Friday, September 13, 2024

Top 5 This Week

spot_img

Related Posts

ಸ್ಥಳೀಯ ಆರ್ಥಿಕತೆ ಹೊಸ ಪಾಠವೇನೂ ಅಲ್ಲ

ಡಿಜಿಟಲ್‌ ಮಳಿಗೆ ಎದುರು ನಿತ್ಯವೂ ನಿಲ್ಲಬೇಕಾದ ಅಗತ್ಯ ಖಂಡಿತಾ ಇದೆಯೇ> ಈ ಮಾತಿಗೆ ಹಲವರಿಂದ ಸಿಗುವ ಉತ್ತರ ಬಹಳ ಸರಳವಾದದ್ದು. ʼಏನೂ ಆಗತ್ಯವಿಲ್ಲ.”. ಅದರೆ ನಾವು ಆಗತ್ಯಕ್ಕಿಂತ ಹೆಚ್ಚು ಯೋಚಿಸುತ್ತಿದ್ದೇವೆಯೇ? ಗೊತ್ತಿಲ್ಲ

ಸ್ಥಳೀಯ ಆರ್ಥಿಕತೆ ಹೊಸ ಸಂಗತಿಯೇನೂ ಅಲ್ಲ.

ಅತ್ಯಂತ ಹಳೆಯದ್ದು. ಆದರೆ 90 ರ ದಶಕದ ಬಳಿಕ ನಡೆದ ಆರ್ಥಿಕ ವಿದ್ಯಮಾನಗಳು ಈ ಸ್ಥಳೀಯ ಆರ್ಥಿಕತೆಯೆಂಬ ಪ್ರಾಚೀನ ಆಯಾಮವನ್ನೇ ಬದಿಗೆ ಸರಿಸಿದ್ದು ಸುಳ್ಳಲ್ಲ.

ಜಾಗತೀಕರಣ, ಉದಾರೀಕರಣದಂಥ ವಿದ್ಯಮಾನಗಳ ಎದುರು ಸ್ಥಳೀಯ ಆರ್ಥಿಕತೆಗೆ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ. ಎಲ್ಲರೂ ಗ್ಲೋಬಲ್‌ ಎಂದು ಯೋಚಿಸತೊಡಗಿತು. ಜಾಗತೀಕರಣದ ಅಬ್ಬರಕ್ಕೆ ನಮ್ಮ ಮಾರುಕಟ್ಟೆಗಳಷ್ಟೇ ಕುಣಿಯಲಿಲ್ಲ. ನಮ್ಮ ಮನಸ್ಸುಗಳೂ ತಾಳ ಹಾಕಿದವು. ಎಲ್ಲದರ ಪರಿಣಾಮ ಸ್ಥಳೀಯ ಆರ್ಥಿಕತೆ ಅಥವಾ ಲೋಕಲ್‌ ಎಕಾನಮಿಯೆಂಬ ಪರಿಕಲ್ಪನೆಯೇ ಮೂಲೆಗೆ ಸೇರಿತು.

ಸುಮಾರು 40 ವರ್ಷಗಳ ಹಿಂದಕ್ಕೆ ಹೋಗುವ. 80 ರ ದಶಕವೆಂದೇ ಇಟ್ಟುಕೊಳ್ಳಿ. ನಮ್ಮ ಹಳ್ಳಿಗಳು ಆಗ ಸಂಪದ್ಭರಿತವಾಗಿದ್ದವು. ಜನರೂ ಖುಷಿಯಾಗೇ ಇದ್ದರು. ಇದ್ದುದರಲ್ಲಿ ಸುಖವನ್ನು ಕಾಣುತ್ತಾ, ಎಲ್ಲದಕ್ಕೂ ಊರಿನ ಪೇಟೆ, ಬಿಟ್ಟರೆ ಊರಿನ ದೊಡ್ಡ ಪೇಟೆಯನ್ನೇ ಆಶ್ರಯಿಸಿದ್ದರು.

