ನದಿ ಬನಾಯಾ ನಾಲಾ, ಕಿಸ್ನೆ ಕಿಯಾ ಗೋಟಾಲ, ಗೋಟಾಲ ಗೋಟಾಲ..ಸಿನಿಮಾ ಉತ್ಸಾಹಿ ನ ನಿತಿನ್ ದಾಸ್ ರೂಪಿಸಿರುವ 2.37 ನಿಮಿಷಗಳ ಹಾಡು ‘ಗೋಟಾಲ..ಗೋಟಾಲ..ನದಿ ಬನಾಯಾ ನಾಲಾ’ ಪುಣೆಯ ನದಿಗಳ ದುರಂತ ಕಥೆಯನ್ನು ಹೇಳುತ್ತದೆ. ದುರಂತಗಾಥೆಯನ್ನು ಅತ್ಯುತ್ತಮ ಸಂಗೀತ ಹಾಗೂ ಮಾಹಿತಿಯೊಂದಿಗೆ ನಾಗರಿಕರಿಗೆ ಮುಟ್ಟಿಸಲು ಪ್ರಯತ್ನಿಸಿದ್ದಾರೆ ನಿತಿನ್. ಈ ನದಿಯ ಹಾಡನ್ನು ನೋಡಿ ನಮ್ಮ ನದಿಯನ್ನು ನಾವು ನೋಡಿಕೊಳ್ಳಬೇಕು.
ಅವರ ಪದ್ಯದ ಆರಂಭದ ಸಾಲೇ ನದಿ ಬನಾಯಾ ನಾಲಾ ಎನ್ನುವುದೇ ನಮ್ಮ ನಗರೀಕರಣ, ನಗರ ಸ್ಥಳೀಯ ಸಂಸ್ಥೆಗಳ ಭ್ರಷ್ಟಾಚಾರ, ನಾಗರಿಕರ ಅಸೂಕ್ಷ್ಮತೆ ಎಲ್ಲವನ್ನೂ ಪ್ರತಿನಿಧಿಸುತ್ತದೆ. ಸಾಂಸ್ಕೃತಿಕ ನಗರಿಯ ಪ್ರಖ್ಯಾತಿಯನ್ನು ಹೊಂದಿರುವ ಪುಣೆಯಲ್ಲಿ ಏಳು ನದಿಗಳು ಇವೆಯಂತೆ. ಬಹಳ ಮುಖ್ಯವಾಗಿ ಪುಣೆ ನಗರವನ್ನು ಸೀಳಿಕೊಂಡು ಹೋಗುವ ಮುತಾ ಹಾಗೂ ಮೂಲ ಮುತಾ ನದಿಗಳು. ಇವು ಬಿಟ್ಟರೆ ಭೀಮಾ, ಪವನ, ರಾಮ್, ದೇವ್, ಇಂದ್ರಯಾನಿ ಹೀಗೆ ಹೆಸರುಗಳಿವೆ.
ನಿತಿನ್ ದಾಸ್ ರ ವಿಡಂಬನ ಕವಿತೆ ನಮ್ಮ ನದಿಗಳು ಸಾಯುತ್ತಿವೆ, ಕೋಟ್ಯಂತರ ರೂಪಾಯಿ ಸುರಿದರೂ ನೀರು ಶುದ್ಧವಾಗಲಿಲ್ಲ, ಬಿಳಿಯಾಗಲಿಲ್ಲ, ಇನ್ನೂ ಕಪ್ಪಾಗಿಯೇ ಇದೆ. ಅಧಿಕಾರಿಗಳು, ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಯೋಜನೆಯ ಕೋಟ್ಯಂತರ ರೂ. ಗಳು ಎಲ್ಲಿಗೆ ಹೋಗುತ್ತವೆ ಎಂಬುದೇ ತಿಳಿಯದಾಗಿದೆ ಎನ್ನುತ್ತಾ ಪ್ರಶ್ನೆಗಳನ್ನು ಇಟ್ಟಿದೆ.
ದೃಶ್ಯ ರೂಪಕದಲ್ಲಿ ನದಿಗಳ ನೀರನ್ನೂ ಪ್ರಯೋಗಶಾಲೆಯಲ್ಲಿ ಶೋಧಿಸಿ ಅದರ ಫಲಿತಾಂಶವನ್ನೂ ವಿವರಿಸಲಾಗುತ್ತದೆ. ಪುಣೆಯ ನದಿಗಳಲ್ಲಿನ ನೀರಿನ ಗುಣಮಟ್ಟ ಎಲ್ಲಿಯವರೆಗೆ ಕುಸಿದಿದೆ ಎಂದರೆ ಆ ನೀರು ಕುಡಿದರೆ ಕ್ಯಾನ್ಸರ್, ಕಿಡ್ನಿಸ್ಟೋನ್, ಕಾಲರಾ, ಜಾಂಡೀಸ್ ಹೀಗೆ ಎಲ್ಲ ಬಗೆಯ ಕಾಯಿಲೆಗಳೂ ಆವರಿಸಿಕೊಳ್ಳಬಹುದು ಎಂದು ಎಚ್ಚರಿಸುತ್ತದೆ.
