ಅರೆಪಟ್ಟಣಗಳು ಯಾಕೆ ಬೆಳೆಯಬೇಕು?
ಇಂಥದೊಂದು ಪ್ರಶ್ನೆಯನ್ನು ತಲೆಯಲ್ಲಿಟ್ಟುಕೊಂಡು ನಮ್ಮ ನಗರಗಳನ್ನು ಒಮ್ಮೆ ಸುತ್ತಿ ಬನ್ನಿ. ಆಗ ಎಲ್ಲ ಕಾರಣಗಳೂ ಸಿಗಬಹುದು.
ಬೆಂಗಳೂರನ್ನು ಒಮ್ಮೆ ಸುತ್ತಿ ಬರೋಣ. ಬರೀ ಅಂಕಿ ಅಂಶಗಳನ್ನು ಕಂಡು ಭಯಭೀತಗೊಳ್ಳುವುದು ಬೇಡ. ಅದಕ್ಕಿಂತ ಹೆಚ್ಚಾಗಿ ಬೆಂಗಳೂರಿನ ರಸ್ತೆಗಳಲ್ಲಿ ಒಮ್ಮೆ ನಡೆದಾಡಿದರೂ ಸರಿ ಅಥವಾ ರಿಕ್ಷಾ ಹಿಡಿದು ಸಂಚರಿಸಿದರೂ ಸರಿ.
ವಾರದ ದಿನಗಳಲ್ಲಿ ಅದರಲ್ಲೂ ಬೆಳಗ್ಗೆ 8 ರಿಂದ 11 ರವರೆಗೆ ಒಂದು ಕಿ.ಮೀ ಕ್ರಮಿಸಲಿಕ್ಕೆ ಕಡಿಮೆ ಎಂದರೂ ಮೂವತ್ತು ನಿಮಿಷ ಅಗತ್ಯವಿದೆ. ಇದು ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ. ಬಹಳ ಮುಖ್ಯವಾಗಿ ವಸತಿ ಪ್ರದೇಶಗಳಿಂದ ವಾಣಿಜ್ಯ ಚಟುವಟಿಕೆ, ಆಫೀಸ್‌ಗಳ ಕಾಯ ನಿರ್ವಹಿಸುವ ಸ್ಥಳದಲ್ಲಿ ತಗಲುವ ಸಮಯ. ಇದೇ ಮಾತು ಸಂಜೆ 4 ರಿಂದ 7 ರವರೆಗೂ ಅನ್ವಯವಾಗುತ್ತದೆ. ಬಳಿಕ ನಿಧಾನವಾಗಿ ವಾಹನ ಸಂಚಾರ ದಟ್ಟಣೆ ಕಡಿಮೆಯಾಗತೊಡಗುತ್ತದೆ. ಆದರೆ ಈ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಬಹುತೇಕ ನಗರದ ಹೃದಯ ಹಾಗೂ ಅದಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಈ ದಟ್ಟಣೆ ಇದ್ದದ್ದೇ.
ಮುಂಬಯಿಗೆ ಕಡೆ ಪ್ರಯಾಣ ಬೆಳೆಸಿದರೆ ಅಲ್ಲಿಯೂ ಇದೇ ಪರಿಸ್ಥಿತಿ ಇದೆ. ಸ್ಥಳೀಯವಾಗಿ ನಗರ ರೈಲು ಸೇವೆ ಇರುವ ಕಾರಣ ರಸ್ತೆಯಲ್ಲಿ ವಾಹನ ಸಂಚಾರದ ಒತ್ತಡ ಕೊಂಚ ಕಡಿಮೆ ಇದೆ ಎನ್ನಿಸಬಹುದು. ಆದರೆ ನಿಜವಾಗಿ ಹೇಳುವುದಾದರೆ ರಸ್ತೆಗಳ ಮೇಲೂ ವಾಹನಗಳ ಸಂಖ್ಯೆ ಕಡಿಮೆ ಏನೂ ಇಲ್ಲ. ಲೋಕಲ್ ರೈಲು ಈ ರಸ್ತೆಗಳ ಮೇಲೆ ಬೀಳಬಹುದಾದ ಮತ್ತಷ್ಟು ಒತ್ತಡವನ್ನು ಕಡಿಮೆ ಮಾಡಿದೆ. ಇದನ್ನು ಹೊರತುಪಡಿಸಿದಂತೆ ವಾಹನಗಳ ದಟ್ಟಣೆಯನ್ನು ಅನುಭವಿಸಲೇಬೇಕು.
