ಹೌಸ್‌ ಫುಲ್…ಮಹಾನಗರಗಳು ಭರ್ತಿಯಾಗಿವೆ !

0
40

ಖಂಡಿತಾ ಇದರಲ್ಲಿ ಅನುಮಾನವೇ ಇಲ್ಲ, ಅನುಮಾನ ಪಡುವುದೂ ಬೇಕಿಲ್ಲ. ದಿನೇ ದಿನೆ ನಗರಗಳ ಸ್ಫೋಟವನ್ನು ಗಮನಿಸಿದರೆ ಭಯವಾಗುವುದೂ ಉಂಟು, ಆತಂಕವಾಗುವುದೂ ಉಂಟು. ಕೈಗಾರೀಕರಣದ ಕಲ್ಪನೆಯಲ್ಲಿ ಈ ಕೇಂದ್ರೀಕೃತ ವ್ಯವಸ್ಥೆಯ ನಗರಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೊರಟೆವು. ಹತ್ತು ಪಟ್ಟಣ ಸೇರಿ ಒಂದು ದೊಡ್ಡ ಪಟ್ಟಣವಾಯಿತು. ಕ್ರಮೇಣ ಅಂಥ ಹತ್ತು ದೊಡ್ಡ ಪಟ್ಟಣ ಸೇರಿ ಒಂದು ನಗರವಾಯಿತು. ಆ ಬಳಿಕ ಸುತ್ತಲಿನ ಎಲ್ಲ ಪಟ್ಟಣ ಸೇರಿ ಮಹಾನಗರವಾಯಿತು.

ಉದ್ಯೋಗ ಹಾಗೂ ಸುಸಜ್ಜಿತ ವ್ಯವಸ್ಥೆಯ ಕನಸಿನಲ್ಲಿ ಜನರು ಗುಳೆ ಹೊರಟರು. ನಗರಗಳು ಭರ್ತಿಯಾಗತೊಡಗಿದವು ನಮ್ಮ ಜನ ಮೆಚ್ಚುಗೆಯ ನಟನ ಸಿನಿಮಾದ ಮೊದಲ ದಿನ ಚಿತ್ರಮಂದಿರ ಭರ್ತಿಯಾಗುವಂತೆ. ವಿಚಿತ್ರ ನೋಡಿ. ಚಿತ್ರಮಂದಿರ ಭರ್ತಿಯಾದ ಕೂಡಲೇ ಚಿತ್ರಮಂದಿರದವರು ಒಂದು ಫಲಕ ತೂಗು ಹಾಕುತ್ತಾರೆ “ಚಿತ್ರ ಮಂದಿರ ಭರ್ತಿಯಾಗಿದೆʼ ಆಥವಾ ಹೌಸ್‌ ಫುಲ್‌ !ʼ. ಇಲ್ಲಿ ಹಾಗೆ ಆಗಲಿಲ್ಲ. ನಗರವನ್ನು ಅಳುವವರಾಗಲೀ, ಉಸ್ತುವಾರಿಗಳಾಗಲೀ ಯಾರೂ ನಗರದ ಎದುರು “ನಗರ ಭರ್ತಿಯಾಗಿದೆ” ಎಂದು ಫಲಕ ಹಾಕಲಿಲ್ಲ. ಹಾಗಾಗಿ ಈ ಗುಳೆ ಪರಂಪರೆ ಇನ್ನೂ ಮುಗಿದಿಲ್ಲ.

ಈಗ ನಮಗೆ ಉಳಿಸಿಕೊಳ್ಳಬೇಕಿರುವುದು ನಗರಕ್ಕಿಂತಲೂ ಪಟ್ಟಣಗಳನ್ನು. ನಮ್ಮ ಸಣ್ಣ ಸಣ್ಣ ಪಟ್ಟಣಗಳೇ ನಿಜಕ್ಕೂ ಸುಸ್ಥಿರತೆಯ ಕನಸು ಕಾಣಬಲ್ಲವೇ ಹೊರತು ದೊಡ್ಡ ನಗರಗಳಲ್ಲ. ಇದು ಸುಮ್ಮನೆ ಒಂದು ಹೇಳಿಕೆಯಲ್ಲ; ನಮ್ಮ ಮುಂದಿರುವ ಎಲ್ಲ ಮಹಾನಗರಗಳೂ ಈ ಮಾತನ್ನು ದೃಢೀಕರಿಸಿವೆ.

