ಗುಜರಾತ್ ಮಾಡೆಲ್ ಎಂದು ಪ್ರಚಾರ ಮಾಡುತ್ತಿದ್ದವರು ಇನ್ನೊಮ್ಮೆ ಶರ್ಟ್ ನ ಕಾಲರ್ ನ್ನು ಮೇಲಕ್ಕೆ ಕೊಡವಬಹುದು. ಅದರಂತೆಯೇ ಗುಜರಾತ್ ಏನು ಮಹಾ ಎನ್ನುವವರು ಮತ್ತೊಮ್ಮೆ ಮೂಗು ಮುರಿಯಬಹುದು.
ಇವೆಲ್ಲರ ಮಧ್ಯೆ ವಾಸ್ತವ ಏನೆಂದರೆ ಗುಜರಾತಿನ ಒಂದು ಸಣ್ಣ ಹಳ್ಳಿ ದೊಡ್ಡ ಸುದ್ದಿ ಮಾಡಿದೆ. ಈ ಸುದ್ದಿ ಮಾಡಿರುವುದು ಯಾವುದೋ ನೇತ್ಯಾತ್ಮಕ ಕಾರಣಕ್ಕಲ್ಲ, ಬದಲಾಗಿ ಧನಾತ್ಮಕ ಕಾರಣಕ್ಕೆ.
ಶ್ರೀಮಂತಿಕೆ ಹಾಗೂ ಶ್ರೀಮಂತರು ಎನ್ನುವುದು ನಗರದ ಪರಿಕಲ್ಪನೆ. ಹಳ್ಳಿಗಳಲ್ಲಿಶ್ರೀಮಂತರೂ ಸಿಗುವುದು ಕಡಿಮೆ ಹಾಗೂ ಶ್ರೀಮಂತಿಕೆಯೂ ಕಡಿಮೆ ಎಂಬ ಮಾತೇ ಹೆಚ್ಚು ಜನಪ್ರಿಯವಾಗಿದೆ. ಹಳ್ಳಿಗಳೆಂದರೆ ಕೊರತೆಯ ಕೊಂಪೆ ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ಅಭಿಪ್ರಾಯ.
ಆದರೆ ಇವೆಲ್ಲವನ್ನೂ ಸುಳ್ಳಾಗಿಸುವಂತೆ ಗುಜರಾತಿನ ಪುಟ್ಟ ಹಳ್ಳಿಯೊಂದು ಏಷ್ಯಾದಲ್ಲೇ ಶ್ರೀಮಂತ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ಸಮೃದ್ಧಿ ಹಾಗೂ ಶ್ರೀಮಂತಿಕೆ ಎರಡೂ ಈ ಹಳ್ಳಿಯಲ್ಲಿ ಇದೆಯಂತೆ. ಈ ಹಳ್ಳಿ ಇಡೀ ಏಷ್ಯಾದಲ್ಲೇ ಶ್ರೀಮಂತವಾದುದಂತೆ.
