Tuesday, November 19, 2024

Top 5 This Week

spot_img

Related Posts

ಇದು ಡಾರ್ಜಿಲಿಂಗ್‌ ಸಮಸ್ಯೆಯಷ್ಟೇ ಎಂದುಕೊಳ್ಳಬೇಡಿ; ನಮ್ಮ ಊರಿನದ್ದೂ ಸಹ

ಪ್ರವಾಸೋದ್ಯಮ ಭವಿಷ್ಯದ ಉದ್ಯಮ, ಉದ್ಯೋಗ ಕ್ಷೇತ್ರ ಎಂದೆಲ್ಲ ಬಿಂಬಿಸಲಾಗುತ್ತಿದೆ. ನಿಜವೂ ಇರಬಹುದು. ಪರಿಸರವನ್ನೂ ಉಳಿಸಿಕೊಂಡು ಹೇಗೆ ಪ್ರವಾಸೋದ್ಯಮವನ್ನು ಬೆಳೆಸಿಕೊಳ್ಳಬಹುದು ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ.

ಅವರು ಆ ಊರಿನಲ್ಲಿ ಆ ಗಿಡ ನೆಟ್ಟರು, ಚೆನ್ನಾಗಿದೆ, ಒಳ್ಳೆ ಹೂವುಗಳು ಬಿಟ್ಟಿವೆ. ಹೂವುಗಳು ಸುಂದರವಾಗಿವೆ ಎಂದು ಒಂದು ಕಡ್ಡಿ ತಂದು ನಮ್ಮ ಊರಿನ ಮಣ್ಣಿನಲ್ಲಿ ನೆಟ್ಟರೆ ಬರುತ್ತದೆಯೇ? ಗೊತ್ತಿಲ್ಲ, ಇಂಥ ಪ್ರಶ್ನೆಗಳನ್ನು ಪ್ರವಾಸೋದ್ಯಮದ ಸಂಗತಿಯಲ್ಲಿ ಅನ್ವಯಿಸುವುದೇ ಇಲ್ಲ.

ಈಗ ಪ್ರವಾಸೋದ್ಯಮದ ಸಂಗತಿಯಲ್ಲಿ ಆಗುತ್ತಿರುವುದು ಏನೆಂದು ಎಲ್ಲರಿಗೂ ಗೊತ್ತಿದೆ. ನಮ್ಮ ನದಿಗಳು ಕಲುಷಿತವಾಗುತ್ತಿವೆ, ಸಮುದ್ರ ಹಾಳಾಗುತ್ತಿದೆ, ಅರಣ್ಯಗಳು ತ್ಯಾಜ್ಯಗಳ ಗುಂಡಿಗಳಾಗುತ್ತಿವೆ, ನಮ್ಮ ತಾಣಗಳಂತೂ ತ್ಯಾಜ್ಯ ಹಾಗೂ ಕೊರತೆಗಳ ತಾಣವಾಗಿ ಜನಪ್ರಿಯವಾಗತೊಡಗಿದೆ. ಈ ಮಾತು ನಮ್ಮ ಹಲವು ಪ್ರವಾಸಿ ತಾಣಗಳಿಗೆ ಅನ್ವಯವಾಗುತ್ತಿದೆ. ಅದರಲ್ಲೂ ಕೋವಿಡ್‌ ಬಳಿಕ ಜನರು ಹುಚ್ಚು ಎಂಬಂತೆ ಪ್ರವಾಸಿ ತಾಣಗಳತ್ತ ನುಗ್ಗ ತೊಡಗಿದರು.

ಪ್ರವಾಸೋದ್ಯಮ ಅದರಲ್ಲೂ ಸ್ಥಳೀಯ ಅಥವಾ ದೇಸಿ ಪ್ರವಾಸೋದ್ಯಮದ ಸ್ಥಳೀಯ ಆರ್ಥಿಕತೆ ದೃಷ್ಟಿಯಿಂದ ಬಹಳ ಮುಖ್ಯವಾದುದು. ಆದರೆ ಇದರ ಭರದಲ್ಲಿ, ರಭಸದಲ್ಲಿ ಪರಿಸರದ ಕಾಳಜಿ ಕೊಚ್ಚಿ ಹೋಗಬಾರದಲ್ಲ.

