Friday, July 26, 2024

Top 5 This Week

spot_img

Related Posts

ನದಿಗಳನ್ನು ಮಲಿನಗೊಳಿಸುವ ಚಟ

ನದಿಗಳ ಅಗತ್ಯವೇ ನಮಗಿನ್ನೂ ಅರ್ಥವಾಗಿಲ್ಲ. ಐದು ವರ್ಷಗಳಲ್ಲಿ ಈ ಮಾಲಿನ್ಯಗೊಳಿಸುವ ನಮ್ಮ ಚಟ ದುಪ್ಪಟ್ಟು ಬೆಳೆದಿದೆ ಎಂದರೆ ನಂಬಲೇಬೇಕು.

*

ನಮ್ಮ ದೇಶದಲ್ಲಿ ಯಾವ ನದಿ ಇನ್ನೂ ಪವಿತ್ರವಾಗಿರಬಹುದು? ಮಲಿನಗೊಳ್ಳದಿರಬಹುದು? ಎಂದು ಅಧ್ಯಯನ ಮಾಡ ಹೊರಟರೆ ನಮಗೆ ಸಿಗುವುದು ಶೂನ್ಯವೇ ಹೊರತು ಮತ್ತೇನೂ ಅಲ್ಲ. ಅನಿಯಂತ್ರಿತ ನಗರೀಕರಣ ಸೃಷ್ಟಿಸುತ್ತಿರುವ ಸಮಸ್ಯೆಗಳು ಬೇರೆ ಎಂದು ಕೆಲವೊಮ್ಮೆ ಯೋಚಿಸಬಹುದು. ಆದರೆ, ನಗರದ ಕಡೆ ಹೆಚ್ಚುತ್ತಿರುವ ವಲಸೆಯಿಂದ ಏರುತ್ತಿರುವ ಜನಸಂಖ್ಯೆ, ಅದಕ್ಕೆ ತಕ್ಕಂತೆ ಮೂಲ ಸೌಲಭ್ಯ ಒದಗಿಸಲು ಹೆಣಗಾಡುವ  ಸ್ಥಳೀಯ ಸಂಸ್ಥೆಗಳು, ಹಾಗೆಂದು ಸೋಲನ್ನು ಒಪ್ಪಿಕೊಳ್ಳದೇ ಮೌನವಾಗಿಬಿಡುವ ಆಡಳಿತ ವ್ಯವಸ್ಥೆ-ಸರಕಾರ, ಜವಾಬ್ದಾರಿಯುತವಾಗಿ ನಡೆದುಕೊಳ್ಳಲು ಮರೆಯುವ ನಾಗರಿಕರಾದ ನಾವು- ಎಲ್ಲರೂ ಮತ್ತೂಂದು ಅವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ ಎಂದೇ ಅನಿಸುವುದುಂಟು.

ನದಿಗಳನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವುದನ್ನು ನಮ್ಮ ಹಿರಿಯರು ಕಲಿಸಿದ್ದು. ಕೇವಲ ನದಿಗಳನ್ನಷ್ಟೇ ಅಲ್ಲ ; ಇಡೀ ಪ್ರಕೃತಿಯನ್ನು. ಅದರಲ್ಲಿ ಗಿಡಮರಗಳಿಗೂ ಸ್ಥಾನ ಕಲ್ಪಿಸಿದ್ದರು, ಪ್ರಾಣಿ ಪಕ್ಷಿಗಳನ್ನೂ ಒಳಗೊಂಡಿದ್ದರು. ಪ್ರಕೃತಿ ಆರಾಧನೆಯೇ ನಿಜವಾದ ಪೂಜೆಯಾಗಿಸಿಕೊಂಡಿದ್ದವರ ಪರಂಪರೆಯಿಂದ ನಾವು ಕಲಿತಿರುವುದು ಏನು ಎಂಬುದೇ ಇನ್ನೂ ಅರ್ಥವಾಗದ ಸಂಗತಿ.

