Tuesday, November 19, 2024

Top 5 This Week

spot_img

Related Posts

ಮತ್ತಷ್ಟು ಅಡ್ಡರಸ್ತೆಗಳನ್ನು ಸೃಷ್ಟಿಸಿಕೊಳ್ಳುತ್ತಾ…

ಬೆಳಕಿಗೆ ಭಾವವಿದೆ ಎಂದಾದರೆ, ಕತ್ತಲೆಗೆ ಜೀವವಿದೆ ಎಂದೆನಿಸುವುದು ನಗರಗಳಲ್ಲಿನ ಕಣ್ಣು ಕೋರೈಸುವ ನಿಯಾನ್‌ ಬೆಳಕಿನಲ್ಲಿ ಮುಳುಗಿದಾಗ. ಅಡ್ಡರಸ್ತೆಯ ಜಮಾನದಲ್ಲಿ ಕಳೆದು ಹೋಗುವ ಮೊದಲು ಕತ್ತಲೆಯನ್ನು ಪ್ರೀತಿಸುವುದನ್ನು ಕಳೆಯಬೇಕು. ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧಕೆ ಮನಸೋತು ಹೊರಟವರು ವಾಪಸು ಹೊರಡಬೇಕಿದೆ. 

*

ನಗರಗಳೆಂದರೆ ಕಣ್ಣು ಕೋರೈಸುವ ಬೆಳಕಿದ್ವಂತೆ. ಕತ್ತಲೆಯಲ್ಲಿ ಬದುಕುವುದು ಕಷ್ಟವೆಂದು ಬೆಳಕಿಗೆ ಬರಬಹುದು. ಅದು ಒಂದು ಸಹಜ ಇಚ್ಛೆಯೂ ಹೌದು. ಆದರೆ, ಅಲ್ಲಿನ ಪ್ರಕಾಶಮಾನವಾದ ಬೆಳಕೇ ನಮ್ಮ ಕಣ್ಣಿಗೆ ಕುಕ್ಕಿ ದೃಷ್ಟಿಯನ್ನು ಕಸಿದುಕೊಂಡು ಬಿಟ್ಟರೆ? ಇಂಥದ್ದೇ ಪರಿಸ್ಥಿತಿ ನಮ್ಮೆಲ್ಲರದ್ದು. ನಾವೆಲ್ಲ ಹೀಗೆ ಕತ್ತಲೆಯಿಂದ ಬೆಳಕಿನ ಮೋಹಕ್ಕೆ ಜಿಗಿದು ಬಂದವರು.  ಹಾಗೆಂದು ಇದು ನಿಜಕ್ಕೂ ಹಳಹಳಿಕೆಯಲ್ಲ.

ಭವಿಷ್ಯದ ಜನಾಂಗ ಪೂರ್ತಿ ನಗರವಾಸಿಗಳೇ. ಅವರಿಗೆ ಹಳ್ಳಿಯವರು ಎಂಬ ಟ್ಯಾಗ್‌ ಲೈನ್‌ ಇರುವುದಿಲ್ಲ. ಒಂದು ಲೆಕ್ಕದಲ್ಲಿ ಅದು ಒಳ್ಳೆಯದೆನಿಸಬಹುದು. ಯಾಕೆಂದರೆ ನಗರದಲ್ಲಿ ಉದ್ಯೋಗ ಹುಡುಕಿಕೊಂಡು ಪ್ರತಿ ಕಂಪೆನಿಯಲ್ಲಿ ಹೋದಾಗ, ಅಲ್ಲಿದ್ದ ಸಂದರ್ಶನ ನಡೆಸುವವರು, “ನಿಮ್ಮ ಊರು’ ಎಂದು ಕೇಳಿದಾಗ, ನಾವು ನಾಲ್ಕೈದು ಸ್ಟಾಪ್‌ (ನಿಲ್ದಾಣ)ಗಳನ್ನು ಹೇಳಬೇಕಿತ್ತು. ಮೊದಲು ನಮ್ಮ ಹಳ್ಳಿ, ಗೊತ್ತಾಗದಿದ್ದರೆ, ನಮ್ಮ ತಾಲೂಕು, ಅದೂ ಕಷ್ಟವೆನಿಸಿದರೆ ಜಿಲ್ಲೆ..ಇಲ್ಲಿಯವರೆಗೂ ಬಂದು ನಿಲ್ಲುತ್ತಿದ್ದೆವು. ಇಂಥದೊಂದು ಸಮಸ್ಯೆಯಿಂದ ಭವಿಷ್ಯದ ಜನಾಂಗ ಮುಕ್ತಗೊಳ್ಳಬಹುದು. ಆದರೆ, ಹಳ್ಳಿಯವರಾಗಿದ್ದ ನಮಗೆ ಮತ್ತೂಂದು ಲಾಭವಿತ್ತು. ಅದೆಂದರೆ ಹೊಂದಾಣಿಕೆ. ಅದು ನಗರ ಜೀವನದಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ.

