಥೆ ಹೇಳಬೇಕೇ? ಮಲಪ್ರಭಾ ನದಿಯ ಹಲವಾರು ಎಕರೆ ಪ್ರದೇಶ ಒತ್ತುವರಿಗೆ ಒಳಗಾಗಿದೆ. ರಾಜ್ಯದಲ್ಲಿನ 40 ಸಾವಿರ ಕೆರೆಗಳ ಪೈಕಿ 18 ಸಾವಿರ ಕೆರೆಗಳ ಸರ್ವೆ ಈ ಹಿಂದೆ ಮಾಡಲಾಗಿತ್ತು. ಈ ಪೈಕಿ ಕಾಣೆಯಾಗಿದ್ದರ ಸಂಖ್ಯೆ ಎಷ್ಟು ಗೊತ್ತೇ? ಸುಮಾರು 7, 600. ಈ ಪೈಕಿ ಸುಮಾರು 4 ಸಾವಿರ ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆಯಂತೆ. ಉಳಿದದ್ದರಲ್ಲಿ ಕೆಲವದ್ದರ ಆರೋಗ್ಯ ಪರವಾಗಿಲ್ಲ, ಉಳಿದದ್ದರ ಅನಾರೋಗ್ಯ ಕೇಳುವಂತಿಲ್ಲ. ಆದರೆ ಇನ್ನೂ ಶೇ. 60 ರಷ್ಟು ಕೆರೆಗಳ ಸರ್ವೇ ಬಾಕಿ ಇದೆ. ಅವುಗಳ ಕಥೆ ಏನೋ ಗೊತ್ತಿಲ್ಲ.

ನದಿ ಪಾತ್ರಗಳನ್ನು ಉಳಿಸಿಕೊಳ್ಳಬೇಕಾದ ಹೊತ್ತಿದು. ಅದೇ ಅನಿವಾರ್ಯತೆಯೂ ಸಹ. ಮಳೆ ಪ್ರಮಾಣದಲ್ಲಿ ಏರುಪೇರು ಆಗುತ್ತಿದೆ, ಮಳೆಯ ಕ್ರಮದಲ್ಲಿ ಏರುಪೇರಾಗುತ್ತಿದೆ, ಮಳೆಯ ವಿಧಾನದಲ್ಲೂ ಏರು ಪೇರಾಗುತ್ತಿದೆ. ಒಮ್ಮೆಲೆ ಸುರಿದರೆ ಲಕ್ಷಾಂತರ ಹಂಡೆಯಷ್ಟು ಸುರಿದು ಬಿಡುತ್ತದೆ. ಆ ನೀರು ಹೋಗಬೇಕಾದ್ದು ಎಲ್ಲಿಗೆ? ದಾರಿ ಇಲ್ಲದೇ ನಗರ, ಹಳ್ಳಿಗಳು, ಪಟ್ಟಣಗಳನ್ನು ಸುತ್ತು ಹಾಕಿ ನಿಂತುಬಿಟ್ಟರೆ ಸರ್ಪದ ಹಾಗೆ ಜನರು ಹೋಗುವುದೆಲ್ಲಿಗೆ?

ಈ ಸಮಸ್ಯೆ ಈಗಾಗಲೇ ಮುಂಬಯಿ, ಬೆಂಗಳೂರು, ಚೆನ್ನೈ ನಂಥ ನಗರಗಳಿಗೆ ಬಾಧಿಸತೊಡಗಿದೆ. ನದಿ ಪಾತ್ರಗಳ ಸುತ್ತಲಿನ ಜನರ ಎತ್ತಂಗಡಿ ಪ್ರತಿ ವರ್ಷ ಇದ್ದದ್ದೇ. ನದಿಯ ಹೂಳನ್ನೂ ಸಹ ಎತ್ತದೇ ಅದರ ಹರಿವಿನ ಪ್ರಮಾಣ ಕಡಿಮೆಗೊಳಿಸಿ ಒಟ್ಟೂ ನದಿ ಪಾತ್ರದ ಪ್ರದೇಶಕ್ಕೂ ನದಿಯ ಪ್ರದೇಶಕ್ಕೂ ಯಾವುದೇ ವ್ಯತ್ಯಾಸವಿಲ್ಲದಂತೆ ಮಾಡಲಾಗಿದೆ.

ಇವೆಲ್ಲದಕ್ಕೂ ಪರಿಹಾರ ಕಂಡುಕೊಳ್ಳದಿದ್ದರೆ ಪ್ರತಿ ವರ್ಷ ಎತ್ತಂಗಡಿಯ, ಪ್ರಾಕೃತಿಕ ಬಿಕ್ಕಟ್ಟಿನ ಬ್ಯಾಡ್ಜ್‌ ಧರಿಸಿಕೊಂಡು ಪರಿಹಾರ ಕಾರ್ಯ ಮಾಡಲೇಬೇಕು. ಇದಕ್ಕೆ ಸಂಪನ್ಮೂಲವನ್ನು ಹೊಂದಿಸುವುದೆಲ್ಲಿ ಎಂಬ ಸಮಸ್ಯೆ ಎದುರಾಗದೇ ಇರದು.

ಇದನ್ನೂ ಓದಿ : ಏಷ್ಯಾದ ಶ್ರೀಮಂತ ಹಳ್ಳಿ ಗುಜರಾತಿನಲ್ಲಿದೆ, ಅಲ್ಲಿ ಎಲ್ಲವೂ ಇದೆ !

ಪ್ರಸ್ತುತ ಕಷ್ಟದಲ್ಲಿದ್ದೇವೆ, ಸಂಕಷ್ಟಕ್ಕೆ ನಮ್ಮನ್ನು ನಾವು ತಳ್ಳಿಕೊಳ್ಳುವ ಮೂರ್ಖತನಕ್ಕಿಂತ ಕಷ್ಟದ ಗಂಟಿನಿಂದ ಬಿಡಿಸಿಕೊಳ್ಳುವುದು ಲೇಸು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು ಹಾಗೂ ಸ್ಪಷ್ಟ ಯೋಜನೆ ಬೇಕು. ಅದನ್ನು ಜಾರಿಗೊಳಿಸುವ ನಿಷ್ಠ ಹಾಗೂ ದಕ್ಷ ಅಧಿಕಾರಿಗಳ ಪಡೆ ಬೇಕು. ಇಷ್ಟೆಲ್ಲಾ ಸಾಧ್ಯವಾದರೆ ನಮ್ಮ ನದಿಗಳೂ ಉಳಿಯುತ್ತವೆ, ನಾವೂ ಉಳಿಯುತ್ತೇವೆ. ಇಲ್ಲವಾದರೆ..ದೊಡ್ಡ ಪ್ರಶ್ನೆಯಷ್ಟೇ ಉಳಿಯುತ್ತದೆ. ಹಾಗಾಗಿ ಯಮುನಾ ಒತ್ತುವರಿ ನಮ್ಮ ವರಿ (ಚಿಂತೆ) ಯೂ ಆಗಲಿ.

RurbanIndia
RurbanIndia
RurbanIndia is a space to redesign, revalue and rejuvenate our Rurban Development. A comprehensive strategy and think tank towards our Rurbansphere. RurbanIndia is a webspace of EkaAneka Media.

LEAVE A REPLY

Please enter your comment!
Please enter your name here

Popular Articles