ಪ್ರತಿ ಊರಿನಲ್ಲಿ ವಾರಕ್ಕೊಮ್ಮೆ ನಡೆಯುತ್ತಿದ್ದ ಸಂತೆ ದೊಡ್ಡ ಬಜಾರ್.‌ ಈಗಿನ ಸೂಪರ್‌ ಬಜಾರ್‌ ಇದ್ದಂತೆ. ಮನೆಯ ಎಲ್ಲ ಅಗತ್ಯಗಳೂ ಅಲ್ಲಿಯೇ ಪೂರೈಕೆಯಾಗುತ್ತಿದ್ದವು. ಎಲ್ಲೆಲ್ಲಿಂದಲೋ ವ್ಯಾಪಾರಿಗಳು ಬರುತ್ತಿದ್ದರು. ಜನರಿಗೂ ಸಂತೆಗೆ ಹೋಗುವುದೆಂದರೆ ಖುಷಿಯಿತ್ತು. ಅ ಸಂತೆಯಲ್ಲಿ ತಮಗೆ ಬೇಕಾದದ್ದನ್ನು ತರುತ್ತಿದ್ದರು. ಅದಕ್ಕಿಂತ ಹೆಚ್ಚಿನದು ಬೇಕೆಂದರೆ ಹತ್ತು ಊರುಗಳ ಸೇರಿ ದೊಡ್ಡ ಊರಾಗುವ, ತಾಲೂಕು ಕೇಂದ್ರವೆನಿಸುವ ಆಥವಾ ಜಿಲ್ಲಾ ಕೇಂದ್ರವೆನಿಸುವಲ್ಲಿ ನಡೆಯುವ ದೊಡ್ಡ ಸಂತೆಗೆ ಹೋಗಿ ತರುತ್ತಿದ್ದರು.

ಆಲ್ಲಿಗೆ ಬರುತ್ತಿದ್ದ ವ್ಯಾಪಾರಿಗಳಲ್ಲೂ ಶೇ. 80 ರಷ್ಟು ಸುತ್ತಮುತ್ತಲಿನ ಊರಿನವರು ಇಲ್ಲವೇ ತಾಲೂಕಿನವರು ಆಗಿರುತ್ತಿದ್ದರೆನ್ನಿ. ಅದರಿಂದ ಹಣದ ಹರಿವು ಹೊರ ಹೋಗುತ್ತಿರಲಿಲ್ಲ. ಅಲ್ಲಿಯೇ ಸುತ್ತಮುತ್ತಲೇ ನಿಲ್ಲುತ್ತಿತ್ತು. ಅದು ಸ್ಥಳೀಯವಾಗಿಯೇ ಹೂಡಿಕೆಯಾಗುತ್ತಿತ್ತು. ಒಂದು ಊರಿಗೆ ಅಥವಾ ಸಣ್ಣ ಪಟ್ಟಣಕ್ಕೆ ಬ್ಯಾಂಕುಗಳು ಯಾಕೆ ಬರುತ್ತವೆ ಹೇಳಿ?

ಯಾವಾಗ ಒಂದು ಊರಿನಲ್ಲಿ ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗಳು ನಡೆಯಲು ಆರಂಭವಾಗುತ್ತದೆಯೋ ಅಲ್ಲಿ ಆ ಹಣದ ಹರಿವನ್ನು ತಡೆಯಲು ಬ್ಯಾಂಕುಗಳು ಅವತರಿಸುತ್ತವೆ. ವ್ಯಾಪಾರಿಗಳು, ಜನರು ಖಾತೆ ತೆರೆದು ವಹಿವಾಟು ಆರಂಭಿಸುತ್ತಾರೆ. ಸಾಲ, ಠೇವಣಿ ಇತ್ಯಾದಿ ಲೆಕ್ಕದಲ್ಲಿ ವಹಿವಾಟು ನಡೆಯುತ್ತದೆ. ಅವೆಲ್ಲವೂ ಸ್ಥಳೀಯ ಆರ್ಥಿಕತೆಯ ಭಾಗವಾಗುತ್ತದೆ. ನಿಧಾನವಾಗಿ ಊರು ವಾಣಿಜ್ಯ ಕೇಂದ್ರವಾಗಿ ರೂಪುಗೊಳ್ಳುತ್ತದೆ. ಹೀಗೆ ವಿಸ್ತಾರಗೊಳ್ಳುತ್ತಾ , ಹಿಗ್ಗುತ್ತಾ ಸಾಗುವ ಊರಿನಿಂದ ಯಾರಿಗೆಲ್ಲ ಲಾಭ ಇಲ್ಲ ಹೇಳಿ?

