Thursday, June 20, 2024

Top 5 This Week

spot_img

Related Posts

ಇದು ಸುಳ್ಳಲ್ಲ : ರಾತ್ರಿಯಾದರೂ ನಮ್ಮ ನಗರಗಳು ತಣ್ಣಗಾಗುತ್ತಿಲ್ಲ !

ಖಂಡಿತಾ ಇದು ನಗರಗಳ ಕುರಿತ ಋಣಾತ್ಮಕ ನೆಲೆಯ ಮಾತಲ್ಲ. ಆದರೂ ಒಮ್ಮೆ ಆಲೋಚಿಸಿ. ನಮ್ಮ ನಗರಗಳಿಗೆ ಏನಾಗಿದೆ? ಏನಾಗುತ್ತಿದೆ? ಯಾಕೆ ಹೀಗಾಗುತ್ತಿದೆ?- ಈ ಮೂರು ಪ್ರಶ್ನೆಗಳನ್ನು ಎದುರಿಟ್ಟುಕೊಂಡು ನಗರವನ್ನು ಶೋಧಿಸುತ್ತಾ ಹೊರಟರೆ ನಮಗೆ ಪರಿಹಾರಗಳು ಸಿಗಬಹುದು. ಉತ್ತರವನ್ನು ಕಂಡುಕೊಂಡು ಅನುಭವಿಸುವ ಖುಷಿಗೆ ತಲುಪಬಹುದು. ಅದು ಸಾಧ್ಯವೇ? ಅದರಲ್ಲೂ ನಮ್ಮನ್ನಾಳುವವರಿಗೆ, ಆಡಳಿತ ಸಂಸ್ಥೆಗಳಿಗೆ ಸಾಧ್ಯವೇ?ಎಂಬುದು ಮತ್ತೂ ದೊಡ್ಡ ಪ್ರಶ್ನೆ.

ಇತ್ತೀಚೆಗಷ್ಟೇ ಸೆಂಟರ್ ಫಾರ್‌ ಸೈನ್ಸ್‌ ಅಂಡ್‌ ಎನ್‌ ವಾಯಿರ್‌ ಮೆಂಟ್‌ (ಸಿಎಸ್‌ ಇ) ನಗರಗಳಲ್ಲಿನ ಹೊಸ ಪರಿಸ್ಥಿತಿ ಕುರಿತು ಒಂದು ಅಧ್ಯಯನ ನಡೆಸಿದೆ. ಆ ಅಧ್ಯಯನದ ಪ್ರಕಾರ ಭಾರತದ ಹಲವು ನಗರಗಳು ಸಂಕಷ್ಟದಲ್ಲಿವೆ. ಹೆಚ್ಚುತ್ತಿರುವ ತಾಪಮಾನ ಹಾಗೂ ನಗರದ ವಿಸ್ತರಣೆಯಿಂದ ಉಷ್ಣ ಅಲೆಯೆಂಬುದು ವರ್ಷದಿಂದ ವರ್ಷಕ್ಕೆ ನಗರಗಳಿಗೆ ಮಾರಕವಾಗಿ ಪರಿಣಮಿಸತೊಡಗಿದೆ. ಈಗಾಗಲೇ ಇದು ಅನುಭವಕ್ಕೆ ಬಂದಿದೆ. ಈ ಬಾರಿಯ ಬೇಸಗೆಯಲ್ಲಿ ಹಲವು ನಗರಗಳು ಹಿಂದೆಲ್ಲ ವರ್ಷಗಳಿಗಿಂತ ಹೆಚ್ಚಿನ ಉಷ್ಣಾಂಶವನ್ನು ಅನುಭವಿಸಿದ್ದವು.