ಹಳ್ಳಿಯಿಂದ ಬಂದ ನಮಗೆ ಮನುಷ್ಯರೊಂದಿಗೆ ಬೆರೆಯುವುದಕ್ಕೆ ಯಾವ ಸಮಸ್ಯೆಯೂ ಇರಲಿಲ್ಲ. ಅಣ್ಣನೋ, ತಮ್ಮನೋ, ಅಕ್ಕನೋ, ತಂಗಿಯೋ ಎಂಬ ಸಂಬಂಧವಾಚಕ ಶಬ್ದಗಳು ಸಾಕಾಗಿತ್ತು. ಜತೆಗೆ ನಮಗೂ ಕೀರ್ತಿಯಿರಲಿ, ತಲೆಗೊಂದು ಕಿರೀಟವೂ ಇರಲಿಲ್ಲ. ಹಾಗಾಗಿ ಅದು ದೊಡ್ಡ ಸಮಸ್ಯೆಯೂ ಎನಿಸುತ್ತಿರಲಿಲ್ಲ. ನನ್ನದೇ ಕಥೆ ಹೇಳುವುದಾದಾರೆ, ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಹೋದ ನನಗೆ ಐದು ದಿನದಲ್ಲಿ ನಮ್ಮೂರೇ ಆಗಿತ್ತು. ಇದರರ್ಥ ನಗರಕ್ಕೆ ಹೊಂದಿಕೊಂಡೆ ಎಂಬುದಕ್ಕಿಂತಲೂ, ಅಲ್ಲಿದ್ದವರೊಂದಿಗೆ ಹೊಂದಿಕೊಂಡೇ ಎಂಬುದು ಮುಖ್ಯ. ಯಾವುದೇ ಭೌಗೋಳಿಕ ಪ್ರದೇಶಕ್ಕೆ ಚಲನಶೀಲತೆ ಇರುವುದಿಲ್ಲ ; ಅಲ್ಲಿದ್ದ ಜನರು ಚಲನಶೀಲತೆಯನ್ನು ಒದಗಿಸುತ್ತಾರೆ.