ಇಂಥ ಸ್ಥಳೀಯ ಆರ್ಥಿಕತೆಯ ಒಂದೊಂದೇ ಕೊಂಡೆ ಅಥವಾ ಸ್ವತಂತ್ರ ಹಕ್ಕಿಯ ಒಂದೊಂದೇ ರೆಕ್ಕೆ ಕಳಚತೊಡಗಿದೆ. ಅದನ್ನು ನಾವೀಗ ತಡೆಯಬೇಕು. ಇಲ್ಲವಾದರೆ ದೊಡ್ಡ ಮೀನೊಂದು ಬಂದು ಸಣ್ಣ ಸಣ್ಣ ಮೀನುಗಳನ್ನು ನುಂಗುತ್ತಾ ದಢೂತಿಯಾಗಿ ಬೆಳೆದಂತೆ ನಮ್ಮ ಊರೂ ಮತ್ತೊಂದು ದೊಡ್ಡ ಊರಿನ ಬಾಯಿಯ ಆಹಾರವಾಗುತ್ತದೆ. ಆಗ ನಾವೆಲ್ಲ ಮುಂದೊಂದು ದಿನ ಮತ್ತೆ ಎಲ್ಲದಕ್ಕೂ ಮತ್ತ್ಯಾರನ್ನೋ, ಮತ್ತ್ಯಾವುದನ್ನೇ ಆಶ್ರಯಿಸಬೇಕು. ಉದ್ಯೋಗದಿಂದ ಹಿಡಿದು ನಿತ್ಯದ ಬದುಕಿಗೂ ಅವಲಂಬನೆ ಅನಿವಾರ್ಯವಾಗುತ್ತದೆ.

ಇದು ನಿಜಕ್ಕೂ ಅಪಾಯ. ಅದನ್ನು ತಡೆಯುವುದಕ್ಕೆ ಇರುವ ಪರಿಹಾರ ಒಂದೇ. ಅದೆಂದರೆ ದೊಡ್ಡ ಪೇಟೆಯಲ್ಲೋ, ಡಿಜಿಟಲ್‌ ಮಾರುಕಟ್ಟೆಯಲ್ಲೋ ಹುಡುಕುವ ವಸ್ತುಗಳಿಗೆ, ಕೊಳ್ಳುವ ವಸ್ತುಗಳಿಗೆ ಸ್ಥಳೀಯವಾಗಿಯೇ ಪರ್ಯಾಯಗಳನ್ನು, ಮಳಿಗೆಗಳನ್ನು ಹುಡುಕಿಕೊಳ್ಳಬೇಕು. ಇದಕ್ಕೆ ನಿಮ್ಮ ಡಿಜಿಟಲ್‌ ವ್ಯವಹಾರ ನಿಲ್ಲಿಸಬೇಕೆಂದೇನೂ ಇಲ್ಲ. ಯಾವುದು ಸ್ಥಳೀಯವಾಗಿಯೂ ಸಿಗುವುದಿಲ್ಲವೇ ಅದಕ್ಕಷ್ಟೇ ಡಿಜಿಟಲ್‌ ಮಳಿಗೆಯ ಎದುರು ನಿಂತರೆ ಸಾಕು. ತಲೆಗೆ ಹಾಕುವ ಹೇರ್‍ಪಿನ್ನಿಗೂ ನಾವು ಡಿಜಿಟಲ್‌ ನಲ್ಲಿ ಆರ್ಡರ್‌ ಮಾಡಬೇಕೇನೂ ಇಲ್ಲ. ಇದೇ ಮುಖ್ಯ.

RurbanIndia
RurbanIndia
RurbanIndia is a space to redesign, revalue and rejuvenate our Rurban Development. A comprehensive strategy and think tank towards our Rurbansphere. RurbanIndia is a webspace of EkaAneka Media.

LEAVE A REPLY

Please enter your comment!
Please enter your name here

Popular Articles