Tuesday, November 19, 2024

Top 5 This Week

spot_img

Related Posts

ನಿಮ್ಮೂರಿನ ಒಂದು ದಿನಸಿ ಅಂಗಡಿ ಮುಚ್ಚಿದರೆ ಏನು ಮಹಾ ಎನ್ನಬೇಡಿ

ಒಂದು ಪಟ್ಟಣದಲ್ಲಿ ಸಣ್ಣದೊಂದು ದಿನಸಿ ಅಂಗಡಿ ಮುಚ್ಚುತ್ತಿದೆ ಎಂದರೆ ಯಾರಿಗೂ ಏನೂ ಅನಿಸದು. ಯಾರೂ ಅದರ ಬಗ್ಗೆ ಎರಡನೆಯದಾಗಿ ಯೋಚಿಸುವುದಿಲ್ಲ. ಅದೇ ಒಂದು ಪಟ್ಟಣಕ್ಕೆ ಒಂದು ಮಾಲ್‌ ಬರುತ್ತಿದೆ ಎಂದರೆ ಊರಿನಲ್ಲೆಲ್ಲ ಕೇವಲ ಚರ್ಚೆ ಮಾಡುವುದಿಲ್ಲ, ಸಂಭ್ರಮಿಸುವ ಪರಿಯೂ ಇದೆ. ಆದರೆ ತುಸು ಕಷ್ಟ ಎನಿಸಿದರೂ ನಾವು ಮೊದಲು ಚರ್ಚಿಸಬೇಕಾದದ್ದು ದಿನಸಿ ಅಂಗಡಿ ಮುಚ್ಚಲು ಸೃಷ್ಟಿಯಾದ ಕಾರಣಗಳನ್ನು. ಸ್ಥಳೀಯ ಆರ್ಥಿಕತೆ (ಲೋಕಲ್‌ ಎಕಾನಮಿ) ಯ ಸಂರಚನೆಗಳನ್ನೇ ಮೊದಲು ನಾವು ಅರ್ಥ ಮಾಡಿಕೊಂಡಿರುವುದಿಲ್ಲ. ಇದು ಸಮಸ್ಯೆಯ ಮೂಲ. ನಮಗೆ ತೋರುವುದು ಅದೊಂದು ಸಣ್ಣ ದಿನಸಿ ಅಂಗಡಿ. ಆದರೆ ಅದರ ಒಳಸುರುಳಿಗಳನ್ನು ಎಷ್ಟು ಜನ ತಿಳಿದಿದ್ದೇವೆ ಎಂದು ಲೆಕ್ಕ ಹಾಕಿದರೆ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಪ್ರಧಾನಿ ನರೇಂದ್ರ ಮೋದಿಯವರ ವೋಕಲ್‌ ಫಾರ್‌ ಲೋಕಲ್‌ ಸಹ ಇದೇ ನೆಲೆಯಿಂದ ಹುಟ್ಟಿಕೊಂಡದ್ದು.

ಹೀಗೆ ಒಂದು ದಿನಸಿ ಅಂಗಡಿಯ ಸಂರಚನೆಯ ಒಳಹೊಕ್ಕು ಬರೋಣ. ಆಮೇಲೆ ನಮ್ಮ ಊರಿಗೆ ಮಾಲ್‌ ಮುಖ್ಯವೋ, ಸಣ್ಣದೊಂದು ದಿನಸಿ ಅಂಗಡಿಯಂಥ ನೂರು ಅಂಗಡಿಗಳು ಮುಖ್ಯವೋ ಎಂದು ನಿರ್ಧರಿಸೋಣ. ಪಟ್ಟಣದ ಪೇಟೆಯಲ್ಲಿ ಇರುವ ದಿನಸಿ ಅಂಗಡಿಗೆ 40 ವರ್ಷಗಳ ಇತಿಹಾಸವಿತ್ತು. ಈಗ ಮೂರನೇ ತಲೆಮಾರು ಈ ಅಂಗಡಿಯನ್ನು ನೋಡಿಕೊಳ್ಳುತ್ತಿತ್ತು. ಎರಡು ತಲೆಮಾರುಗಳಿಗೆ ಯಾವ ಸಮಸ್ಯೆಯೂ ಇರಲಿಲ್ಲ. ಮೂರನೇ ತಲೆಮಾರಿಗೆ ಬೆಳಗ್ಗೆಯಿಂದ ರಾತ್ರಿವರೆಗೆ ಅಂಗಡಿಯಲ್ಲಿ ನಿಲ್ಲುವುದಕ್ಕಿಂತ, ವ್ಯಾಪಾರ ಮಾಡುವುದಕ್ಕಿಂತ ನಗರಕ್ಕೆ ಹೋಗಿ ನೌಕರಿ ಮಾಡುವುದು ಸೂಕ್ತ ಎನಿಸಿದೆ.