ಈ ಲೇಖನವೂ ಆಸಕ್ತಿಕರವಾಗಿದೆ, ಓದಲು ಕ್ಲಿಕ್‌ ಮಾಡಿ : ನದಿಗಳನ್ನು ಮಲಿನಗೊಳಿಸುವ ಚಟ

ಯಾಕೆಂದರೆ..

ನಿರ್ವಹಣೆ ಸುಲಭ

ಸಣ್ಣ ಪಟ್ಟಣಗಳನ್ನು ನಿರ್ವಹಿಸುವುದು ಸುಲಭ. ಒಂದು ಸಂಯೋಜಿತ ಸಮಗ್ರ ವ್ಯವಸ್ಥೆ ಇಡೀ ಪಟ್ಟಣವನ್ನು ನಿರ್ವಹಿಸಲು ಸಾಕು. ಉದಾಹರಣೆಗೆ ಪಟ್ಟಣ ಪಂಚಾಯಿತಿ ಎಂದುಕೊಳ್ಳೋಣ. ಅದಕ್ಕೆ ತನ್ನ ಅಗತ್ಯಕ್ಕೆ ತಕ್ಕಂತೆ ತೀರ್ಮಾನಗಳನ್ನು ಕೈಗೊಳ್ಳುವ, ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವ ಅಧಿಕಾರವನ್ನು ಪಂಚಾಯಿತಿಗೆ, ಇಡೀ ಪಟ್ಟಣದ ನಾಗರಿಕರಿಗೆ ಕೊಟ್ಟು ಬಿಟ್ಟರೆ ಅವರ ಪಟ್ಟಣವನ್ನು ಅವರು ನಿರ್ವಹಿಸಬಲ್ಲರು. ತ್ಯಾಜ್ಯ ವಿಲೇವಾರಿಯಿಂದ ಹಿಡಿದು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಳ್ಳುವಷ್ಟರ ಮಟ್ಟಿಗೆ ಎಲ್ಲ ಅಧಿಕಾರವನ್ನು ನೀಡಿದರೆ ಸಾಕು. ಇದು ಕಾರ್ಯ ಸಾಧುವೂ ಹೌದು. ನಮ್ಮ ಪಟ್ಟಣ, ನಮ್ಮ ಊರು ಎನ್ನುವ ಕಾರಣಕ್ಕೂ ಆಡಳಿತದಲ್ಲಿನ ದಕ್ಷತೆಯೂ ಹೆಚ್ಚಬಲ್ಲದು.

ಸಂಪನ್ಮೂಲ ಸದ್ಬಳಕೆ

ಪಟ್ಟಣಗಳು, ಸಣ್ಣ ಪಟ್ಟಣಗಳಲ್ಲಿ ಭೂ ಬಳಕೆಯಿಂದ ಆರಂಭಿಸಿ ಪ್ರತಿ ಸಂಪನ್ಮೂಲದ ಬಳಕೆಯಲ್ಲೂ ದಕ್ಷತೆ ಮರೆಯಲು ಸಾಧ್ಯ. ಜೊತೆಗೆ ಸಂಪನ್ಮೂಲವನ್ನು ತಮ್ಮಪಟ್ಟಣ ಹಾಗೂ ನಾಗರಿಕರ ಅನುಕೂಲಕ್ಕೆ ತಕ್ಕಂತೆ ಮರು ಬಳಸಲು, ಪುನರ್‌ ಸಂಯೋಜಿಸಲು ಹಾಗೂ ಪುನರ್‌ ಸಂಘಟಿಸಲೂ ಸಾಧ್ಯ. ಪ್ರಸ್ತುತ ಸಂದರ್ಭದಲ್ಲಿ ಯಾವುದೋ ದೊಡ್ಡ ನಗರಗಳ ಕೇಂದ್ರಿತ ನಿಯಮಗಳೇ ಸಣ್ಣ ಪಟ್ಟಣಗಳಿಗೂ ಅನ್ವಯವಾಗುವುದರಿಂದ ಸಂಪನ್ಮೂಲದ ಪುನರ್‍ನಿಯೋಜನೆಗಾಗಲೀ, ಬಳಕೆಗಾಗಲೀ ಅವಕಾಶ ಕಡಿಮೆ. ತನ್ನ ಅಗತ್ಯಕ್ಕೆ ತಕ್ಕಂತೆ ಸಂಪನ್ಮೂಲ ಬಳಕೆಗೆ ಅವಕಾಶ ಇದ್ದಾಗ ಮಾತ್ರ ಸದ್ಬಳಕೆಯಾಗಲು ಸಾಧ್ಯ, ಪ್ರಗತಿಯೂ ಸಾಧ್ಯ.