ಇನ್ನೂ ವಿಚಿತ್ರ ಹಾಗೂ ಆಘಾತಕಾರಿಯ ಅಂಶವೆಂದರೆ ರಾತ್ರಿಯಾದರೂ ನಗರಗಳು ತಣ್ಣಗಾಗುತ್ತಿಲ್ಲ ಎಂಬುದು. 2001-10 ರ ಅವಧಿಗೆ ಹೋಲಿಸಿದರೆ ಈಗ ಸಂಜೆಯಾಗಿ ರಾತ್ರಿಯಾದರೂ ನಗರಗಳು ಅದೇ ಬಿಸಿಯಲ್ಲಿರುತ್ತಿವೆ. ಒಂದು ದಶಕದಲ್ಲಿ ಆಗಿರುವ ಬದಲಾವಣೆಯು ಭವಿಷ್ಯವನ್ನು ಹೆಚ್ಚು ಸಂಕಷ್ಟದ ದಿನಗಳೆಂದು ಸಾರತೊಡಗಿವೆ. ಈ ಅಧ್ಯಯನ ಭಾರತದ ನಗರಗಳೇಕೆ ಇಷ್ಟೊಂದು ಬಿಸಿಯಾಗುತ್ತಿವೆ ಎಂಬುದರ ಕುರಿತಾಗಿಯೇ ನಡೆಸಲಾಗಿತ್ತು. ಬಿಸಿಗೆ ಕಾರಣ ಹುಡುಕುವುದು ಉದ್ದೇಶವಾಗಿತ್ತು. ಅಧ್ಯಯನಕ್ಕೆ ಬಹಳ ಪ್ರಮುಖವಾಗಿ ಆರು ನಗರಗಳನ್ನು ಆಯ್ದುಕೊಳ್ಳಲಾಗಿತ್ತು. ದಿಲ್ಲಿ, ಮುಂಬಯಿ, ಕೋಲ್ಕತ್ತಾ, ಹೈದರಾಬಾದ್‌, ಚೆನ್ನೈ ಹಾಗೂ ಬೆಂಗಳೂರು ಈ ನಗರಗಳು.

ಒಟ್ಟು 23 ವರ್ಷಗಳ (2001-2023) ದವರೆಗಿನ ಅಂಕಿ ಅಂಶ ಹಾಗೂ ಇನ್ನಿತರ ಅಂಶಗಳನ್ನು ಅಧ್ಯಯನ ಮಾಡುವಾಗ ಕಂಡು ಬಂದ ಸಂಗತಿಯೆಂದರೆ ಗಾಳಿಯಲ್ಲಿನ ಉಷ್ಣಾಂಶ ಏರಿಕೆಯಲ್ಲಿ ಮಹತ್ತರ ಬದಲಾವಣೆಗಳಾಗಿಲ್ಲ. ಆದರೆ ಆರ್ದ್ರತೆಯ ಹೆಚ್ಚಳ (ತೇವಾಂಶದ ಕೊರತೆ) ದಿಂದ ಎಲ್ಲ ಬಗೆಯ ಸಮಸ್ಯೆಗಳು ಹೆಚ್ಚುತ್ತಿವೆ. ಇದರಿಂದಲೇ ಉಷ್ಣ ಅಲೆಯ ಭೀಕರ ಪರಿಣಾಮವನ್ನು ಎದುರಿಸುವಂತಾಗಿದೆ. ಯಾವಾಗಲೂ ಉಷ್ಣ ಅಲೆಯ ಒತ್ತಡ ಹೆಚ್ಚುವುದು ಮೂರು ಅಂಶಗಳಿಂದ. ಗಾಳಿಯಲ್ಲಿನ ಉಷ್ಣಾಂಶ, ಭೂಮಿ ಮೇಲಿನ ಉಷ್ಣಾಂಶ ಹಾಗೂ ಸಾಪೇಕ್ಷ ಆರ್ದ್ರತೆ. ಹಾಗಾಗಿ ಅಸ್ವಸ್ಥತೆ ಹಾಗೂ ಇತರೆ ಉಷ್ಣಾಂಶ ತೀವ್ರತೆಯಿಂದ ಎದುರಾಗುವ ವ್ಯಾಧಿಗಳಿಗೆ ನಗರ ವಾಸಿಗಳು ತುತ್ತಾಗತೊಡಗಿದ್ದಾರೆ. ಒಂದುವೇಳೆ ಗಾಳಿಯಲ್ಲಿನ ಉಷ್ಣಾಂಶ ಕಡಿಮೆಯಾದರೂ, ಭೂಮಿ ಮೇಲ್ಮೈ ತಾಪಮಾನ ಹೆಚ್ಚು ಹಾಗೂ ಸಾಪೇಕ್ಷ ಆರ್ದ್ರತೆಯ ಪ್ರಮಾಣ ಹೆಚ್ಚಿರುವ ಕಾರಣ ನಗರವಾಸಿಗಳಿಗೆ ಕಷ್ಟವಾಗುತ್ತಿದೆ.