ಮಕ್ಕಳಿಗೆ ವಿದ್ಯಾಭ್ಯಾಸ ಕೊಡಬೇಕಿತ್ತು, ಕೊಟ್ಟೆವು. ಬಳಿಕ ಓದಿದ್ದಕ್ಕೆ ಸರಿಯಾದ ಕೆಲಸ ಹುಡುಕಿಕೊಳ್ಳಲಿ ಎಂದು ನಗರಕ್ಕೆ ಬಿಟ್ಟೆವು. ನಗರಕ್ಕೆ ಹೋದವನು ಮತ್ತೆ ಬರಲಿಲ್ಲ. ಹಾಗಾಗಿ ಈ ದಿನಸಿ ಅಂಗಡಿ ಮುಚ್ಚುತ್ತಿದ್ದೇವೆ ಎನ್ನುವವರು ನಮಗೆ ಕಾಣ ಸಿಗುತ್ತಾರೆ. ಆದರೆ ಅದಕ್ಕಿಂತ ಹೆಚ್ಚಾಗಿ ದಿನೇ ದಿನೆ ವ್ಯಾಪಾರ ಕಡಿಮೆಯಾಗುತ್ತಿದೆ. ಇನ್ನು ಕಷ್ಟ. ಮುಚ್ಚುವುದು ಅನಿವಾರ್ಯ ಎಂದು ಅಂಗಡಿಯ ಮುಚ್ಚುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಮೊದಲನೆಯ ಮಾದರಿಗಿಂತ ದೊಡ್ಡದು.

ಆದರೆ ಒಂದು ದಿನಸಿ ಅಂಗಡಿ ಮುಚ್ಚಿದರೆ ಉಂಟಾಗುವ ತಲ್ಲಣಗಳು ಹಲವಾರು. 40 ವರ್ಷದ ಅಂಗಡಿಗೆ ಒಂದಿಷ್ಟು ಹೆಸರಿತ್ತು. ನಿಷ್ಠ ಗ್ರಾಹಕರಿದ್ದರು. ಇಷ್ಟೆಲ್ಲ ಇರುವಾಗ ಸ್ಥಳೀಯರೇ ಆದ 5-6 ಮಂದಿ ನೌಕರರಿದ್ದರು. ನಾಳೆಯಿಂದ ಈ ನೌಕರರೆಲ್ಲ ಬೇರೆಡೆಗೆ ಉದ್ಯೋಗಕ್ಕೆ ಹೋಗಬೇಕು. ಹತ್ತಿರದ ದೊಡ್ಡ ಪಟ್ಟಣಕ್ಕೋ, ದೂರದ ನಗರಕ್ಕೋ ಆಯ್ಕೆ ಅವಕಾಶ ಹಾಗೂ ಅಗತ್ಯಗಳ ಮಧ್ಯೆ ಹೊಯ್ಡಾಡಿ ಮಗ್ಗುಲು ಬದಲಿಸುತ್ತದೆ ಎಂದಿಟ್ಟುಕೊಳ್ಳಿ.

