Wednesday, May 29, 2024
spot_imgspot_img

Top 5 This Week

spot_img

Related Posts

ದೇವರ ನಾಡಿನಲ್ಲಿ ಇತ್ತೀಚೆಗೆ ಬರವೇ ಕಾಯಂ ಅತಿಥಿ !

ಇಡುಕ್ಕಿ: ಕೇರಳದ ಇಡುಕ್ಕಿ ಜಿಲ್ಲೆ ತಿಳಿದಿರಬಹುದು. ನೆನಪು ಮಾಡಿಕೊಳ್ಳಿ. ನಾಲ್ಕು ವರ್ಷದ ಹಿಂದೆ ಬಿದ್ದ ದಿಢೀರ್‌ ಮಳೆಗೆ ಊರಿಗೇ ಊರೇ ಕೊಚ್ಚಿ ಹೋಗಿತ್ತು. ಒಮ್ಮೆಲೆ ಶುರುವಾದ ಮಳೆ ಅಬ್ಬರಿಸತೊಡಗಿದಾಗ ಇದೂ ಎಂದಿನ ಮಳೆ ಅಂದುಕೊಂಡಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಅದು ಸುಳ್ಳೆನಿಸಿ ಸೇತುವೆ, ಮನೆ ಮಾರು ಎಲ್ಲವೂ ಕುಸಿಯತೊಡಗಿದಾಗ ಪ್ರಳಯದ ಅನುಭವವಾಗಿತ್ತು.

ವಿಚಿತ್ರವೆಂದರೆ ಅದೇ ಜಿಲ್ಲೆಯಲ್ಲಿಈ ವರ್ಷದ ಬರದ ಅನುಭವ ಆಗಿದೆ. ನೀರಿನ ಕೊರತೆ ವ್ಯಾಪಿಸಿ ತೋಟಗಳೆಲ್ಲ ಕರಕಲಾಗಿ ರೈತ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾದ ಸ್ಥಿತಿಯನ್ನು ಸೃಷ್ಟಿಸಿದೆ. ಏಲಕ್ಕಿ ಸೇರಿದಂತೆ ಎಲ್ಲ ಬಗೆಯ ತೋಟಗಳು ಹೇಳ ಹೆಸರಿಲ್ಲದಂತಾಗಿವೆ. ಮಳೆಗಾಲ ಬರುವ ಹೊತ್ತಿಗೆ ಕೆಲವು ಕಡೆ ಇಡೀ ತೋಟಗಳನ್ನೇ ಹೊಸದಾಗಿ ಮಾಡಬೇಕಾದ ಸ್ಥಿತಿಯೂ ಇದೆ. ಅಂಥ ಬಿರುಬೇಸಗೆ.

ಕರಾವಳಿಯವರಿಗೆ, ಕೇರಳದವರಿಗೆ ಬೇಸಗೆ ಹೊಸದೇನಲ್ಲ. ಆದರೆ ಭೂಮಿಯನ್ನೇ ಸುಡುವ ಈ ಬಿರು ಬೇಸಗೆಯ ಅನುಭವವಿರಲಿಲ್ಲ. ಸೂರ್ಯನಿಗೆ ಹುಟ್ಟಿರುವ ಆ ಮಾಯಾವಿ ಬಾಯಾರಿಕೆಯ ನೀಗಿಸುವ ಬಗೆ ಸದ್ಯ ನಮ್ಮ ಕೈಯಲ್ಲಂತೂ ಇಲ್ಲ.‌ (ಚಿತ್ರ – ಸಾಂದರ್ಭಿಕ- ಇಂಟರ್‌ ನೆಟ್)

ಕೊಡಗು ಮರುಗುತ್ತಿದೆ; ಕಾವೇರಿ ಸೊರಗುತ್ತಿದ್ದಾಳೆ !