ಕಲ್ಪನೆಗಳು ನಮ್ಮನ್ನು ಬೆಳೆಸಿದವು

ಇಡೀ ಜನದಟ್ಟಣೆಯ ನಗರದಲ್ಲಿ ನಮ್ಮನ್ನು ಬೆಳೆಸಿದ್ದು ಕಲ್ಪನೆಗಳು, ನಮ್ಮ ಊರಿನ ನೆನಪುಗಳು, ಕಾಡು, ಬೆಟ್ಟ, ನದಿ ಹೊಳೆಗಳು. ಅದರೊಂದಿಗೆ ನಮ್ಮೂರು ಅಲ್ಲಿದೆ ಎಂಬ ಭಾವವೂ ನಗರದ ಬಗೆಗಿನ ಮೋಹವನ್ನು ಕಡಿಮೆಗೊಳಿಸಿದೆ. ಬೆಂಗಳೂರು ಮೆಜೆಸ್ಟಿಕ್‌ನಲ್ಲಿ ಮೊದಲ ಬಾರಿ ಬಸ್ಸಿನಿಂದ ಇಳಿದಾಗ ಕಂಗಾಲಾಗಿ ಹೋಗಿದ್ದೆ. ಇಲ್ಲಿ ಹೇಗೆ ಬದುಕುವುದಪ್ಪಾ ಎಂಬ ಆತಂಕ ಕಾಡತೊಡಗಿತ್ತು. ಅಣ್ಣ ಹೇಳಿದ ಬಸ್ಸು ನಂಬರ್‌ ಹಿಡಿದು, ಕಂಡಕ್ಟರ್‌ ಗೆ ಚೀಟಿಯಲ್ಲಿ ಬರೆದುಕೊಂಡಿದ್ದ ನಗರದ ಹೆಸರು ಹೇಳಿ, ಸ್ಟಾಪ್‌ ಬಂದ ಕೂಡಲೇ ತಿಳಿಸಿಬಿಡಿ ಎಂದು ಒಂದು ಮನವಿ ಹಾಕಿ ಸೀಟಿನಲ್ಲಿ ಕುಳಿತಿದ್ದೆ. ಸ್ವಲ್ಪ ಹೊತ್ತಿನಲ್ಲಿ ಇಳಿಯುವಾಗ ಅಣ್ಣ ಬಂದಿದ್ದ, ಮನೆಗೆ ಕರೆದೊಯ್ದಿದ್ದ. ಆಗ ನೆನಪಿಗೆ ಇರಲೆಂದು ಲ್ಯಾಂಡ್‌ ಮಾರ್ಕ್‌ ನೋಡಿದರೆ ಬರೀ ಕಟ್ಟಡ. ಎಡ ಮತ್ತು ಬಲ ಬದಿಯಲ್ಲಿ ಕಟ್ಟಡಗಳ ರಾಶಿ. ಅದರೊಳಗೆ ಯಾವ ಕಟ್ಟಡವನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದೇ ಗೊಂದಲಕ್ಕೆ ಸಿಲುಕಿದ್ದು ಇದೆ.

ಊರಿನಲ್ಲಿ ಇಡೀ ಪ್ರದೇಶಕ್ಕೆ ಇರುವುದು ನಾಲ್ಕೈದು ಮನೆ. ಆ ಪೈಕಿ ಕನಿಷ್ಠ ಎರಡು ಮನೆ ಸಂಬಂಧಿಕರದ್ದು, ಉಳಿದ ಎರಡು ನೆರೆಯವರದ್ದು. ಯಾವ ಗೊಂದಲವೂ ಇಲ್ಲ. ಮುಖ್ಯ ರಸ್ತೆಯಿಂದ ಇಳಿದು ಒಂದೇ ರಸ್ತೆ ಹಿಡಿದರೆ ಅದರ ಕೊನೆ ತುದಿಯಲ್ಲಿ ನಮ್ಮ ಮನೆ. ಆ ತುದಿಯಿಂದಲೇ ಇನ್ನೊಂದು ಟಿಸಿಲೊಡೆದು ಹೋದರೆ ಮತ್ತೂಂದು ಊರು-ಪ್ರದೇಶ. ನಿಜಕ್ಕೂ ಈ ನಗರಗಳಲ್ಲಂತಲ್ಲ. ಇಲ್ಲಿ ಒಂದು ಟಿಸಿಲಿಗೇ  ನೂರು ಟಿಸಿಲು. ಅದಕ್ಕೆ ಒಂದಿಷ್ಟು ಹೆಸರು. ಅವೆಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕೆಂದರೆ, ಸುಸ್ತಾಗುವುದು ಸಹಜ. ಉದಾಹರಣೆಗೆ ಬೆಂಗಳೂರಿನ ಬನಶಂಕರಿಯನ್ನೇ ತೆಗೆದುಕೊಳ್ಳಿ, ಎಷ್ಟೊಂದು ಟಿಸಿಲುಗಳು, ಎಷ್ಟೊಂದು ಕೊಂಬೆಗಳು.