ಒಮ್ಮೆ ನೋಡಿ

ಹದಿನೈದು ನಿಮಿಷ ಬಿಡುವು ಮಾಡಿಕೊಂಡು ಸುಮ್ಮನೆ ಒಮ್ಮೆ ಅಂತರ್ಜಾಲವನ್ನು ಕೆದಕಿ ನೋಡಿ. ಯಾವುದಾದರೂ ಶುದÏವಾದ ನದಿ ಇದೆಯೇ ಎಂದು ಹುಡುಕಿ. ಉತ್ತರ ಸಿಕ್ಕರೆ ಅದನ್ನು ಹಂಚಿಕೊಳ್ಳಿ. ಜಗತ್ತಿನಲ್ಲಿ ನದಿಗಳೆಲ್ಲಾ ಕಲುಷಿತಗೊಂಡಿವೆ ಎನ್ನುವ ಮಾತು ಬಿಡಿ. ನಮ್ಮ ದೇಶದಲ್ಲೇ ಎಲ್ಲ ನದಿಗಳನ್ನೂ ಕಲುಷಿತಗೊಳಿಸಲಾಗಿದೆ ಎಂಬುದು ಆತಂಕದ ಸಂಗತಿಯೇ ಸರಿ.

ಗಂಗೆ, ಯಮುನೆಯರನ್ನು ನೋಡಿದರೆ ನಾವು ನದಿಗೆ ಕೊಟ್ಟಿರಬಹುದಾದ ಗೌರವವನ್ನು ಕಾಣಬಹುದು. ಅವುಗಳ ಕಥೆ ಬೇರೆಯೇ ಹೇಳುವುದಿದೆ. ನದಿಗಳ ಮಾಲಿನ್ಯಕ್ಕೆ ಕೈಗಾರೀಕರಣದ ಕೊಡುಗೆ ಎಷ್ಟಿದೆಯೋ ಅಷ್ಟೇ ನಮ್ಮ ನಿರ್ಲಜ್ಜತನದ ಉಪಕಾರವೂ ಇದೆ. ಸ್ಥಳೀಯ ಸಂಸ್ಥೆಗಳ ಔದಾಸೀನ್ಯ ಮತ್ತು ಅರಿವಿನ ಕೊರತೆ ಸಲ್ಲಿಸಿರುವ ಕೊಡುಗೆ ಕಡಿಮೆ  ಏನಿಲ್ಲ.

ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) 29 ರಾಜ್ಯಗಳು ಹಾಗೂ 6 ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿರುವ 445 ನದಿಗಳನ್ನು ಸಮೀಕ್ಷೆ ಮಾಡಿತ್ತು. ಎಷ್ಟರಮಟ್ಟಿಗೆ ಕಲುಷಿಗೊಂಡಿವೆ, ಏನು ಕಾರಣ ಎಂಬುದನ್ನು ತಿಳಿಯುವದು ಅದರ ಉದ್ದೇಶವಾಗಿತ್ತು. ಈ ಪೈಕಿ 275 ನದಿಗಳು ಸಂಪೂರ್ಣ ಕಲುಷಿತಗೊಂಡಿವೆ. ಉಳಿದವು ಸ್ವತ್ಛವಾಗಿವೆಯೆಂಬುದು ಒಪ್ಪಿಕೊಳ್ಳಲು ಕಷ್ಟವೆನಿಸುವ ಸಂಗತಿ. ಮಾಲಿನ್ಯ ಎಂಬುದು ಸ್ವಲ್ಪ ಕಡಿಮೆ ಪ್ರಮಾಣದಲ್ಲಿರಬಹುದು ಅಷ್ಟೇ. ರೋಗದಲ್ಲೂ ಕೆಲವು ಹಂತಗಳಿರುತ್ತವೆ. ಒಂದನೇ ಹಂತ, ಎರಡನೇ ಹಂತ ಸುಧಾರಿಸುವಂಥವು. ಮೂರನೇ ಹಂತ-ಕಷ್ಟ. ನಾಲ್ಕನೇ ಹಂತ ಅಥವಾ ಅಂತಿಮ ಹಂತ-ಸಾಧ್ಯವಿಲ್ಲದ್ದು ಎಂಬುದು.  ನದಿಗಳ ಸ್ಥಿತಿಗೂ ಇದನ್ನು ಅನ್ವಯಿಸಬಹುದು.