ಯುನೈಟೆಡ್‌ ಸ್ಟೇಟ್ಸ್‌ ನ್ಯಾಷನಲ್‌ ವೆದರ್‌ ಸರ್ವೀಸ್‌ ಪ್ರಕಾರ, ಉಷ್ಣ ಸೂಚ್ಯಂಕದ ಪ್ರಕಾರ 41 ಡಿಗ್ರಿಯ ಉಷ್ಣಾಂಶವೂ ಮಾನವನ ಆರೋಗ್ಯಕ್ಕೆ ಸಾಕಷ್ಟು ದುಷ್ಪರಿಣಾಮಗಳುಂಟು ಮಾಡಬಲ್ಲದು. ಈ ಕುರಿತು ವಿವರಿಸಿರುವ ಸಿಎಸ್‌ ಇ ಯ ಸಂಶೋಧನಾ ಮತ್ತು ಅಡ್ವೊಕೆಸಿಯ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಅನುಮಿತ ರಾಯ್‌ ಚೌಧರಿಯವರ ಪ್ರಕಾರ, ಈ ಅಪಾಯಕಾರಿ ಟ್ರೆಂಡ್‌ ನ್ನು ನಿರ್ವಹಿಸಲು ಬಹಳ ವ್ಯವಸ್ಥಿತವಾದ ಯೋಜನೆಗಳನ್ನು ರೂಪಿಸಬೇಕಿದೆ. ಪ್ರಮುಖವಾಗಿ ಸಾಪೇಕ್ಷ ಆರ್ದ್ರತೆ ಮತ್ತು ಭೂಮಿ ಮೇಲಿನ ತಾಪಮಾನವನ್ನು ಹಗಲು ಹಾಗೂ ರಾತ್ರಿಯಲ್ಲಿನ ಉಷ್ಣಾಂಶದ ಜತೆಗೆ ತಾಳೆ ಹಾಕಿ, ಅಧ್ಯಯನ ಮಾಡಿ ಒಂದು ವಿಸ್ತೃತವಾದ ಯೋಜನೆಯನ್ನು ರೂಪಿಸಬೇಕು. ಆಗ ಮಾತ್ರ ನಗರಗಳು ಉಸಿರಾಡಬಹುದುʼ ಎನ್ನುತ್ತಾರೆ.

water distress : ಜಲಸಂಪನ್ಮೂಲಗಳ ಕೊರತೆ: ಭವಿಷ್ಯದ ಸಂಕಷ್ಟಕ್ಕೆ ಬುನಾದಿ

ಇದೇ ಸಂದರ್ಭದಲ್ಲಿ ಅಧ್ಯಯನವು ಉಲ್ಲೇಖಿಸಿರುವ ಮತ್ತೊಂದು ಸಂಗತಿಯೆಂದರೆ, ಉಷ್ಭ ಅಲೆಯು ಬಾಧಿಸುತ್ತಿರುವ ಹೊತ್ತಿನಲ್ಲಿ ಜನರ ಆರೋಗ್ಯವನ್ನು ಕಾಪಾಡಲು ಆಡಳಿತ ವ್ಯವಸ್ಥೆ ಕೆಲವು ಪ್ರಮುಖವಾದ ತುರ್ತು ಕ್ರಮಗಳನ್ನು ಘೋಷಿಸಿ ಅನುಷ್ಠಾನಗೊಳಿಸಬೇಕು. ಅಲ್ಲದೇ ದೀರ್ಘಾವಧಿ ಕ್ರಮಗಳನ್ನೂ ಹೆಚ್ಚು ಮಾಡಬೇಕು. ಉದಾಹರಣೆಗೆ – ಹಸಿರು ಪ್ರಮಾಣವನ್ನು ಹೆಚ್ಚಳ ಮಾಡುವುದು, ಕೆರೆ ಮತ್ತಿತರ ಜಲಮೂಲಗಳ ಸಂರಕ್ಷಣೆ ಹಾಗೂ ವಿಸ್ತರಣೆ, ಉಷ್ಣಾಂಶ ನಿರ್ವಹಣಾ ಮಾದರಿಯ ಕಟ್ಟಡಗಳ ಸಂರಚನೆ ಹಾಗೂ ಅಳವಡಿಕೆ, ವಾಹನಗಳು, ಹವಾನಿಯಂತ್ರಣ ವ್ಯವಸ್ಥೆ, ಕೈಗಾರಿಕೆಗಳಿಂದ ಹೊರಹೊಮ್ಮುವ ಶಾಖವನ್ನು ಕಡಿಮೆ ಮಾಡಲೂ ಕ್ರಮ ಕೈಗೊಳ್ಳಬೇಕಿದೆ.