ಈ ಅಂಗಡಿ ಮುಚ್ಚಿದ ದಿನದಿಂದ ಈ ವ್ಯಾಪಾರಿಯ ಬ್ಯಾಂಕ್‌ ವಹಿವಾಟು ರೀತಿಯೆಲ್ಲ ಬದಲಾಗುತ್ತದೆ. ಹಿಂದಿನಷ್ಟು ವ್ಯವಸ್ಥಿತವಾಗಿರದು (ಇರುವ ಜಾಗ ಮಾರಿ ಅಥವಾ ಕಾಂಪ್ಲೆಕ್ಸ್‌ ನಿರ್ಮಿಸಿ ಒಂದಿಷ್ಟು ದುಡ್ಡು ಒಟ್ಟಿಗೇ ಮಾಡಬಹುದು ಎನಿಸುವುದುಂಟು. ಆದರೆ ಅದು ಒಂದೆಡೆ ಸಂಗ್ರಹವಾಗಿ (ಬ್ಯಾಂಕಿನಲ್ಲಿ ಠೇವಣಿ ಇತ್ಯಾದಿ ಸ್ವರೂಪ) ಸ್ಥಿರವಾಗುವುದಲ್ಲದೇ, ಚರವಾಗದು. ಸ್ಥಳೀಯ ಆರ್ಥಿಕತೆ ಬೆಳೆಯಲು ಹೇಗೆ ಸ್ಥಿರ ಹಣಕಾಸು ವ್ಯವಹಾರ ಬೇಕೋ ಅದರ ಮೂರುಪಟ್ಟು ಹೆಚ್ಚು ಅರ್ಥಿಕ ವಹಿವಾಟು (ಕೊಡು-ತೆಗೆದುಕೊಳ್ಳುವ ವ್ಯವಹಾರ) ನಡೆಯಲೇಬೇಕು. ಆಗಲೇ ಸುತ್ತು ಆರ್ಥಿಕತೆ ಎನ್ನುವುದು. ಈ ಸುತ್ತು (ಸರ್ಕ್ಯುಲರ್‌ ಎಕಾನಮಿ) ಆರ್ಥಿಕತೆ ಸ್ಥಳೀಯ ಆರ್ಥಿಕತೆಗೆ ತೀರಾ ಅಗತ್ಯ.

ಕೊಡಗು ಮರುಗುತ್ತಿದೆ; ಕಾವೇರಿ ಸೊರಗುತ್ತಿದ್ದಾಳೆ !