ಸಮುದಾಯ ಸಹಯೋಗ

ಯಾವುದೇ ಅಭಿವೃದ್ಧಿ ಅಥವಾ ಪ್ರಗತಿಯೆಂದರೆ ಬರೀ ಮೂಲ ಸೌಕರ್ಯವಲ್ಲ. ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಒಳಗೊಳ್ಳುವಿಕೆ. ಇದಕ್ಕೆ ಪ್ರದೇಶದ ವಿಸ್ತಾರತೆಯೂ ಸಂಬಂಧಪಟ್ಟಿದೆ. ಪ್ರದೇಶ ಹೆಚ್ಚು ವಿಸ್ತಾರವಾದಷ್ಟು ನಿರ್ವಹಣೆಗೆ ಬಳಸುವ ಸಂಪನ್ಮೂಲದ ಪ್ರಮಾಣ, ಗುಣಮಟ್ಟ ಎಲ್ಲವೂ ಮುಖ್ಯವಾಗುತ್ತದೆ. ಇದರೊಂದಿಗೆ ಪರಿಣಾಮದಲ್ಲೂ ವ್ಯತ್ಯಯಗಳುಂಟಾಗುತ್ತವೆ.ಅದೇ ಸಣ್ಣ ಪಟ್ಟಣವಿದ್ದರೆ ಸಮುದಾಯದ ಸಹಭಾಗಿತ್ವದಲ್ಲೂ ಗರಿಷ್ಠ ಸಾಧನೆ ಮಾಡಬಹುದು. ಅದರೊಂದಿಗೆ ಸಮುದಾಯದ ಒಳಗೊಳ್ಳುವಿಕೆಯಲ್ಲೂ ನಗರಗಳಿಗಿಂತ ಹೆಚ್ಚಿನ ಪ್ರಮಾಣದ ಸಾಧನೆ ಸಾಧ್ಯ. ಪರಿಸರ ಸಂರಕ್ಷಣೆಯಿಂದ ಹಿಡಿದು, ಸ್ಥಳೀಯ ಸಂಪನ್ಮೂಲಗಳ ಬಳಕೆ, ಸ್ಥಳೀಯ ಆರ್ಥಿಕತೆ ಎಲ್ಲವೂ ಸ್ಥಳೀಯರಿಂದಲೆ ನಿರ್ವಹಿಸಬೇಕಾದ ಸಂಗತಿಗಳು. ಇದರಲ್ಲಿ ಸಮುದಾಯದ ಸಹಯೋಗ ಖಂಡಿತವಾಗಿ ಬೇಕೆಬೇಕು. ಇವೆಲ್ಲವನ್ನೂ ಸಾಧ್ಯವಾಗಿಸಲು ಸಣ್ಣ ಪಟ್ಟಣಗಳೇ ಸೂಕ್ತ.

ಈ ಲೇಖನವೂ ಆಸಕ್ತಿಕರವಾಗಿದೆ, ಓದಲು ಕ್ಲಿಕ್‌ ಮಾಡಿ : ಉದ್ಯೋಗವೆಂಬುದು ಉದ್ಯಮವಾದದ್ದೇ ಸಮಸ್ಯೆಯೇ?