ಇದು ದಿಲ್ಲಿ ಕಥೆಯಷ್ಟೇ ಅಲ್ಲ; ನಗರಗಳಲ್ಲಿ ನೀರಿಲ್ಲ, ನಳ್ಳಿಗಳಿವೆ !

ಇಂಥ ಮಾತಿಗೆ ಒಂದು ಉದಾಹರಣೆಯಾಗಿ ಡಾರ್ಜಿಲಿಂಗ್‌ ಸಿದ್ಧಗೊಳ್ಳುತ್ತಿದೆಯಂತೆ. ಡೌನ್‌ ಟು ಅರ್ಥ್‌ ಇದರ ಕುರಿತು ಒಂದು ಸಚಿತ್ರ ಹಾಗೂ ಸವಿವರವಾದ ವರದಿ ಮಾಡಿದೆ. ಅದರ ಪ್ರಕಾರ ಅಲ್ಲೀಗ ಹೆಚ್ಚುತ್ತಿರುವ ಪ್ರವಾಸಿಗರ, ಬಂದು ಹೋಗುತ್ತಿರುವವರ ಸಂಖ್ಯೆಯದ್ದೇ ಸಮಸ್ಯೆ.

ಡಾರ್ಜಿಲಿಂಗ್‌ ಎಂದರೆ ಚಹಾ, ಮರಮುಟ್ಟು ಹಾಗೂ ಪ್ರವಾಸೋದ್ಯಮಕ್ಕೇ ಹೆಸರುವಾಸಿ. ಬ್ರಿಟಿಷರ ಕಾಲದಲ್ಲಿಉನ್ನತ ಸ್ತರದ ಅಧಿಕಾರಿಗಳಿಗೆ, ಉಳಿದ ಅಧಿಕಾರಿ ವರ್ಗಕ್ಕೆ ಗಿರಿಧಾಮವಾಗಿ ಪರಿವರ್ತಿತವಾಗಿದ್ದು ಈ ಡಾರ್ಜಿಲಿಂಗ್.‌ ಬಳಿಕ ಗಿರಿಗಳ ರಾಣಿ ಎಂಬಂತೆ ಪ್ರಸಿದ್ಧವಾದುದೂ ಎಲ್ಲರಿಗೂ ತಿಳಿದದ್ದೇ. ಈಗಂತೂ ಅತ್ಯಂತ ಪ್ರಮುಖ ಜನಪ್ರಿಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.

ಸುತ್ತಲಿನ ಸುಂದರ ಭೂ ದೃಶ್ಯಗಳು, ನಮ್ಮನ್ನು ತಬ್ಬಿಕೊಳ್ಳುವ ಮೋಡಗಳ ಸಮೂಹ, ಮುದ ಕೊಡುವ ವಾತಾವರಣ, ಒಂದಿಷ್ಟು ಕಾಡು- ಇಷ್ಟು ಸಾಕು ನಗರಗಳಲ್ಲಿ ಕಾಂಕ್ರೀಟಿನ ಮಧ್ಯೆ ಬದುಕುತ್ತಿರುವ ನಗರವಾಸಿಗಳಿಗೆ. ವಾರಾಂತ್ಯವಿರಬಹುದು, ರಜಾದಿನಗಳ ಸರಣಿ ಇರಬಹುದು, ರಜೆಗಳೇ ಇರಬಹುದು..ಎಲ್ಲರೂ ಓಡಿ ಬರುವುದು ಇಂಥ ಗಿರಿಧಾಮಗಳಿಗೆ. ಇಲ್ಲಿ ಡಾರ್ಜಿಲಿಂಗ್‌ ಇಂಥ ಹತ್ತಾರು ಗಿರಿಧಾಮಗಳ ಪ್ರತಿನಿಧಿಯಂತೆ ಉಲ್ಲೇಖಿಸಲಾಗಿದೆಯಷ್ಟೇ.