ಇದು ಡಾರ್ಜಿಲಿಂಗ್ ಸಮಸ್ಯೆಯಷ್ಟೇ ಎಂದುಕೊಳ್ಳಬೇಡಿ; ನಮ್ಮ ಊರಿನದ್ದೂ ಸಹ
ಕಚ್ ಪ್ರಾಂತ್ಯದ ಮಾಧಾಪರ್ ಎಂಬುದು ಈ ಹಳ್ಳಿಯ ಹೆಸರು. ಭುಜ್ ಹೊರವಲಯದಲ್ಲಿರುವ ಈ ಹಳ್ಳಿಯ ಮಂದಿ ಸುಮಾರು 7 ಸಾವಿರ ಕೋಟಿ ರೂ. ನಷ್ಟು ಠೇವಣಿಯನ್ನು ಬ್ಯಾಂಕುಗಳಲ್ಲಿ ಇರಿಸಿದ್ದಾರೆ. ಈ ಹಳ್ಳಿಯಲ್ಲಿರುವವರು ಬಹುಪಾಲು ಪಟೇಲ ಸಮುದಾಯಕ್ಕೆ ಸೇರಿದವರು. ಒಟ್ಟೂ ಹಳ್ಳಿಯ ಜನಸಂಖ್ಯೆಯೆಂದರೆ ಸುಮಾರು 32 ಸಾವಿರ ಮಂದಿ. 2011 ರ ಜನಗಣತಿ ಪ್ರಕಾರ ಈ ಸಂಖ್ಯೆ 17 ಸಾವಿರ. ಆದರೆ 2021 ರಲ್ಲಿ ಹೊಸ ಜನಗಣತಿ ಆಗಿಲ್ಲ. ಹಾಗಾಗಿ ಹದಿಮೂರು ವರ್ಷಗಳಲ್ಲಿ ಈ ಜನಸಂಖ್ಯೆ ಪ್ರಮಾಣ 32 ಸಾವಿರಕ್ಕೆ ಅಂದರೆ ಶೇ. 80 ರಷ್ಟು ಹೆಚ್ಚಳವಾಗಿದೆ.
ಈ ಹಳ್ಳಿಯಲ್ಲಿ ಒಟ್ಟೂ 17 ಬ್ಯಾಂಕುಗಳಿವೆ. ಇವುಗಳಲ್ಲಿ ರಾಷ್ಟ್ರೀಕೃತ, ಖಾಸಗಿ ,ಸಹಕಾರಿ ಬ್ಯಾಂಕ್ ಗಳಿವೆ. ಅದರಲ್ಲೂ ಬಹುತೇಕ ರಾಷ್ಟ್ರೀಕೃತ ಬ್ಯಾಂಕ್ ಗಳು ಶಾಖೆ ಹೊಂದಿವೆ. ಒಂದು ಪುಟ್ಟ ಹಳ್ಳಿಯಲ್ಲಿ 17 ಬ್ಯಾಂಕುಗಳು ಇರುವುದು ಎಂದರೆ ತೀರಾ ಅಪರೂಪದ ಸಂಗತಿ. ಇನ್ನೂ ವಿಶೇಷವೆಂದರೆ ಹಲವು ಬ್ಯಾಂಕುಗಳು ಹಳ್ಳಿಯಲ್ಲೇ ಮತ್ತಷ್ಟು ಶಾಖೆಗಳು ತೆರೆಯುವ ಉತ್ಸಾಹದಲ್ಲಿವೆ !
ಇಷ್ಟಕ್ಕೂ ಈ ಶ್ರೀಮಂತಿಕೆಯ ಗುಟ್ಟು ಏನು ಎಂಬುದು ಎಲ್ಲರ ಕುತೂಹಲದ ಸಂಗತಿಯಾಗಿರಬಹುದು. ಅದಕ್ಕೆ ಒಂದೇ ಕಾರಣ. ಅದೆಂದರೆ ಇಲ್ಲಿರುವ ಹಲವು ಕುಟುಂಬಗಳು ಅನಿವಾಸಿ ಭಾರತೀಯರದ್ದು. ಈ ಅನಿವಾಸಿ ಭಾರತೀಯರು ಈ ಹಳ್ಳಿಯ ವಿವಿಧ ಬ್ಯಾಂಕುಗಳಲ್ಲಿ ಠೇವಣಿ ರೂಪದಲ್ಲಿ ಉಳಿತಾಯ ಹಾಗೂ ಹೂಡಿಕೆ ಮಾಡುತ್ತಿದ್ದಾರೆ.
Rural Life: ನಾವು ರೈತರು, ನಮ್ಮ ಮಕ್ಕಳಿಗೂ ಹೆಣ್ಣು ಕೊಡಿ !