ಯಾಕೆಂದರೆ ಹೆಚ್ಚಿನ ತಾಪಮಾನ ಹಾಗೂ ಆರ್ದ್ರತೆಯಿಂದ ಮುಖ್ಯವಾಗಿ ಮನುಷ್ಯನ ದೇಹ ಹೊಂದಿರುವ ಸಹಜ ತಂಪಾಗುವ ಪ್ರಕ್ರಿಯೆಯನ್ನು (ಬೆವರುವಿಕೆ) ಮಂದಗೊಳಿಸುತ್ತದೆ. ಬೆವರುವಿಕೆ ಮೂಲಕ ನಮ್ಮ ದೇಹವು ಒಳಗಿನ ತಾಪಮಾನವನ್ನು ಹೊರ ಹಾಕುತ್ತದೆ. ಇದು ಸ್ವಾಭಾವಿಕ ಪ್ರಕ್ರಿಯೆ. ಆದರೆ ಆರ್ದ್ರತೆಯಲ್ಲಿನ ಹೆಚ್ಚಳ ಈ ಸ್ವಾಭಾವಿಕ ಪ್ರಕ್ರಿಯೆಗೆ ಅಡ್ಡಿಯೊಡ್ಡುತ್ತದೆ ಎನ್ನುತ್ತಾರೆ ಸಿಎಸ್‌ ಇ ಯ ಅರ್ಬನ್‌ ಲ್ಯಾಬ್‌ ನ ಪ್ರೋಗ್ರಾಂ ಮ್ಯಾನೇಜರ್‌ ಅವಿಕಾಲ್‌ ಸೋಮವಂಶಿ.

ಈ  ಆರ್ದ್ರತೆಯಲ್ಲಿನ ಹೆಚ್ಚಳಕ್ಕೆ ಅನಿಯಂತ್ರಿತ ನಗರೀಕರಣವೂ ಕಾರಣವಾಗುತ್ತಿದೆ. ಅಧ್ಯಯನದ ಪ್ರಕಾರ ಈ ಎಲ್ಲ ಆರು ನಗರಗಳಲ್ಲಿ ಕಟ್ಟಡಗಳ ಸಂಖ್ಯೆಯಲ್ಲಿನ ಹೆಚ್ಚಳ ಹಾಗೂ ಉಷ್ಣಾಂಶ ಏರಿಕೆಗೆ ಪರಸ್ಪರ ನೇರ ಸಂಬಂಧ ಕಂಡು ಬಂದಿದೆ. ಉದಾಹರಣೆಗೆ ಚೆನೈನಲ್ಲಿ ನಗರೀಕರಣ ಸೇರಿದಂತೆ ಹಲವು ಕಾರಣಗಳಿಗೆ ಶೇ. 14 ರಷ್ಟು ಹಸಿರು ವಲವಯನ್ನು ಇತ್ತೀಚಿನ ಎರಡು ದಶಕಗಳಲ್ಲಿ ಕಳೆದುಕೊಂಡಿದೆ. ಅದೇ ಸಂದರ್ಭದಲ್ಲಿ ಕಾಂಕ್ರೀಟ್‌ ಕಟ್ಟಡಗಳು ದುಪ್ಪಟ್ಟು ಹೆಚ್ಚಾಗಿವೆ.

ಗೋಟಾಲ..ಗೋಟಾಲ..ನದಿ ಬನಾಯಾ ನಾಲಾ

ಇದೊಂದು ವಿಷ ವರ್ತುಲ. ಕಾಂಕ್ರೀಟ್‌ ಶಾಖವನ್ನು ಹೀರಿಕೊಂಡು ತನ್ನಲ್ಲೇ ಇಟ್ಟುಕೊಳ್ಳುತ್ತವೆ. ಇದರ ಪ್ರಮಾಣ ನಗರದಲ್ಲಿ ಶಾಖ ಹೆಚ್ಚಳಕ್ಕೆ ಕಾರಣವಾಗುತ್ತದೆ. ನಗರ ಉಷ್ಣ ದ್ವೀಪ (ಅರ್ಬನ್ ಹೀಟ್‌ ಐಲ್ಯಾಂಡ್‌)‌ ಗಳಾಗಿ ನಮ್ಮ ನಗರಗಳು ಪರಿಣಮಿಸುತ್ತವೆ.

