ಮುಂಬಯಿ: ಯಾಕೋ ಈರುಳ್ಳಿ ಬೆಳೆಗಾರರ ಕಷ್ಟ ಬಗೆಹರಿಯುವಂತೆ ಕಾಣುತ್ತಿಲ್ಲ. ಹಾಗಾಗಿ ಸಾಮಾನ್ಯವಾಗಿ ಗ್ರಾಹಕರು ಈರುಳ್ಳಿಯನ್ನುಕತ್ತರಿಸುವಾಗ ಪಡುವ ಸಂಕಟ-ಸಂಕಷ್ಟವನ್ನು ಬೆಳೆಗಾರರು ಅದನ್ನು ಮಾರುವಾಗ ಎದುರಿಸುತ್ತಿದ್ದಾರೆ.
ಪ್ರತಿ ಬಾರಿ ಈರುಳ್ಳಿ ಬೆಳೆ ಕೈಗೆ ಬರುವಷ್ಟರಲ್ಲಿ ಇಲ್ಲವೇ ದರ ಕುಸಿದಿರುತ್ತದೆ, ಇಲ್ಲವೇ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ಹವಾಮಾನ, ಮಳೆ ಇತ್ಯಾದಿ ಕಾರಣಗಳಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆದಿರುವುದಿಲ್ಲ. ಇದು ಹಲವು ವರ್ಷಗಳಿಂದ ಈರುಳ್ಳಿ ಕ್ಷೇತ್ರದಲ್ಲಿ ಕಾಣುತ್ತಲೇ ಇದ್ದೇವೆ.
ಈಗಲೂ ಮಹಾರಾಷ್ಟ್ರದ ಈರುಳ್ಳಿ ಬೆಳೆಗಾರರ ಕಥೆ ಕಣ್ಣೀರಿನದ್ದೇ ಆಗಿದೆ. ಹೊಸ ವರ್ಷಕ್ಕೆ ಜಗತ್ತು ಸ್ವಾಗತಿಸುವಾಗ ಈರುಳ್ಳಿ ಬೆಳೆಗಾರರು ಇಷ್ಟೊಂದು ದರ ನಷ್ಟ ಮುಂದಿನ ವರ್ಷ ಆಗದಿರಲಿ ಎಂದು ಬೇಡಿಕೊಳ್ಳುತ್ತಿದ್ದರು ಎಂದುಕೊಳ್ಳಬಹುದು. ಯಾಕೆಂದರೆ, ಪ್ರತಿ ವಾರವೂ ದರ ಕುಸಿತಕ್ಕೆ ಕಾರಣವಾಗುತ್ತಿದೆ. ಎರಡು ವಾರದಲ್ಲಿ ಸುಮಾರು ಶೇ. ೬೫ ರಷ್ಟು ಪ್ರಮಾಣದಲ್ಲಿ ದರ ಕುಸಿತವಾಗಿದೆ.
ಇದು ಸುಳ್ಳಲ್ಲ : ರಾತ್ರಿಯಾದರೂ ನಮ್ಮ ನಗರಗಳು ತಣ್ಣಗಾಗುತ್ತಿಲ್ಲ !
ಏಷ್ಯಾದ ಬಹಳ ದೊಡ್ಡ ಈರುಳ್ಳಿ ಮಾರುಕಟ್ಟೆಯಾದ ಲಸ್ಲೊಗನ್ ಮಂಡಿಯಲ್ಲಿ ಈರುಳ್ಳಿಯನ್ನು ಕೇಳುವವರೇ ಇಲ್ಲ ಎನ್ನಬಹುದು. ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಕ್ವಿಂಟಾಲ್ ಗೆ 3,500 ರೂ. ಗೆ ಮಾರಾಟವಾಗುತ್ತಿತ್ತು. ಬೆಳೆಗಾರರೂ ತುಸು ಆರಾಮದಲ್ಲಿದ್ದರು. ಆದರೆ ಆ ದರ ಕೆಲವೇ ದಿನಗಳಲ್ಲಿ ಸುಮಾರು 1,200 ರೂ. ಗೆ ಕುಸಿಯಿತು. ಅಂದರೆ ಕೆ.ಜಿ ಗೆ 12 ರೂ. ಗಳು ಮಾತ್ರ. ಕೆಲವು ಬೆಳೆಗಾರರು ಕ್ವಿಂಟಾಲ ಗೆ 800 ರೂ, ಗೆ ಇಳಿದಿತ್ತು. ಆದರೆ ವಾಸ್ತವವಾಗಿ ಕ್ವಿಂಟಾಲ್ ಈರುಳ್ಳಿ ಬೆಳೆಯಲು 2,500 ರೂ. ವರೆಗೆ ವೆಚ್ಚವಾಗುತ್ತಿದೆ.