ಅಡ್ಡರಸ್ತೆಯ ಲೆಕ್ಕಾಚಾರ

ಮರದ ಕಲ್ಪನೆಗೂ ನಗರದ ಕಲ್ಪನೆಗೂ ಬಹಳ ಸಾಮ್ಯವಿದೆ. ಅದಕ್ಕೇ ನಾನು ಟಿಸಿಲೆಂದು ಉಲ್ಲೇಖೀಸಿದ್ದು. ಈ ನಗರಗಳಲ್ಲಿನ ಅಡ್ಡ ರಸ್ತೆಯ ಕಲ್ಪನೆಯೇ ಒಂದಿಷ್ಟು ಮಜಾ ಕೊಡುವಂಥದ್ದು. ಒಂದನೇ ಅಡ್ಡರಸ್ತೆಯಿಂದ ಹಿಡಿದು 20, 30 ರವರೆಗೂ ಹೋದ ಪರಂಪರೆಯಿದೆ. ಅದರಲ್ಲಿ ಅಡ್ಡದೊಳಗೆ ಬರುವ ಮತ್ತೂಂದು ಸಣ್ಣ ಅಡ್ಡಕ್ಕೆ ಇಂಗ್ಲಿಷಿನ ‘ಎ’,’ಬಿ’ ಎಂಬೆಲ್ಲಾ ಉಪನಾಮಗಳನ್ನು ಕೊಟ್ಟು, ಒಟ್ಟೂ  ರಸ್ತೆಯನ್ನು ಬೆಳೆಸುವ ಕ್ರಮ ವಿಚಿತ್ರವಾದುದೇ. ಹಾಗಾಗಿ ಅಡ್ಡರಸ್ತೆಗಳು ನೆನಪಿದ್ದರೆ ಮಾತ್ರ ನಗರದಲ್ಲಿ ಬಚಾವು. ನಾನೂ ಬೆಂಗಳೂರಿಗೆ ಮೊದಲ ಬಾರಿಗೆ ಬರುವಾಗ ನನ್ನಣ್ಣನೂ ಕೊಟ್ಟಿದ್ದ ಟಿಪ್ಸ್‌ ಇದೇ.

‘ನೀನು ಮನೆ ನಂಬರ್‌ ಮತ್ತು ಕ್ರಾಸ್‌ ನಂಬರ್‌ ಮರೆಯಬೇಡ. ಬೇರೆ ಏನು ಮರೆತರೂ ಪರವಾಗಿಲ್ಲ’ ಎಂದಿದ್ದ. ಅದೆಷ್ಟು ನಿಜವೆಂದರೆ,ನನ್ನ ಚಿಕ್ಕಪ್ಪ ನನ್ನ ಹಾಗೆಯೇ ಬೆಂಗಳೂರಿಗೆ ಬಂದವನು ನನ್ನಣ್ಣನನ್ನು ಹೆಸರು ಹಿಡಿದು ಹುಡುಕಲು ಹೊರಟು ಬೇಸ್ತು ಬಿದ್ದಿದ್ದ. ನಮ್ಮ ಮನೆ ಇರುವ ಹಿಂದಿನ, ಮುಂದಿನ ಬೀದಿಗಳಿಗೇನು? ಎಷ್ಟೋ ಬಾರಿ ನಮ್ಮ ಮನೆಯ ಸಾಲಿನ ಮೂರನೇ ಮನೆಯವರಿಗೂ ನಾವು ಪರಿಚಯ ಇರುವುದಿಲ್ಲ. ನಮಗೂ ಅಷ್ಟೇ. ಹಳ್ಳಿಯಲ್ಲಿ ಅಡ್ಡ ನಾಮಗಳನ್ನು (ಸುಂದರಿ ಕಾಕಾ, ಲಚ್ಚಿ ಮಾಮ ಇತ್ಯಾದಿ) ಹಿಡಿದುಕೊಂಡೇ ಅವರ ಊರನ್ನೇ ಹುಡುಕಬಹುದು ಎನ್ನಿ. ನಿಜಕ್ಕೂ ಇದು ಹಳ್ಳಿಯ ಬಗೆಗಿನ ಮೋಹವಲ್ಲ ; ಆದರೆ ಸಾಧ್ಯತೆಗಳು. ಈ ಕಾಡು, ಗದ್ದೆ, ಮನೆಯ ಸುತ್ತಲಿನ ಸಂಬಂಧಗಳು, ನದಿ, ಸಮುದ್ರ ಎಲ್ಲವೂ ಬಹುಶಃ ನಮ್ಮನ್ನು  ನಗರವೆಂಬ ಕುಲುಮೆಯಲ್ಲಿ ಹೊಸರೂಪ ಪಡೆಯಲು ಬಿಟ್ಟಿರಲಾರವು.