ಈ ಮಾತು ಹೇಳಲಿಕ್ಕೆ ಕಾರಣವಿದೆ. ನಮ್ಮ ಮಾಲಿನ್ಯ ಹೆಚ್ಚಿಸುವ ಚಟ ಎಷ್ಟರ ಮಟ್ಟಿನ ವೇಗ ಪಡೆದಿದೆಯೆಂದರೆ, ಕೇವಲ ಐದು ವರ್ಷಗಳಲ್ಲಿ ನದಿಗಳ ಮಾಲಿನ್ಯ ದುಪ್ಪಟ್ಟು ಹೆಚ್ಚಾಗಿದೆ. 2009 ರಲ್ಲಿ ನಡೆದ ಸಮೀಕ್ಷೆ ಪ್ರಕಾರ ಸುಮಾರು 121 ನದಿಗಳು ಮಾಲಿನ್ಯಗೊಂಡಿದ್ದವು. 2015 ರಲ್ಲಿ ಈ ಸಂಖ್ಯೆ 275 ಕ್ಕೆ ಏರಿತು.ಅಂದರೆ ಐದು ವರ್ಷಗಳಲ್ಲಿ  154 ನದಿಗಳನ್ನು ನಾವು ಹಾಳು ಮಾಡಿದೆವು. ಇದೇ ರೀತಿ ನದಿಗಳ ತೀರ ಪ್ರದೇಶದ ಕತೆ ಹೀಗಿದೆ. 2009 ರಲ್ಲಿ 150 ನದಿಗಳ ತೀರ ಪ್ರದೇಶ ಮಾಲಿನ್ಯಗೊಂಡಿತ್ತು. ಆ ಸಂಖ್ಯೆ 2015 ರಲ್ಲಿ 302 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಯಾವ ರಾಜ್ಯಗಳೂ ಹಿಂದೆ ಬಿದ್ದಿಲ್ಲ.

ನದಿ ತೀರ ಪ್ರದೇಶಗಳ ಹಾಳುಗೆಡವುತ್ತಿರುವ-ಮಾಲಿನ್ಯಗೊಳಿಸುತ್ತಿರುವ ಸಂಗತಿ  ಬಹುತೇಕ ರಾಜ್ಯಗಳಲ್ಲಿ ನಡೆಯುತ್ತಿದೆ. ಈ ಸಂಖ್ಯೆ ವಿವರ ಹೀಗಿದೆ: ಮಹಾರಾಷ್ಟ್ರದಲ್ಲಿ 49 ನದಿ ತೀರ ಪ್ರದೇಶ ಮಾಲಿನ್ಯಗೊಂಡಿದ್ದರೆ, ಅಸ್ಸಾಂನಲ್ಲಿ 28, ಮಧ್ಯ ಪ್ರದೇಶದಲ್ಲಿ 21, ಗುಜರಾತ್‌ನಲ್ಲಿ  20, ಪಶ್ಚಿಮ ಬಂಗಾಳದಲ್ಲಿ 17, ಕರ್ನಾಟಕದಲ್ಲಿ 15, ಕೇರಳ ಮತ್ತು ಉತ್ತರ ಪ್ರದೇಶದಲ್ಲಿ 13, ಮನಿಫ‌ುರ ಮತ್ತು ಒರಿಸ್ಸಾದಲ್ಲಿ 12, ಮೇಘಾಲಯದಲ್ಲಿ 10, ಜಮ್ಮು-ಕಾಶ್ಮೀರದಲ್ಲಿ 9.  ಒಟ್ಟು ಮಾಲಿನ್ಯಗೊಂಡ ನದಿ ತೀರ ಪ್ರದೇಶ ಎಂದು ಅಂದಾಜು ಮಾಡುವುದಾದರೆ ಸುಮಾರು 12, 363 ಕಿಮೀ. ದಿಲ್ಲಿಯ ಯಮುನಾ ಸರಿಪಡಿಸಲಾಗದಷ್ಟು ಮಾಲಿನ್ಯಗೊಂಡಿದ್ದರೆ ಎಂದರೆ ಅಚ್ಚರಿಗೊಳ್ಳಬಹುದು.

ಅವ್ಯವಸ್ಥೆ ಸರಿಪಡಿಸುವುದು ಹೇಗೆ?

ಇದು ಚರ್ಚೆಯ ಭಾಗವಾಗಿಯಷ್ಟೇ ಇರುವುದೇ ಇಂದಿನ ಸ್ಥಿತಿಗೆ ಕಾರಣ. ಯಾಕೆಂದರೆ, ಈ ಎಲ್ಲ ಸಂಗತಿಗಳೂ ಸ್ಥಳೀಯ ಸಂಸ್ಥೆಗಳಿಗೆ, ಆಯಾ ರಾಜ್ಯ ಸರಕಾರಗಳಿಗೆ, ಕೇಂದ್ರ ಸರಕಾರಕ್ಕೆ ತಿಳಿದಿಲ್ಲವೆಂದಲ್ಲ. ಆದರೆ, ನದಿ ಮಾಲಿನ್ಯ ನಿಯಂತ್ರಣಕ್ಕೆ ಏನು ಕ್ರಮ ಕೈಗೊಳ್ಳಬಹುದು ಎಂಬುದು ಕೇವಲ ಚರ್ಚೆಯ ವಸ್ತುವಾಗಿಯೇ ಇದೆಯೇ ಹೊರತು ಪರಿಹಾರ ಕ್ರಮ ಕೈಗೊಳ್ಳುವ ನೆಲೆಯಲ್ಲಿ ಅನುಷ್ಠಾನಕ್ಕೆ ಇಳಿಯತ್ತಿಲ್ಲ ಎಂಬುದಕ್ಕೆ ಸದ್ಯದ ಸ್ಥಿತಿಯೇ ಉದಾಹರಣೆ.