ನವೆಂಬರ್ ನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಇದ್ದ ಕಾರಣಕ್ಕೋ ಏನೋ ಈರುಳ್ಳಿ ದರ ಕಿಲೋ ಗೆ. 100 ರೂ, 150 ರೂ. ಗೆ ನೆಗೆದಿತ್ತು. ಆದರೀಗ ಇದ್ದಕ್ಕಿದ್ದಂತೆ ಬೆಲೆ ಕುಸಿದಿರುವುದು ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ.
ಇದರ ಮಧ್ಯೆ ರಾಷ್ಟ್ರೀಯ ಕೃಷಿ ಉತ್ಪನ್ನ ಮಾರಾಟ ಒಕ್ಕೂಟವು ಸಬ್ಸಿಡಿ ದರದಲ್ಲಿ ಗ್ರಾಹಕರಿಗೆ ಈರುಳ್ಳಿಯನ್ನು ಮಾರುತ್ತಿರುವುದು ದರ ಕುಸಿತಕ್ಕೆ ಮತ್ತಷ್ಟು ಕಾರಣವಾಗಿದೆ.
ಯಮುನಾ ಒತ್ತುವರಿ: ನದಿಗಳು ಉಳಿದರಷ್ಟೇ ನಾವು !
ಒಂದೆಡೆ ಬೆಲೆ ಕುಸಿತವಾಗಿರುವುದು, ಬೆಳೆದ ಬೆಳೆಗೆ ಸೂಕ್ತ ಹಾಗೂ ಸ್ಥಿರ ಬೆಲೆ ಸಿಗದಿರುವುದು, ನಿಗದಿಯಾಗದಿರುವುದರ ಬೇಸರದಲ್ಲೇ ಇರುವಾಗಲೇ ಕೇಂದ್ರ ಸರಕಾರವು ಈರುಳ್ಳಿ ರಫ್ತಿನ ಮೇಲಿನ ತೆರಿಗೆಯನ್ನು ಶೇ. 20 ಕ್ಕೆ ಏರಿಸಿರುವುದು ಮತ್ತಷ್ಟು ಕೋಪ ತರಿಸಿದೆ. ಒಂದುವೇಳೆ ಈ ರಫ್ತಿನ ಮೇಲಿನ ಹೆಚ್ಚುವರಿ ತೆರಿಗೆಯನ್ನು ರದ್ದು ಮಾಡಿದರೆ ಬೆಳೆಗಾರರು ತಮ್ಮ ಈರುಳ್ಳಿಯನ್ನು ಹೊರದೇಶಗಳಿಗೆ ಕಳುಹಿಸಿ ನಷ್ಟವನ್ನು ತುಂಬಿಕೊಳ್ಳಬಹುದು. ಆದರೆ ಸರಕಾರದ ತೀರ್ಮಾನದಿಂದ ಅದಕ್ಕೂ ಕುತ್ತು ಬಂದಿದೆ.
ಡೌನ್ ಟು ಅರ್ಥ್ ಮ್ಯಾಗಜೈನ್ ವರದಿ ಮಾಡಿರುವ ಪ್ರಕಾರ, ಭಾರತದಿಂದ ಸಾಮಾನ್ಯವಾಗಿ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದ್ದ ದೇಶಗಳೆಲ್ಲ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳತ್ತ ಮುಖ ಮಾಡಿವೆ. ಹಾಗಾಗಿ ಈ ಹೆಚ್ಚುವರಿ ತೆರಿಗೆ ತೆಗೆದರೆ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರ ಸಿಗಲಿದೆ. ಇದರಿಂದ ನಮಗೆ ಅನುಕೂಲವಾಗಲಿದೆ ಎನ್ನುತ್ತಾರೆ ಬೆಳೆಗಾರರು.
ಪ್ರಸ್ತುತ ಸ್ಥಿತಿಯಲ್ಲಿ ಲಾಭದ ಮಾತು ಬದಿಗಿರಲಿ, ಬೆಳೆ ಬೆಳೆಯಲು ಮಾಡಿದ ವೆಚ್ಚವನ್ನೂ ವಾಪಸು ಪಡೆಯಲಾಗದ ಸ್ಥಿತಿಯಲ್ಲಿ ಈರುಳ್ಳಿ ಬೆಳೆಗಾರರಿದ್ದಾರೆ.