ದಿಲ್ಲಿಯಲ್ಲೂ ವಾಹನ ಸಂಚಾರ ದಟ್ಟಣೆ ಕೆಲವೊಮ್ಮೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುವುದುಂಟು. ಒಂದಿಷ್ಟು ಕೈಗಾರಿಕ ಪ್ರದೇಶಗಳು, ಹೊಸ ವಸತಿ ಸಮುಚ್ಚಯಗಳು, ಕೈಗಾರಿಕೆಗಳನ್ನು ದಿಲ್ಲಿಯ ಹೊರವಲಯದಲ್ಲಿ ಸ್ಥಾಪಿಸಿರುವ ಕಾರಣದಿಂದಲೂ ಅನುಕೂಲವಾಗಿದೆ. ನಗರದ ಒಂದಷ್ಟು ಅಂಶದ ವಾಹನ ಸಂಚಾರ ದಟ್ಟಣೆಯನ್ನ ಇದು ನಿಭಾಯಿಸುತ್ತಿದೆ.
ಚೆನ್ನೈ, ಕೋಲ್ಕತ್ತಾಗಳಲ್ಲಿಯೂ ಟ್ರಾಫಿಕ್ ಜಾಮ್ ಗೆ ಕೊರತೆಯಿಲ್ಲ. ಅಲ್ಲಿಯೂ ವಾಹನ ದಟ್ಟಣೆ ಸಮಸ್ಯೆ ಹಲವು ಸಮಸ್ಯೆಗಳಿಗೆ ಮೂಲವಾಗುತ್ತಿದೆ. ಎಷ್ಟೋ ನಗರಗಳಲ್ಲಿ ಇವೆಲ್ಲವೂ ಭವಿಷ್ಯದ ಸಮಸ್ಯೆಗಳೆಂದು ಕೊಂಡವರು ಹಲವರು. ನಿಜವಾಗಲೂ ಹೇಳುವುದಾದರೆ ಆ ಸಮಸ್ಯೆಗಳೆಲ್ಲ ಪೆಡಂಭೂತಗಳಂತೆ ಬೆಳೆದು ಬಿಟ್ಟಿವೆ.
ಇವುಗಳನ್ನು ಅರ್ಥೈಸಿಕೊಂಡು ನಮ್ಮ ಪಟ್ಟಣಗಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ ಸುತ್ತಲಿನ ಅರೆ ಪಟ್ಟಣಗಳ, ಅರೆ ನಗರಗಳಲ್ಲಿ ಅಭಿವೃದ್ಧಿಗೊಳಿಸಲೇಬೇಕು. ಇದು ಪಂಚವಾರ್ಷಿಕ ಯೋಜನೆಯಂತಾಗಬಾರದು. ನಿರ್ದಿಷ್ಟ ಕಾಲಮಿತಿಯೊಳಗೆ ಜಾರಿಗೊಳಿಸಬೇಕು. ಸಣ್ಣ ಸಣ್ಣ ಯೋಜನೆಗಳಾದರೂ ಅಡ್ಡಿಯಿಲ್ಲ ಆದರೆ ಜನರ ಅಗತ್ಯವನ್ನು ಅನುಸರಿಸಿಕೊಂಡು ಭವಿಷ್ಯಕ್ಕೆ ನಗರಗಳನ್ನು ಸಜ್ಜುಗೊಳಿಸಬೇಕು. ಅದಕ್ಕೆಂದೇ ಈ ಅರೆಪಟ್ಟಣಗಳು ಬೆಳೆಯಬೇಕಿದೆ,
ಇವುಗಳೇ ಭವಿಷ್ಯದ ನಗರಗಳು. ಇವುಗಳು ಈಗಿನ ನಗರಗಳಾಂತಗದಿರಲು ಈಗಿನಿಂದಲೇ ಯೋಚಿಸಬೇಕು, ಯೋಜಿಸಬೇಕು. ಕ್ರಿಯಾಶೀಲವಾಗಬೇಕು.
ಇಲ್ಲವಾದರೆ ಅರೆ ನಗರಗಳೂ ಊಹೆಗಿಂತ ಹೆಚ್ಚು ಊದಿ ಒಂದು ದಿನ ಸ್ಫೋಟಗೊಳ್ಳುತ್ತವೆ.
ಅದಕ್ಕಿಂತಲೂ ಅಪಾಯವೆಂದರೆ ನಗರ ವಲಸೆಯನ್ನು ತಪ್ಪಿಸಲು ಸಾಧ್ಯವೇ ಇರದು. ಈ ದೃಷ್ಟಿಯಿಂದಲೇ ಅರೆ ಪಟ್ಟಣಗಳು ಆರೋಗ್ಯಕರವಾಗಿ ಬೆಳೆಯುವುದು ಮುಖ್ಯ ಎಂಬುದು ಪರಿಣಿತರ ಅಭಿಮತ.