ಬಹುತೇಕ ನದಿಗಳು ಕಲುಷಿತಗೊಳ್ಳುತ್ತಿರುವುದು ಕೈಗಾರಿಕೆಗಳಿಂದ ಮತ್ತು ಸ್ಥಳೀಯ ಸಂಸ್ಥೆಗಳ ಕೊಳಚೆ ಸೇರ್ಪಡೆಯಿಂದ ಎಂಬ ಸಂಗತಿ ಸಾಬೀತಾಗಿರುವಂಥದ್ದು. ಅದಕ್ಕೆ ಪ್ರತ್ಯೇಕ ಸಾಕ್ಷಿಗಳೇನೂ ಬೇಕಾಗಿಲ್ಲ. ಇದರ ನಿಯಂತ್ರಣಕ್ಕಾಗಲೀ, ನಗರಗಳಲ್ಲಿ ಉತ್ಪತ್ತಿಯಾಗುವ ಕೊಳಚೆಯ ನಿರ್ಮೂಲನೆಗೆ, ನಿಯಂತ್ರಣಕ್ಕೆ ಹಾಗೂ ಶುದ್ಧೀಕರಣಕ್ಕೆ ಕೈಗೊಂಡ ಕ್ರಮವಿರಲಿ, ತೋರಿರುವ ಉತ್ಸಾಹವೇ ಆಸಕ್ತಿ ಹುಟ್ಟಿಸುವಂತಿಲ್ಲ.

2009 ರಲ್ಲಿ ಇದೇ 302 ಕಲುಷಿತ ನದಿ ತೀರ ಪ್ರದೇಶದ ಸುತ್ತಮುತ್ತಲಿರುವ 650 ನಗರ ಮತ್ತು ಪಟ್ಟಣಗಳಿಂದ ಉತ್ಪತ್ತಿಯಾಗುವ ಕೊಳಚೆ ನೀರಿನ ಪ್ರಮಾಣ ದಿನಕ್ಕೆ 38 ಸಾವಿರ ದಶಲಕ್ಷ ಲೀಟರ್‌ ಗಳಾಗಿದ್ದವು. ಅದು 2015 ರಲ್ಲಿ 62 ಸಾವಿರ ದಶಲಕ್ಷ ಲೀಟರ್‌ ಗೆ ಏರಿಕೆಯಾಯಿತು. ಅಂದರೆ ಶೇ. 80 ರಷ್ಟು ಹೆಚ್ಚಳವಾಗಿತ್ತು. ಅಷ್ಟೇ ಪ್ರಮಾಣದಲ್ಲಿ ಕೊಳಚೆ ನೀರನ್ನು ಶುದ್ಧೀಕರಿಸುವ ಘಟಕಗಳನ್ನು ಸ್ಥಾಪಿಸಲು ನಮ್ಮ ಆಡಳಿತ ಗಮನಹರಿಸಿತೇ ಎಂದು ಕೇಳಿದರೆ ಇಲ್ಲ ಎಂಬುದು ಸ್ಪಷ್ಟವಾದ ಉತ್ತರ. 2009 ರಲ್ಲಿ ಸುಮಾರು 11, 800 ದಶಲಕ್ಷ ಲೀಟರ್‌ ಕೊಳಚೆ ನೀರನ್ನು ಶುದ್ಧೀಕರಿಸುವ ಸಾಮರ್ಥಯವನ್ನು ನಮ್ಮ ಘಟಕಗಳು ಹೊಂದಿದ್ದವು. ಆ ಪ್ರಮಾಣ ಐದು ವರ್ಷಗಳಲ್ಲಿ 24 ಸಾವಿರ ದಶಲಕ್ಷ ಲೀಟರ್‌ ಗೆ ಏರಿತು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮೀಕ್ಷೆ ಅಂದಾಜಿನ ಪ್ರಕಾರ ಕೆಲವೇ ವರ್ಷಗಳಲ್ಲಿ ಈ ಕೊಳಚೆ ನೀರಿನ ಪ್ರಮಾಣ ದಿನಕ್ಕೆ 57 ಸಾವಿರ ದಶಲಕ್ಷ ಲೀಟರ್‌ ಮುಟ್ಟುವ ಸಾಧ್ಯತೆ ಇದೆ.  ಇದರಲ್ಲಿ ಗ್ರಾಮೀಣ ಭಾರತದ ಭಾಗವನ್ನು ಸೇರಿಸಿಕೊಂಡಿಲ್ಲ. ಕೇವಲ 650 ನಗರಗಳು-ಪಟ್ಟಣಗಳ ಲೆಕ್ಕ ಮಾತ್ರ.