ಪ್ರತಿ ಹಬ್ಬಕ್ಕೂ ನೋಡಿದ್ದೀರಾ?

ಇದು ನಗರದಲ್ಲಿ ಕಂಡು ಬರುವ ನಿಚ್ಚಳ ನೋಟ. ಪ್ರತಿ ದೊಡ್ಡ ಹಬ್ಬಕ್ಕೂ ಇಡೀ ನಗರವೇ ಖಾಲಿಯಾಗುವುದನ್ನು ನೋಡಬೇಕು. ಎಂದೂ ನೋಡದಿದ್ದರೆ ಯುಗಾದಿಗೋ, ಗಣೇಶ ಚತುರ್ಥಿಗೋ, ದೀಪಾವಳಿಗೋ ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ಸ್ಟಾಂಡ್‌ ನಲ್ಲಿ ನಿಂತು ನೋಡಿ. ಸಂಜೆ 5 ಗಂಟೆಯಾಗುತ್ತಿದ್ದಂತೆ ಬಸ್‌ ಸ್ಟಾಂಡ್‌ ನೆರೆ ತುಂಬಿಕೊಂಡಂತೆ ಜನರಿಂದ ತುಂಬಿಕೊಳ್ಳುತ್ತದೆ. ಗಂಟೆ ಎಂಟಾಗುವ ವೇಳೆಗೆ ನೀವು ಕಾಲಿಡಲೂ ಜಾಗವಿರುವುದಿಲ್ಲ. ಇರುವ ಎಲ್ಲ ಬಸ್‌ ಗಳೂ ತುಂಬಿ ತುಳುಕುತ್ತಿರುತ್ತವೆ. ಎಷ್ಟೋ ವಿಶೇಷ ಬಸ್‌ ಗಳನ್ನೂ ಬಿಟ್ಟರೂ ಸಾಕಾಗದು. ಬೆಳಗಿನ ಜಾವದವರೆಗೂ ಬಸ್ಸು ನಿಲ್ದಾಣ ಖಾಲಿಯಾಗುವುದಿಲ್ಲ.

ಒಬ್ಬರೇ, ಇಬ್ಬರೇ..ರಾಶಿ ರಾಶಿ ಜನ. ಪ್ರತಿ ಹಬ್ಬ ಬಂದಾಗಲೂ ಇದನ್ನು ಕಂಡಾಗ, ಇಡೀ ನಗರವೇ ಎರಡು ದಿನಕ್ಕೆ ಖಾಲಿಯಾಗುತ್ತಿದೆ ಎಂದೆನಿಸುತ್ತಿತ್ತು. ಹಬ್ಬ ಮುಗಿದ ಎರಡು ದಿನದ ಬಳಿಕ ಬೆಳಗ್ಗೆ ಅದೇ ಮೆಜೆಸ್ಟಿಕ್‌ ನಲ್ಲಿ ರಾಶಿ ರಾಶಿ ಜನ. ಎಲ್ಲ ತಮ್ಮ ಊರಿನ ವ್ಯಾಪಾರ ಮುಗಿಸಿ ವಾಪಸ್‌. ಆಗ ಅವನ ಮುಖದಲ್ಲಿ ಊರು ಬಿಟ್ಟು ಬಂದದ್ದಕ್ಕೆ ಬೇಸರವಿದ್ದರೂ, ಹೊಸ ಹೊಳಪು ಕಾಣುತ್ತಿತ್ತು. ಬ್ಯಾಟರಿ ರೀಚಾರ್ಜ್‌ ಎಂಬ ನಗರದ ಭಾಷೆಯಂತೆ ರೀಚಾರ್ಜ್‌ ಆಗಿಬಿಡುತ್ತಿದ್ದೆವು. ಅಂಥದೊಂದು ಶಕ್ತಿಯೇ ನಮ್ಮ ಊರಿನಲ್ಲಿ ಅದಮ್ಯವಾಗಿ ಹರಿಯುತ್ತಿದೆಯೇನೋ ಎಂದು ಅನ್ನಿಸುತ್ತಲೇ ಇರುತ್ತದೆ.