ಇಲ್ಲಿರುವ 20 ಸಾವಿರ ಮನೆಗಳ ಪೈಕಿ 1, 200 ಕ್ಕೂ ಹೆಚ್ಚು ಕುಟುಂಬಗಳು ವಿದೇಶಗಳಲ್ಲಿವೆ. ಅದರಲ್ಲೂ ಆಫ್ರಿಕಾದ ಖಂಡದ ವಿವಿಧ ರಾಷ್ಟ್ರಗಳಲ್ಲಿವೆ. ಮಧ್ಯ ಆಫ್ರಿಕಾದ ರಿಯಲ್ ಎಸ್ಟೇಟ್ ಹಾಗೂ ಕಟ್ಟಡ ಸೇರಿದಂತೆ ವಿವಿಧ ನಿರ್ಮಾಣ ಕ್ಷೇತ್ರಗಳಲ್ಲಿ ಹೆಚ್ಚಾಗಿ ತೊಡಗಿರುವುದು ಗುಜರಾತಿ ಸಮುದಾಯದವರೇ. ಇದಲ್ಲದೇ ಬ್ರಿಟನ್, ಅಮೆರಿಕ, ನ್ಯೂಜಿಲೆಂಡ್, ಆಸ್ಟ್ರೇಲಿಯ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲೂ ದೊಡ್ಡ ಪ್ರಮಾಣದಲ್ಲಿ ಗುಜರಾತಿಗಳು ವಾಸಿಸುತ್ತಿದ್ದಾರೆ.
ಆ ಜಿಲ್ಲ ಪಂಚಾಯತ್ ನ ಅಧ್ಯಕ್ಷ ಪರುಲ್ ಬೆನ್ ಕರಾ ಹೇಳುವಂತೆ, ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕುಟುಂಬಗಳು ಈ ಹಳ್ಳಿಯ ಮೂಲದವು. ಆ ಕುಟುಂಬದವರೆಲ್ಲ ಹಳ್ಳಿಯ ಬ್ಯಾಂಕುಗಳಲ್ಲಿ ಹೆಚ್ಚು ಠೇವಣಿ ಇಟ್ಟಿದ್ದಾರೆ. ಉಳಿತಾಯವನ್ನು ಇಲ್ಲಿಯೇ ಮಾಡುತ್ತಿದ್ದಾರೆ. ಹಾಗಾಗಿ ಈ ಹಳ್ಳಿ ಶ್ರೀಮಂತವಾಗಿದೆ ಎನ್ನುತ್ತಾರೆ.
ಇದು ದಿಲ್ಲಿ ಕಥೆಯಷ್ಟೇ ಅಲ್ಲ; ನಗರಗಳಲ್ಲಿ ನೀರಿಲ್ಲ, ನಳ್ಳಿಗಳಿವೆ !
ಈ ಶ್ರೀಮಂತಿಕೆಯ ಮತ್ತೊಂದು ಪರಿಣಾಮವೆಂದರೆ ಈ ಹಳ್ಳಿಯಲ್ಲಿ ಕುಡಿಯುವ ನೀರು, ನೈರ್ಮಲ್ಯ ವ್ಯವಸ್ಥೆ, ರಸ್ತೆ ಎಲ್ಲವೂ ಸುವ್ಯಸ್ಥಿತವಾಗಿದೆಯಂತೆ. ದೊಡ್ಡ ದೊಡ್ಡ ಬಂಗಲೆಗಳು, ಯೋಗ್ಯ ಸರಕಾರಿ ಹಾಗೂ ಖಾಸಗಿ ಶಾಲೆಗಳು, ಕೆರೆಗಳು, ದೇವಸ್ಥಾನಗಳು-ಹೀಗೆ ಎಲ್ಲ ಸೌಲಭ್ಯಗಳೂ ಇವೆಯಂತೆ.
ಸುಖದ ಜೀವನಕ್ಕೆ ಉಳಿತಾಯವೇ ಸಾಧನ ಎಂದಾಯಿತೋ ಅಥವಾ ವಿದೇಶದಲ್ಲಿರುವುದೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಹಳ್ಳಿ ಈಗ ಶ್ರೀಮಂತ ಹಳ್ಳಿ ಎಂದು ಜನಪ್ರಿಯವಾಗುತ್ತಿದೆ.