ದೊಡ್ಡ ಸಾಹುಕಾರ ಹೇಗೋ ಬದುಕುತ್ತಾನೆ ಎಂದಿಟ್ಟುಕೊಳ್ಳೋಣ. ಆದರೆ ಅವನ ವ್ಯಯದ ಭಾಗ ಖಂಡಿತಾ ಕಡಿಮೆ ಆಗುತ್ತದೆ. ಎಲ್ಲವನ್ನೂ ಭವಿಷ್ಯಕ್ಕೆ ಎಂದು ಬಂಧಿಸಿಡುತ್ತಾನೆ. ಅದರಿಂದ ಸ್ಥಳೀಯ ಮಾರುಕಟ್ಟೆಗೆ ಅವನ ಪ್ರಮಾಣದ ಹಣದ ಹರಿವು ನಿಲ್ಲುತ್ತದೆ. ಇದರಿಂದ ಸ್ಥಳೀಯ ಆರ್ಥಿಕ ಚಟುವಟಿಕೆಗಳಲ್ಲಿ, ಬ್ಯಾಂಕ್‌ ಗಳಲ್ಲಿ ಹೂಡಿಕೆ ಪ್ರಮಾಣ ಕುಸಿಯುತ್ತದೆ. ಯಾವಾಗ ಒಂದು ಬ್ಯಾಂಕಿನಲ್ಲಿ ಸ್ಥಳೀಯ ಹೂಡಿಕೆಯ ಪ್ರಮಾಣ ಕುಸಿಯುತ್ತದೋ ಕ್ರಮೇಣ ಆ ಬ್ಯಾಂಕಿನ ಆರೋಗ್ಯವೂ ಹದಗೆಟ್ಟಂತೆ. ಯಾಕೆಂದರೆ ಸ್ಥಳೀಯ ಹೂಡಿಕೆ ಹಾಗೂ ನೀಡಿಕೆ (ಸಾಲ) ಸರಾಗವಾಗಿ ನಡೆಯುತ್ತಿರಬೇಕು. ಇದಲ್ಲದೇ ಆ ವ್ಯಾಪಾರಿಯ ನಿತ್ಯದ ವ್ಯವಹಾರದ ಭಾಗವಾಗಿ ಹತ್ತಾರು ಉಪ ಉತ್ಪಾದಕರು ಇರುತ್ತಾರೆ. ಅವರೆಲ್ಲರೂ ಸ್ಥಳೀಯ ಆರ್ಥಿಕತೆಗೆ ಕೊಂಡಿಗಳೇ. ತಮ್ಮ ಉತ್ಪಾದನೆಯ ಮಾರಾಟಕ್ಕಾಗಿ ಈ ಅಂಗಡಿಯನ್ನು ಆಶ್ರಯಿಸಿದ್ದರು. ಅವರೆಲ್ಲ ತಮ್ಮ ಉತ್ಪಾದನೆಗೆ ಬೇರೊಂದು ವ್ಯಾಪಾರಿಯ ಹುಡುಕಬೇಕು ಇಲ್ಲವೇ ಉತ್ಪಾದನೆ ಕಡಿಮೆ ಆಗಬೇಕು. ಅದು ಹೌದಾದರೆ ಅವನ ವ್ಯವಹಾರವೂ ಕುಂಠಿತವಾಗುತ್ತದೆ. ಅವನನ್ನು ಅವಲಂಬಿಸಿದ ನೌಕರರೂ ಪರ್ಯಾಯ ಮಾರ್ಗವನ್ನು ಆಯ್ದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗೆ ಒಂದು ವೃತ್ತದ ಕಥೆಯಿದು, ವೃತ್ತಾಂತ.

ಅಂಗಡಿಯನ್ನು ನೇರವಾಗಿ ಬದುಕಿಗಾಗಿ ನಂಬಿದ್ದ 5-6 ಮಂದಿ ನೌಕರರ ಬದುಕು ಡೋಲಾಯಮಾನವಾಗುತ್ತದೆ. ಅವರ ವೆಚ್ಚ, ಹೂಡಿಕೆ ಎಲ್ಲವೂ ಕಡಿಮೆಯಾಗುತ್ತದೆ. ಕೆಲವರು ದೂರದ ನಗರಗಳಿಗೆ ಹೋದರೆ ಅವರ ದುಡಿಮೆಯ ಶೇ. 60-70 ರಷ್ಟು ಆಯಾ ನಗರಗಳಲ್ಲಿನ ಬಳಕೆಗೇ ಬಳಕೆಯಾಗುತ್ತದೆ. ಅದು ಪಟ್ಟಣದ ಆರ್ಥಿಕತೆಯ ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ಉದಾಹರಣೆಗೆ ಇಲ್ಲಿ (ಪಟ್ಟಣದಲ್ಲಿ ) ದುಡಿಯುತ್ತಿದ್ದಾಗ ಪಡೆಯುತ್ತಿದ್ದ ಸಂಬಳ ನಗರಕ್ಕೆ ಹೋಲಿಸಿದರೆ ಕಡಿಮೆ ಇರಬಹುದು. ಆದರೆ ಅವನು ದುಡಿದ ನೂರು ರೂ. ಗಳಲ್ಲಿ ಶೇ. 50 ರಷ್ಟು ನಿತ್ಯದ ಬದುಕಿಗಾಗಿ ಸ್ಥಳೀಯ ಮಾರುಕಟ್ಟೆಯಲ್ಲೇ ಮರು ವಿನಿಯೋಗವಾಗುತ್ತಿತ್ತು. ಹಣ್ಣು-ತರಕಾರಿ ಇತ್ಯಾದಿ ಸರಕು, ತನ್ನ ಅಗತ್ಯ ಸೇವೆಗಳಿಗೆ, ಜಾತ್ರೆ, ಉತ್ಸವ-ಹೀಗೆ ನಾನಾ ಕಾರಣಗಳಿಗೆ ವೆಚ್ಚ ಮಾಡುತ್ತಿದ್ದ. ಮತ್ತೆ ಇವರೆಲ್ಲ ಸ್ಥಳೀಯ ಆರ್ಥಿಕತೆಯ ಬಿಂದುಗಳೇ. ಈಗ ನಗರದಲ್ಲಿ ಇನ್ನೂರು ರೂ. ಗಳಿಸುತ್ತಿರಬಹುದು. ಆದರೆ ಜೀವನಶೈಲಿಯ ಕಾರಣದಿಂದ ಸುಮಾರು 150 ರೂ. ಗಳಷ್ಟನ್ನು ನಿತ್ಯದ ಬದುಕಿಗೇ ವಿನಿಯೋಗಿಸುತ್ತಾನೆ. ಆಗ ಉಳಿದದ್ದು ಎಷ್ಟು ಶೇ. 25 ರಷ್ಟು ಮಾತ್ರ. ಅದೇ ಪಟ್ಟಣದಲ್ಲಿ ಎಲ್ಲದಕ್ಕೂ ಮಾರುಕಟ್ಟೆಯನ್ನು ಅವಲಂಬಿಸಬೇಕಿರಲಿಲ್ಲ. ಶೇ. 50 ರಷ್ಟು ಹಣವನ್ನು ಉಳಿತಾಯ ಮಾಡುವುದು ಸಾಧ್ಯವಾಗುತ್ತಿತ್ತು.