ಕಿಸೆಯಲ್ಲಿದ್ದ ದುಡ್ಡನ್ನು ಎಷ್ಟು ಏನು ಎಂದು ಕೇಳದೇ ಕೊಡುವವರಿದ್ದರೆ ಸ್ವರ್ಗವೂ ತೆರೆದುಕೊಳ್ಳುತ್ತದೆಯಂತೆ. ಹಾಗೆಯೇ ಇಂಥ ಪುಟ್ಟ ಊರಿನಲ್ಲಿ ಕಾಲಿಡುವಲ್ಲೆಲ್ಲ ರೆಸಾರ್ಟ್ ಗಳು, ಹೋಟೆಲ್ ಗಳು, ಲಾಡ್ಜ್‌ ಗಳು, ರೆಸ್ಟ್‌ ರೂಮ್ಸ್..ಹೀಗೆ ಎಲ್ಲವೂ ಬಂದು ಠಿಕಾಣಿ ಹೂಡುತ್ತವೆ. ಇದರಿಂದ ಬಹಳ ಇಕ್ಕಟ್ಟಿಗೆ ಸಿಲುಕುವುದು ಸ್ಥಳೀಯರು.

ಈ ಪ್ರವಾಸಿಗರಿಂದ ಒಂದಿಷ್ಟು ಮಂದಿ ಸ್ಥಳೀಯರಿಗೆ ಉದ್ಯೋಗ, ಒಂದಿಷ್ಟು ಸ್ಥಳೀಯ ಉದ್ಯಮಗಳಿಗೆ ವ್ಯಾಪಾರ ನಡೆಯಬಹುದು. ಆದರೆ ಇದ್ದ ಚೂರುಪಾರು ಮೂಲ ಸೌಕರ್ಯಗಳೆಲ್ಲ ಪ್ರವಾಸಿಗರ ಪಾಲಾಗುತ್ತವೆ. ಸ್ಥಳೀಯರು ಕೊರತೆಯ ಬಿಸಿಯನ್ನು ಅನುಭವಿಸಬೇಕು. ಡಾರ್ಜಿಲಿಂಗ್‌ ನಲ್ಲೂ ಈಗ ಅದೇ ಆಗುತ್ತಿದೆಯಂತೆ. ಯೋಗ್ಯ ಕುಡಿಯುವ ನೀರು ಹಾಗೂ ನೈರ್ಮಲ್ಯ ಸೌಲಭ್ಯ ಎಲ್ಲವೂ ದೂರದ ಬೆಟ್ಟದಂತಾಗಿದೆಯಂತೆ.

ಡಾರ್ಜಿಲಿಂಗ್‌ ನಲ್ಲಿ ಪ್ರಸ್ತುವೂ ಇರುವುದು 1910 ರ ಸುಮಾರಿನಲ್ಲಿ ರೂಪಿಸಿದ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ. ಸುಮಾರು ಹತ್ತು ಸಾವಿರ ಮಂದಿಯ ಬಾಯಾರಿಕೆಯನ್ನು ತಣಿಸಬಹುದು. ಆದರೀಗ 2011ರ ಜನಗಣತಿ ಪ್ರಕಾರ ಈ ಊರಿನ ಜನಸಂಖ್ಯೆ ಸುಮಾರು ಒಂದು ಲಕ್ಷಕ್ಕಿಂತಲೂ ಕೊಂಚ ಹೆಚ್ಚು. ಈ ಹತ್ತು ಪಟ್ಟಿಗಿಂತಲೂ ಹೆಚ್ಚಿನ ಜನಸಂಖ್ಯೆಗೆ ಹಳೆಯ ವ್ಯವಸ್ಥೆ ಹೇಗೆ ನೀರು ಪೂರೈಸಲು ಸಾಧ್ಯ? ಹಾಗಾಗಿ ಸ್ಥಳೀಯ ಸಂಸ್ಥೆಗೆ ಕುಡಿಯುವ ನೀರಿನ ಪೂರೈಕೆ ಹಾಗೂ ಒಳಚರಂಡಿ ವ್ಯವಸ್ಥೆಯ ಸಾಧ್ಯತೆ ಸೃಷ್ಟಿಸುವುದೇ ಸವಾಲಾಗಿ ಪರಿಣಮಿಸಿದೆ.