ಕಳೆದ ಬಾರಿ ಬೆಂಗಳೂರಿನಲ್ಲಿ ವೃಷಭಾವತಿ ಕಾಣೆಯಾಗಿದ್ದ ಕಥೆ ಹೇಳಲಾಗಿತ್ತು. ಇಂಥದ್ದೇ ಕಥೆ ಮುಂಬಯಿಯಲ್ಲೂ ಇದೆ. ಅಲ್ಲಿನ ಮಿಥಿ ನದಿ ಎಲ್ಲಿದೆ ಎಂದು ಎಲ್ಲರೂ ನೋಡಬೇಕಾದ ಸ್ಥಿತಿ ಇದೆ. ವೃಷಭಾವತಿಯಂತೆ ಆಗಿದೆ. ಮಿಥಿಯ ಪುನರುಜ್ಜೀವನ ಕೆಲಸ ಆಗುತ್ತಿದೆ ಎನ್ನುವುದಷ್ಟೆ ಸಮಾಧಾನದ ಸಂಗತಿ. ಬೃಹನ್ಮುಂಬಯಿ ಮಹಾನಗರ ಪಾಲಿಕೆ ಸುಮಾರು 659 ಕೋಟಿ ರೂ. ಗಳನ್ನು ವ್ಯಯಿಸಿ ಪುನರುಜ್ಜೀವನ ಮಾಡಲು ಹೊರಟಿದೆಯಂತೆ. ಪರಿಸರವಾದಿಗಳ ಪ್ರಕಾರ, ನದಿಯ ಆರೋಗ್ಯ ಉಳಿಸುವತ್ತ ಬಹಳ ದೊಡ್ಡ ಬದಲಾವಣೆಯಾಗಿಲ್ಲ ಎಂಬ ಆರೋಪವಿದೆ.

ಇಂಥ ಹತ್ತಾರು ನದಿಗಳು ಕಾಣೆಯಾಗುತ್ತಿರುವುದು ಹೀಗೆಯೇ. ಅವುಗಳನ್ನು ಉಳಿಸುವತ್ತ ನಾಗರಿಕರಾದ ನಾವು ಮೊದಲು ಯೋಚಿಸಬೇಕು, ಕ್ರಿಯಾಶೀಲವಾಗಬೇಕು. ಆಡಳಿತ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ಮೇಲೆ  ಒತ್ತಡ ಹೇರಬೇಕು. ನದಿಗೆ ತ್ಯಾಜ್ಯವನ್ನು ಬಿಡುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಬೇಕು. ಹಾಗೆಯೇ ಸರಕಾರ, ಸ್ಥಳೀಯ ಸಂಸ್ಥೆಗಳು ನದಿಯ ಅಗತ್ಯವನ್ನು ಮನಗಂಡು ಗಂಭೀರವಾಗಿ ವರ್ತಿಸಬೇಕು.

ಇವೆಲ್ಲವೂ ಒಟ್ಟಾಗಿ ನಡೆದರೆ ನಮ್ಮ ಕವಿಗಳು ಹೇಳಿದಂತೆ ನದಿನದಗಳ ಬೀಡು ನಮ್ಮದಾಗಬಹುದು. ಇಲ್ಲವಾದರೆ ಮುಂದೇನೂ ಹೇಳುವಂತಿಲ್ಲ.

(ಲೇಖನ ಸೌಜನ್ಯ : ಉದಯವಾಣಿ)

RurbanIndia
RurbanIndia
RurbanIndia is a space to redesign, revalue and rejuvenate our Rurban Development. A comprehensive strategy and think tank towards our Rurbansphere. RurbanIndia is a webspace of EkaAneka Media.

LEAVE A REPLY

Please enter your comment!
Please enter your name here

Popular Articles