ಅಧಿಕಾರಿಗಳ, ರಾಜಕಾರಣಿಗಳ ಭ್ರಷ್ಟಾಚಾರ ಹಾಗೂ ನಿಷ್ಕ್ರಿಯತೆಯನ್ನು ಬಯಲಿಗೆಳೆಯುತ್ತಲೇ, ನಾಗರಿಕರ ನಿಷ್ಕ್ರಿಯತೆಯನ್ನೂ ಪಟ್ಟಿ ಮಾಡುತ್ತದ. ಈ ನಗರದ ನಾಗರಿಕರಾದ ನಾವೂ ನಮ್ಮ ಕೊಡುಗೆಯನ್ನು ಕೊಡುತ್ತಲೇ ಇದ್ದೇವೆ. ನಮ್ಮ ಮನೆಯ ಕಸಗಳನ್ನೆಲ್ಲಾ ತಂದು ನದಿಗೆ ಸುರಿಯುತ್ತಿದ್ದೇವೆ ಎಂದು ಟೀಕಿಸಿದೆ. ನಿತ್ಯವೂ 700,000,000 ಲೀಟರ್ ಗಳಷ್ಟು ಕೊಳಚೆಯನ್ನು ನದಿಗೇ ಸೇರಿಸಿ ನಮ್ಮ ಮನೆಯಂಗಳ ಸ್ವಚ್ಛವಾಯಿತೆಂದು ಸಂಭ್ರಮಿಸುತ್ತಿದ್ದೇವೆ.
ಇವುಗಳನ್ನೂ ಓದಿ : ನದಿಗಳನ್ನು ಮಲಿನಗೊಳಿಸುವ ಚಟ
ನದಿ ಒಣಗುತ್ತಿದೆ, ಸೊರಗುತ್ತಿದೆ, ಕೊಳಚೆ ಗುಂಡಿಯಾಗಿದೆ. ಯಾರನ್ನು ಟೀಕಿಸುವುದು, ಎಲ್ಲರೂ ಕಾರಣರಾಗುತ್ತಿದ್ದೇವೆ. ದುಡ್ಡಿಗಳೆಲ್ಲ ಚರಂಡಿ ನೀರಿನಲ್ಲಿ ಹರಿದು ಹೋಗುತ್ತಿದೆ ಎಂಬ ವಿಷಾದವೂ ಇದೆ.
ಇನ್ನು ನದಿಗೆ ಬರುವ ನೀರಿನ ಮೂಲಗಳನ್ನು, ಹಾದಿಯನ್ನಾದರೂ ಚೆನ್ನಾಗಿ ಇಟ್ಟುಕೊಂಡಿದ್ದೇವೆಯೇ? ಅದೂ ಇಲ್ಲ. ನಮ್ಮ ಬಿಲ್ಡರ್ ಗಳು ಅವರ ಬುಲ್ಡೋಜರ್, ಯಂತ್ರಗಳನ್ನುಕಳುಹಿಸಿ ನಗರೀಕರಣಕ್ಕಾಗಿ ಕಾಡನ್ನು ಕಡಿಯತೊಡಗಿದ್ದಾರೆ. ನಾವೆಲ್ಲಾ ನೋಡುತ್ತಾ ಕುಳಿತಿದ್ದೇವೆ. ಕಾಡೆಲ್ಲ ಕಡಿದು ಈಗ ಕಾಂಕ್ರೀಟಿನ ಕಾಡಾಗಿದೆ. ಏಳೂ ನದಿಗಳೂ ಸಾಯುತ್ತಿವೆ. ಕಾಂಕ್ರೀಟಿನ ಕಾಡಿನಲ್ಲಿ ನಾವೀಗ ಬರ ಹಾಗೂ ನೆರೆ ಪ್ರವಾಹವನ್ನು ಬಿತ್ತಿ ಬೆಳೆಯತೊಡಗಿದ್ದೇವೆ.