ನಿಮ್ಮೂರಿನ ಒಂದು ದಿನಸಿ ಅಂಗಡಿ ಮುಚ್ಚಿದರೆ ಏನು ಮಹಾ ಎನ್ನಬೇಡಿ

ಈಗ ಹೆಚ್ಚುತ್ತಿರುವ ಈ ಪ್ರವಾಸಿಗರ ಸಂಖ್ಯೆಯನ್ನು ನಿರ್ವಹಿಸಬೇಕು, ಅವರೆಲ್ಲರಿಗೂ ಕೊರತೆಯಾಗದಂತೆ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಮೂಲ ಸೌಕರ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು. ಇವೆಲ್ಲವೂ ಸ್ಥಳೀಯ ಸಂಸ್ಥೆಗಳಿಗೆ ಸವಾಲಾಗುತ್ತಿರುವುದು ಸುಳ್ಳಲ್ಲ.

ಉಳಿದಂತೆ ಡಾರ್ಜಿಲಿಂಗ್‌ ಗಿರಿಧಾಮ. ಹಾಗಾಗಿ ಅದರ ಭೌಗೋಳಿ ಸಂರಚನೆಯನ್ನೂ ವಿಭಿನ್ನವಾದುದು. ಸೀಮಿತ ಭೂ ಪ್ರದೇಶವಷ್ಟೇ ಬಳಕೆಗೆ ಯೋಗ್ಯ. ಅದರಲ್ಲೇ ಎಲ್ಲದಕ್ಕೂ ಅವಕಾಶ ಕಲ್ಪಿಸುವಾಗ ಜನದಟ್ಟಣೆ ಒತ್ತಡ ಹೆಚ್ಚುವ ಅಪಾಯವೂ ದೊಡ್ಡದಿದೆ.

ಈಗಾಗಲೇ ಇದರ ಸಮಸ್ಯೆಗಳು ಆರಂಭವಾಗತೊಡಗಿವೆಯಂತೆ. ಮೊದಲನೆಯದಾಗಿ ತ್ಯಾಜ್ಯಗಳ ನಿರ್ವಹಣೆ, ಶೌಚಾಲಯಗಳ ನಿರ್ವಹಣೆಯ ಕೊರತೆ, ಅವುಗಳ ತ್ಯಾಜ್ಯ ನಿರ್ವಹಣೆಯ ಸಮಸ್ಯೆ- ಎಲ್ಲವೂ ಗೋಚರವಾಗುತ್ತಿವೆ. ತ್ಯಾಜ್ಯಗಳ ಬೆಟ್ಟಗಳೂ ನಿರ್ಮಾಣವಾಗುತ್ತಿವೆ. ಸ್ಥಳೀಯರು, ಹೋಟೆಲ್‌ ಇತ್ಯಾದಿ ವಾಣಿಜ್ಯ ಸಂಸ್ಥೆಗಳೂ ತಮ್ಮ ತ್ಯಾಜ್ಯವನ್ನು ಈ ಮಳೆ ನೀರು ಹರಿದುಹೋಗುವ ಚರಂಡಿಗಳಿಗೆ ಹರಿಯ ಬಿಡುತ್ತಿದ್ದಾರೆ. ಅವೆಲ್ಲವೂ ಉಳಿದ ಎಲ್ಲ ವ್ಯವಸ್ಥೆಯನ್ನೂ ಹಾಳುಗೆಡವುತ್ತಿವೆ. ಇದರ ಪರಿಣಾಮ ಎದುರಿಸಬೇಕಾದದ್ದು ಸ್ಥಳೀಯರೇ. ಅದು ಆರೋಗ್ಯ ಸಮಸ್ಯೆ ಇರಬಹುದು ಅಥವಾ ಸಂಪನ್ಮೂಲಗಳ ಕೊರತೆ ಇರಬಹುದು.