ಸುಸ್ಥಿರತೆ ಮತ್ತು ಪರಿಸರ ಸ್ನೇಹಿ ಜೀವನ ಶೈಲಿ

ಇಂದಿಗೂ ನಮ್ಮ ಪಟ್ಟಣಗಳು ನಗರಗಳಿಗಿಂತ ಹೆಚ್ಚು ಆರೋಗ್ಯಪೂರ್ಣವಾಗಿವೆ ಎಂದುಕೊಳ್ಳುವುದರಲ್ಲಿ ತೊಂದರೆಯೇನೂ ಇಲ್ಲ. ಮುಂದೆಯೂ ಹೀಗೆಯೇ ಇಟ್ಟುಕೊಳ್ಳಬೇಕಾದ ಹೊಣೆಗಾರಿಕೆ ಇದ್ದೇ ಇದೆ. ಅದನ್ನು ಮರೆಯುವಂತಿಲ್ಲ. ಪಟ್ಟಣಗಳು ವಿನ್ಯಾಸದಲ್ಲೂ ಪರಿಸರ ಸ್ನೇಹಿಯಾಗಿಯೇ ಇರುತ್ತವೆ. ಸಾಕಷ್ಟು ಹಸಿರು ಇರುತ್ತದೆ. ಒತ್ತಡ ತರುವಷ್ಟು ಜನಸಂಖ್ಯೆಯ ಸಾಂದ್ರತೆಯೂ ಇರದು. ಪ್ರತಿಯೊಂದರ ಹಿನ್ನೆಲೆಯಲ್ಲೂ ಪ್ರಕೃತಿಯನ್ನೂ ಎದುರಿಟ್ಟುಕೊಂಡು ತೀರ್ಮಾನ ಕೈಗೊಳ್ಳುವ ಉದಾರತೆ ಇನ್ನೂ ಉಳಿದಿದೆ. ಸಾಂಪ್ರದಾಯಿಕ ಜಲಮೂಲಗಳನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆದೇ ಇರುತ್ತದೆ. ಆದ ಕಾರಣ ಪರಿಸರ ಸ್ನೇಹಿ ಬದುಕಿನ ಅಥವಾ ಜೀವನ ಶೈಲಿಯ ಪಾಠವನ್ನು ಹೊಸತಾಗಿ ಕಲಿಯಬೇಕಿಲ್ಲ.

ಇಷ್ಟೇ ಅಲ್ಲದೇ, ನಗರಗಳ ಸುಖ-ನೆಮ್ಮದಿಯ ಲೆಕ್ಕಾಚಾರ ಮಾಡಲು ಇತ್ತೀಚಿನ ವರ್ಷಗಳಲ್ಲಿ ಬಳಸುವ ಹ್ಯಾಪಿ ಇಂಡೆಕ್ಸ್‌ ಸಹ ಪಟ್ಟಣಗಳಲ್ಲಿ ಹೆಚ್ಚಿರಬಲ್ಲದು. ಪರಸ್ಪರ ಸೇರುವ, ಸುಖ ದುಃಖ ಹಂಚಿಕೊಳ್ಳುವ, ಒಟ್ಟಾಗಿ ಸಕಾರಾತ್ಮಕ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳುವ ಅವಕಾಶಗಳು ಹೆಚ್ಚಿವೆ ಜನರಿಗೆ ಪಟ್ಟಣಗಳಲ್ಲಿ. ಇದು ಹ್ಯಾಪಿ ಇಂಡೆಕ್ಸ್‌ ನ್ನ ಸುಸ್ಥಿರತೆ ಇಡಬಲ್ಲದು.

ಪರಿಸರ ಹಾಗೂ ಬದುಕು ಎರಡೂ ಸುಸ್ಥಿರವಾಗಿಡಲು ಪಟ್ಟಣದಲ್ಲಿ ಇಷ್ಟೆಲ್ಲ ಅಂಶಗಳು ಇರುವಾಗ ನಾವು ನಗರಗಳ ಕಡೆಗೆ ವಲಸೆ ಹೋಗುವುದರ ಬಗ್ಗೆ ಏಕೆ ಯೋಚಿಸುತ್ತೇವೆ ಎನ್ನುವ ಪ್ರಶ್ನೆಗೆ ಸಣ್ಣ ಉತ್ತರವಿಲ್ಲ. ಯಾಕೆಂದರೆ ಪ್ರಶ್ನೆಯೇ ಬಹುದೊಡ್ಡದಿದೆ !

ಇದೇ ಕಾರಣದಿಂದ ಪಟ್ಟಣಗಳ ಸುಸ್ಥಿರತೆಯ ಸಾಧ್ಯತೆಗಳು ಇಷ್ಟಕ್ಕೇ ಮುಗಿದಿಲ್ಲ, ಇನ್ನೂ ನೂರಾರುಗಳಿವೆ ! ಮತ್ತೊಂದು ಅರಿಯಲೇಬೇಕಾದ ಅಂಶವೆಂದರೆ ನಗರವೂ ಅಲ್ಲದ, ಹಳ್ಳಿಯ ಸಖ್ಯ-ಸಂಸ್ಕೃತಿ-ಬಂಧ ಬಿಡದ ಅರೆಪಟ್ಟಣಗಳೇ (ರುರ್ಬನ್)‌ ಸುಸ್ಥಿರತೆಯ ನೆಲೆಯಲ್ಲಿ ಕ್ರಮಿಸಬಲ್ಲ ಹುಟ್ಟು ಓಟಗಾರರು.

LEAVE A REPLY

Please enter your comment!
Please enter your name here