ಪುಣೆ ಸ್ಥಳೀಯ ಆಡಳಿತ ಬರೀ ಕಾಂಕ್ರೀಟಿನ ಕಾಲು ಹಾದಿ ಮಾಡಲು 4, 700 ಕೋಟಿ ರೂ. ಗಳನ್ನು ವ್ಯಯಿಸಿತು. ಆದನ್ನು ಯೋಜಿತವಾಗಿ ನದಿಗಳ ಸ್ವಚ್ಛತೆಗೆ, ಚರಂಡಿ ನಿರ್ಮಾಣಕ್ಕೆ ಸುರಿದಿದ್ದರೆ ನದಿಯ ಒಂದಿಷ್ಟು ಭಾಗವಾದರೂ ಶುದ್ಧವಾಗಿರುತ್ತಿತ್ತು ಎಂಬುದು ಕಾಳಜಿ.
ಗೋಮಾಳಗಳನ್ನು, ನದಿ ಅಚ್ಚುಕಟ್ಟು ಪ್ರದೇಶಗಳನ್ನು ಒಂದಿಷ್ಟು ಭೂ ಖದೀಮರು ಕಬಳಿಸತೊಡಗಿದ್ದಾರೆ. ಯಾರೂ ಕೇಳುತ್ತಿಲ್ಲ. ಎಲ್ಲರೂ ಸೇರಿಕೊಂಡಿದ್ದಾರೆ. ನಾವೀಗ ಬರ ಮತ್ತು ನೆರೆಯನ್ನು ಬೆಳೆಯುತ್ತಿದ್ದೇವೆ. ಒಂದು ಅರ್ಥಪೂರ್ಣ ಪ್ರಸ್ತುತ ಸ್ಥಿತಿಯ ವಿಡಂಬನಾ ಗೀತೆಯಾಗಿ, ದುರಂತ ಕಥೆಯಾಗಿ ರೂಪುಗೊಂಡಿದೆ ಈ ಹಾಡು.
ಇವುಗಳನ್ನೂ ಓದಿ : ಕೊಡಗು ಮರುಗುತ್ತಿದೆ; ಕಾವೇರಿ ಸೊರಗುತ್ತಿದ್ದಾಳೆ !
ಪುಣೆಯ ಸ್ಥಳೀಯಾಡಳಿತವೇ ಹೇಳುವಂತೆ, ನದಿಗಳು ಸಂಪೂರ್ಣವಾಗಿ ಹಾಳಾಗಿವೆ. ಇದಕ್ಕೆ ನಗರೀಕರಣ, ಅಣೆಕಟ್ಟುಗಳ ನಿರ್ಮಾಣ, ಕೊಳಚೆಯ ಸೇರ್ಪಡೆ, ನದಿಗಳ ಸುತ್ತ ಆಗಿರುವ ವಸತಿ ನಿರ್ಮಾಣಗಳು, ಅತಿಕ್ರಮಣಗಳು- ಎಲ್ಲವೂ ಸೇರಿ ನದಿಗಳು ಸಾಯುತ್ತಿವೆ ಎನ್ನುತ್ತದೆ.
ಅದಕ್ಕೆ ನದಿ ಅಭಿವೃದ್ಧಿಗೂ ಯೋಜನೆ ರೂಪಿಸಿ ಜಾರಿಗೊಳಿಸತೊಡಗಿತು. ಮುಗಿದಂತೆ ತೋರುತ್ತಿಲ್ಲ. ನದಿಗಳ ಸುತ್ತಲಿನ ಅತಿಕ್ರಮಣ ತೆರವು ಮಾಡುವುದು, ನೆರೆ ತಡೆಗೆ ಗೋಡೆ ಕಟ್ಟುವುದು, ನದಿ ಪಾತ್ರವನ್ನು ಸ್ವಚ್ಛಗೊಳಿಸುವುದು ಇತ್ಯಾದಿ ಆಲೋಚನೆಗಳಿತ್ತು. ನದಿ ಪಾತ್ರಗಳ ಸುಂದರೀಕರಣದ ಲೆಕ್ಕದಲ್ಲಿ ಪುಣೆ ಸ್ಥಳೀಯಾಡಳಿತ ಸಾವಿರಾರು ಮರಗಳನ್ನು ಕಡಿಯಲು ಮುಂದಾಯಿತು. ಸದ್ಯಕ್ಕೆ ಪಾರಿಸರಿಕ ಅನುಮತಿ ಸಿಕ್ಕಿಲ್ಲ.
ನಾವು ಪರಿಸರ ಉಳಿಸಿ, ನದಿ ಉಳಿಸಿ ಎಂದರೆ ನೀವು ಮರಗಳನ್ನು ಕಡಿಯಲು ಹೋಗುತ್ತಿದ್ದೀರಲ್ಲ ಎಂದು ಚಿಪ್ಕೊ ಚಳವಳಿ ಮಾಡಿದ ನಾಗರಿಕರು ಸ್ಥಳೀಯಾಡಳಿತಕ್ಕೆ ಕೇಳುತ್ತಿದ್ದಾರೆ.