ಅದಕ್ಕೀಗ ಮೊದಲು ಡಾರ್ಜಿಲಿಂಗ್‌ ನ ಸ್ಥಳೀಯ ಸಂಸ್ಥೆ ಲಭ್ಯ ಇರುವ ನದಿ, ಕೆರೆ ಮುಂತಾದ ಜಲ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಜನರಲ್ಲಿ ಈ ಕುರಿತು ಅರಿವು ಮೂಡಿಸಬೇಕಿದೆ. ತ್ಯಾಜ್ಯಗಳ ಸಮರ್ಪಕ ನಿರ್ವಹಣೆಗೆ ಮಾರ್ಗ ಹುಡುಕಬೇಕು. ಸಾರ್ವಜನಿಕ ಶೌಚಾಲಯಗಳಿರಬಹುದು, ವೈಯಕ್ತಿಕ ಶೌಚಾಲಯಗಳಿರಬಹುದು- ಅವುಗಳ ಸುಸಜ್ಜಿತ ನಿರ್ವಹಣೆಗೆ ಒತ್ತುಕೊಡಬೇಕು.

Rural Life: ನಾವು ರೈತರು, ನಮ್ಮ ಮಕ್ಕಳಿಗೂ ಹೆಣ್ಣು ಕೊಡಿ !

ಯಾವುದೇ ಕಾರಣಕ್ಕೂ ಹೊಸ ಬಗೆಯ ಸಮಸ್ಯೆಗಳಿಗೆ (ಭೂ ದೃಶ್ಯಗಳ ಮಾರ್ಪಾಡು ಇತ್ಯಾದಿ) ಆಹ್ವಾನ ಕೊಡದೇ, ಪ್ರವಾಸೋದ್ಯಮವನ್ನೂ ಒಂದು ಮಿತಿಯಲ್ಲೇ ನಡೆಸವುದು ಆರೋಗ್ಯಕರವೂ ಹೌದು ಹಾಗೂ ಸುಸ್ಥಿರವೂ ಹೌದು.

ಈ ಮಾತು ಬರೀ ಡಾರ್ಜಿಲಿಂಗ್‌ ಗೆ ಅಲ್ಲ. ಎಲ್ಲ ಪ್ರವಾಸಿ ತಾಣಗಳೂ ಇದರತ್ತ ಗಮನಿಸಬೇಕು. ಸುಸ್ಥಿರ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು. ಇಲ್ಲವಾದರೆ ಕೆಲವೇ ವರ್ಷಗಳಲ್ಲಿ ಪ್ರವಾಸೋದ್ಯಮ ಮುಗಿದು ಹೋಗುತ್ತದೆ. ಆಗ ಇಡೀ ಪಟ್ಟಣಗಳು ಕತ್ತಲೆಯ ಕೋಣೆಗಳಾಗಿ ಬದುಕಬೇಕಾದೀತು. ಈಗಲೇ ಭವಿಷ್ಯದ ದೃಷ್ಟಿಯಲ್ಲಿ ದೀಪ ಹಚ್ಚಿಕೊಳ್ಳುವುದು ಮುಖ್ಯ. ಮುಂದಿರುವುದು ಕತ್ತಲೆಯೆಂಬುದಂತೂ ಖಚಿತ !

(ಚಿತ್ರ ಕೃಪೆ : ಡೌನ್‌ ಟು ಅರ್ಥ್)

RurbanIndia
RurbanIndia
RurbanIndia is a space to redesign, revalue and rejuvenate our Rurban Development. A comprehensive strategy and think tank towards our Rurbansphere. RurbanIndia is a webspace of EkaAneka Media.

LEAVE A REPLY

Please enter your comment!
Please enter your name here

Popular Articles