ನಗರ ಆರ್ಥಿಕತೆ ಬೆಳೆಯುವುದು ಬೇಡವೇ? ಅವೂ ನಮ್ಮ ರಾಜ್ಯದ್ದು, ದೇಶದ್ದೇ ಅಲ್ಲವೇ? ಅವುಗಳ ಹಣವೂ ದೇಶಕ್ಕೇ ಹೋಗುವುದಲ್ಲವೇ? ಇಂಥ ಹಲವಾರು ಪ್ರಶ್ನೆಗಳಿಗೆ ಉತ್ತರ ನಾನಾ ನಮೂನೆಯಲ್ಲಿವೆ. ಆದರೆ ಸ್ಥಳೀಯ ಆರ್ಥಿಕತೆಯ ಆಲೋಚನೆಯಲ್ಲಿ ಸ್ಥಳೀಯ ಪಟ್ಟಣಗಳೇ ಸ್ವಾವಲಂಬಿಗಳಾಗಬೇಕು, ಪರಾವಲಂಬಿಯಲ್ಲ. ಈ ನೆಲೆಯಲ್ಲಿ ಸ್ಥಳೀಯ ಆರ್ಥಿಕತೆ ಮುಖ್ಯ, ಅದಕ್ಕೆ ನಾವು ಮುಖ್ಯ. ಇವರೆಲ್ಲರೂ ನಗರಕ್ಕೆ ವಲಸೆ ಹೋದರೆ ಪಟ್ಟಣದಲ್ಲಿ ವಾಸಿಸುವ ಕುಟುಂಬಗಳೂ ಕ್ರಮೇಣ ಕಡಿಮೆಯಾಗುತ್ತವೆ. ಇದನ್ನು ಕಂಡು ವ್ಯಾಪಾರಿಗಳೂ ವಲಸೆ ಆರಂಭಿಸುತ್ತಾರೆ. ಒಂದು ದಿನ ಪಟ್ಟಣವನ್ನು ಮುಚ್ಚಲಾಗುತ್ತದೆ.