ರಾತ್ರಿಯ ಹೊತ್ತಿನಲ್ಲೂ ನಗರಗಳು ಬಿಸಿಯಾಗಿಯೇ ಇರುವುದು ಮತ್ತೊಂದು ಸಮಸ್ಯೆ. ಸಾಮಾನ್ಯವಾಗಿ, ಹಿಂದಿನ ಒಂದೆರಡು ದಶಕಗಳಲ್ಲಿ ಹಗಲಿನಲ್ಲಿ ಎಷ್ಟೇ ತಾಪಮಾನವಿದ್ದರೂ ರಾತ್ರಿ ಹೊತ್ತಿನಲ್ಲಿ ತಂಪಾಗಿರುತ್ತಿತ್ತು. ಆದರೆ ಅಧ್ಯಯನವು ಈ ರಾತ್ರಿ ತಂಪಾಗುವ ಪ್ರಮಾಣ ಗಮನಾರ್ಹವಾಗಿ ಕಡಿಮೆ ಆಗಿದೆ, ಆಗುತ್ತಿದೆ. ಇದರಿಂದ ರಾತ್ರಿಗಳೂ ಅಸಹನೀಯಗೊಂಡು ವಿವಿಧ ಕಾಯಿಲೆಗಳಿಗೆ ನಗರವಾಸಿಗಳು ತುತ್ತಾಗುವಂತಾಗಿದೆ. ಹಾಗಾಗಿ ಮನುಷ್ಯರಿಗೆ ಮಾರಕವೆನಿಸುವ 41 ಡಿಗ್ರಿ ಉಷ್ಣಾಂಶದ ದಿನಗಳು ಕೋಲ್ಕತ್ತಾ ಹಾಗೂ ಚೆನ್ನೈನಲ್ಲಿ ಹೆಚ್ಚುತ್ತಿವೆಯಂತೆ. ಮುಂಗಾರೂ ಸಹ ಬಹಳ ದೊಡ್ಡ ಸಮಾಧಾನ ಕೊಡದು.

ಈ ಹಿನ್ನೆಲೆಯಲ್ಲಿ ಅಧ್ಯಯನವು ಆಡಳಿತ ವ್ಯವಸ್ಥ, ಸರಕಾರಗಳು, ಸ್ಥಳೀಯ ಸಂಸ್ಥೆಗಳು ಕೂಡಲೇ  ಉಷ್ಣಾಂಶ ನಿರ್ವಹಣೆಗೆ (ಕಡಿಮೆಗೊಳಿಸಲು, ನಗರಗಳನ್ನು ತಂಪಾಗಿಡಲು) ಸಮರ್ಪಕ ಮತ್ತು ಸ್ಪಷ್ಟ ಯೋಜನೆಗಳನ್ನು ತುರ್ತಾಗಿ ಜಾರಿಗೊಳಿಸಬೇಕು, ಇದರಲ್ಲಿ ಹಸಿರು ವಲಯ ಹೆಚ್ಚಳದಿಂದ ಹಿಡಿದು ಕಟ್ಟಡಗಳ ವಿನ್ಯಾಸ-ನಿರ್ವಹಣೆ, ವಾಹನಗಳ ಬಳಕೆ ಹಾಗೂ ಕೈಗಾರಿಕೆಗಳ ನಿರ್ವಹಣೆಯಲ್ಲೂ ಸಾಕಷ್ಟು ಸುಧಾರಣೆಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದೆ.

ಭೂಮಿ ಬಳಕೆಯ ವಿಧಾನದಲ್ಲಿ ತರಬಹುದಾದ ರಚನಾತ್ಮಕ ಹಾಗೂ ಸಕಾರತ್ಮಕ ಬದಲಾವಣೆಗಳು, ಹಸಿರು ವಲಯಗಳಲ್ಲಿನ ಹೆಚ್ಚಳವೂ ಪರಿಹಾರವಾಗಬಹುದು. ಇದರೊಂದಿಗೆ ವೈಜ್ಞಾನಿಕ ರೀತಿಯಲ್ಲಿ ಉಷ್ಣಾಂಶಗಳನ್ನು ಅಳೆಯುವ ವ್ಯವಸ್ಥೆಯನ್ನು ಅಳವಡಿಸುವುದೂ ಮುಖ್ಯ. ಉಷ್ಣಾಂಶ ತೀವ್ರತೆಯ ದಿನಗಳಲ್ಲಿ ಜನರ ಅರೋಗ್ಯವನ್ನು ಕಾಪಾಡುವ ಬಗ್ಗೆಯೂ ಆದ್ಯತೆ ವಹಿಸಬೇಕೆಂದು ಅಧ್ಯಯನ ತಿಳಿಸಿದೆ.

RurbanIndia
RurbanIndia
RurbanIndia is a space to redesign, revalue and rejuvenate our Rurban Development. A comprehensive strategy and think tank towards our Rurbansphere. RurbanIndia is a webspace of EkaAneka Media.

LEAVE A REPLY

Please enter your comment!
Please enter your name here

Popular Articles