ನಗರದಲ್ಲಿದ್ದರೂ ನಮ್ಮೂರಿರಲಿ

ಇಂಥದೊಂದು ಭಾವ ಯಾವಾಗಲೂ ಕಾಡುತ್ತಲೇ ಇರುತ್ತದೆ. ನಾವು ಯಾವುದೇ ನಗರದಲ್ಲಿದ್ದರೂ ನಮ್ಮೂರು, ನಮ್ಮ ಮನೆ ಎಂಬುದೇನಾದರೂ ಬೇರೆಲ್ಲೂ (ನಾವಿರುವ ನಗರದಿಂದ ಹೊರತಾಗಿ) ಇದ್ದರೆ ಇಟ್ಟುಕೊಳ್ಳುವುದು ಒಳಿತು. ಅದು ರಿಯಲ್‌ ಎಸ್ಟೇಟ್‌ ನ ಲೆಕ್ಕಾಚಾರದಿಂದಲ್ಲ ; ನಮ್ಮ ಬ್ಯಾಟರಿ ರೀಚಾರ್ಜ್‌ ಸ್ಟೇಷನ್‌ ಆಗಿರಲಿ. ಇಲ್ಲದಿದ್ದರೆ ಒಂದು ಬಗೆಯ ಅನಾಥ ಭಾವ ಕಾಡುವುದುಂಟು.

ಗೆಳೆಯನೊಬ್ಬನಿದ್ದ ; ನಗರದಲ್ಲಿ ಹುಟ್ಟಿ ನಗರದಲ್ಲೇ ಬೆಳೆದವನು ಮತ್ತು ಇದ್ದವನು. ಅವನು ಯಾವಾಗಲೂ ನಾವು ಊರಿಗೆ ಹೊರಟಾಗಲೆಲ್ಲಾ ಕೇಳುತ್ತಿದ್ದ ಸಾಮಾನ್ಯ ಪ್ರಶ್ನೆಯೊಂದಿತ್ತು. ‘ಏನು ಮಾರಾಯ, ಎರಡು ತಿಂಗಳಿಗೊಮ್ಮೆ ಊರು ಅಂತ ಹೊರಟು ಬಿಡ್ತೀಯಾ? ಏನಿರುತ್ತೋ ಅಲ್ಲಿ?’.

ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ, ದಾಟಿ ಬಂದು ಬೇಲಿಸಾಲ ಮೀಟಿ ಹಳೆಯ ಮಧುರ ನೋವ..ಎಲ್ಲಿ ಜಾರಿತೋ? ಬೆಳಕಿಗೆ ಭಾವವಿದ್ದರೆ, ಕತ್ತಲೆಗೆ ಜೀವ ಇದೆ ಎನಿಸುವುದು ಹೀಗೆಯೇ ನಮ್ಮ ಊರಿಗೆ ಹೋಗುವ ಬಸ್ಸು ಹತ್ತಿದಾಗ.

ಇರುವ ನಗರಗಳೊಳಗೆ ಹಳ್ಳಿಗಳನ್ನು ಸೃಷ್ಟಿಸಿಕೊಳ್ಳುವುದು ಹೇಗೆ ಎಂಬುದನ್ನು ನಾವೀಗ ಹುಡುಕಿಕೊಳ್ಳಬೇಕು. ಅಂದರೆ ಅಡ್ಡರಸ್ತೆಯೊಳಗೆ ಮತ್ತೂಂದು ಅಡ್ಡರಸ್ತೆ !

(ಲೇಖನ ಸೌಜನ್ಯ : ಉದಯವಾಣಿ)

RurbanIndia
RurbanIndia
RurbanIndia is a space to redesign, revalue and rejuvenate our Rurban Development. A comprehensive strategy and think tank towards our Rurbansphere. RurbanIndia is a webspace of EkaAneka Media.

LEAVE A REPLY

Please enter your comment!
Please enter your name here

Popular Articles