ಇದೇ ಕಾರಣಕ್ಕೆ, ನಾವು ಮೊದಲು ಸಣ್ಣ ಅಗತ್ಯಕ್ಕಾಗಿ ದೂರದ ನಗರವನ್ನೋ, ಅಲ್ಲಿನ ಮಾಲ್‌ ಅನ್ನೋ, ಆನ್‌ ಲೈನ್‌ ವ್ಯಾಪಾರವನ್ನೋ ಆಶ್ರಯಿಸುವ ಮೊದಲು ಯೋಚಿಸಬೇಕು. ನಮ್ಮ ಕೈ ಕೆಳಗೆ ಇನ್ನೆಷ್ಟು ಜನರ ಕೈಗಳು, ಹೊಟ್ಟೆಗಳು ಇವೆ ಎಂಬುದು. ಇಂಥದೊಂದು ಭಾವ ಮತ್ತು ಮನವರಿಕೆ ಮಾತ್ರರ ಸ್ಥಳೀಯ ಆರ್ಥಿಕತೆ ಉಳಿಸಬಲ್ಲದು. ಸ್ಥಳೀಯ ಆರ್ಥಿಕತೆ ಉಳಿದರೆ ಮಾತ್ರ ಪಟ್ಟಣಗಳು ಉಳಿದಾವು. ಪಟ್ಟಣಗಳು  ಉಳಿಯದೇ ನಗರಗಳು ಉಳಿಯಲಾರವು.

ಇದು ಸುಳ್ಳಲ್ಲ : ರಾತ್ರಿಯಾದರೂ ನಮ್ಮ ನಗರಗಳು ತಣ್ಣಗಾಗುತ್ತಿಲ್ಲ !

ಈಗ ಅನಿಸುತ್ತಿರುವ ಸಂಗತಿಯೆಂದರೆ ಪಟ್ಟಣಗಳು ನಾಶವಾದರೆ ನಗರಗಳು ಬೆಳೆದಾವು ಎಂಬುದು. ಅದು ಖಂಡಿತಾ ವಿನಾಶಕಾರಿ ಆಲೋಚನೆ. ನಗರಗಳು ಕೊಂಪೆಗಳಾಗುವುದನ್ನು ತಪ್ಪಿಸಲು ಪಟ್ಟಣಗಳು ಸುಸಜ್ಜಿತ ಹಾಗೂ ಸ್ವಾವಲಂಬಿಗಳಾಗಬೇಕು. ಅದಕ್ಕೆ ನಮ್ಮ ಒಂದೊಂದು ರೂಪಾಯಿಯೂ ಸ್ಥಳೀಯವಾಗಿಯೇ ಬಳಕೆಯಾಗಬೇಕು, ಹೂಡಿಕೆಯಾಗಬೇಕು.

ಇದು ಸಾಧ್ಯವಿದೆ, ಮನಸ್ಸು ಮಾಡಬೇಕಷ್ಟೇ. ಆದ್ದರಿಂದ ನಿಮ್ಮೂರಿನಲ್ಲಿ ಒಂದು ದಿನಸಿ ಅಂಗಡಿ ಮುಚ್ಚಿದರೆ ಏನು ಮಹಾ ಎಂದು ಮೂಗು ಮುರಿಯಬೇಡಿ, ಕುಳಿತು ಯೋಚಿಸಿ. ಇತ್ತೀಚಿನ ವರ್ಷಗಳಲ್ಲಿ ಇದು ಎಷ್ಟನೆಯದು ಅಂತ. ಸುಸ್ಥಿರತೆಯ ಮುಖ್ಯ ಕೊಂಡಿಗಳಲ್ಲಿ ಸ್ಥಳೀಯ ಆರ್ಥಿಕತೆಯೂ ಪ್ರಮುಖ ಎನ್ನುವುದನ್ನು ಮರೆಯದಿರೋಣ. ಸ್ಥಳೀಯವಾಗಿಯೇ ಕೊಳ್ಳೋಣ, ಸಮುದಾಯವನ್ನು ಕಟ್ಟೋಣ.

RurbanIndia
RurbanIndia
RurbanIndia is a space to redesign, revalue and rejuvenate our Rurban Development. A comprehensive strategy and think tank towards our Rurbansphere. RurbanIndia is a webspace of EkaAneka Media.

LEAVE A REPLY

Please enter your comment!
Please enter your name here

Popular Articles