ಇದೇ ವಿಷಯವಾಗಿ ಕೆಲವು ದಿನಗಳ ಹಿಂದೆ ದಿ ನ್ಯೂ ಇಂಡಿಯನ್‌ ಎಕ್ಸ್‌ ಪ್ರೆಸ್‌ ಒಂದು ವರದಿ ಪ್ರಕಟಿಸಿತ್ತು. ಅದರ ಅಭಿಪ್ರಾಯದಂತೆ ಇಂಥ ಬಿರು ಬೇಸಗೆ ಇದುವರೆಗೂ ಕಂಡಿರಲಿಲ್ಲವಂತೆ. ಹಲವು ಕಡೆ ಈ ಬರ ನಿರ್ಮಿಸಿರುವ ಸ್ಥಿತಿ ಎಂತಹದ್ದು ಎಂದರೆ ಕೃಷಿಕರನ್ನೆಲ್ಲ ದಿನಗೂಲಿ ಕಾರ್ಮಿಕರನ್ನಾಗಿಸಿದೆ. ಮೂರ್ನಾಲ್ಕು ವರ್ಷಗಳ ಹಿಂದೆ ಬರ ಎಂಬವನು ಅತಿಥಿಯಾಗಿರುತ್ತಿದ್ದ, ಇತ್ತೀಚೆಗೆ ಮನೆಯವನೇ ಆಗಿದ್ದಾನೆ !

ನಲವತ್ತು ವರ್ಷಗಳಲ್ಲಿ ಈ ಮಟ್ಟಕ್ಕೆ ತೋಟಗಳು ಒಣಗಿರಲಿಲ್ಲ, ನದಿಗಳು ಬರಡಾಗಿರಲಿಲ್ಲ, ಜಲಾಶಯಗಳು ಖಾಲಿಯಾಗಿರಲಿಲ್ಲ. ಅದೇ ವರದಿ ನೀಡುವ ಅಂಕಿ ಅಂಶದಂತೆ, ಕೇರಳದ ಬಹುತೇಕ ಜಲಾಶಯಗಳು ಖಾಲಿಯಾಗಿವೆ. ಹೀಗಿರುವಾಗ ಕೊಳವೆ ಬಾವಿಗಳಲ್ಲಿ ನೀರು ಎಲ್ಲಿಂದ ಬರಬೇಕು? ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ  ಕೊರತೆ ಉದ್ಭವಿಸಿದೆ. ಹಾಗಾಗಿ ರಾಜ್ಯ ಜಲ ನಿರ್ವಹಣಾ ಪ್ರಾಧಿಕಾರವು ಹಲವು ಜಿಲ್ಲೆಗಳಲ್ಲಿ ನಿತ್ಯವೂ ಕುಡಿಯುವ ನೀರು ಪೂರೈಕೆಗೂ ನಿರ್ಬಂಧ ವಿಧಿಸಿದೆ. ಯಾಕೆಂದರೆ ಮುಂಗಾರು ಬರುವುದಕ್ಕೆ ಇನ್ನೂ ಒಂದು ತಿಂಗಳಿದೆ. ಅಲ್ಲಿಯವರೆಗೂ ಬದುಕ ಬೇಕು !

ಇಡುಕ್ಕಿ, ಪಾಲಕ್ಕಾಡ್‌, ಮಲ್ಲಪ್ಪುರಂ, ವಯನಾಡು, ತ್ರಿಶ್ಶೂರ್‌, ಕೊಜಿಕೋಡ್‌ ಪ್ರದೇಶದ ರೈತರು ತಮ್ಮ ಬೆಳೆಗಳಿಗೆ ಭವಿಷ್ಯದಲ್ಲಿ ನೀರು  ಹೊಂದಿಸುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಯಾವ ಬೆಳೆಗಳು ಬೆಳೆಯುವುದೂ ಕಷ್ಟ ಎಂ ಸ್ಥಿತಿ ಉದ್ಭವಿಸಬಹುದು ಎಂಬ ಆತಂಕ ಅವರೆಲ್ಲರದ್ದು. ಈ ಪ್ರದೇಶದಲ್ಲಿ ಸಾವಿರಾರು ಎಕರೆ ಬಾಳೆ, ಭತ್ತ, ಏಲಕ್ಕಿ, ಕರಿಮೆಣಸು, ತರಕಾರಿ ಬೆಳೆ, ಕಾಫಿ, ಕೊಕ್ಕೊ ಮತ್ತಿತರ ಬೆಳೆಗಳನ್ನು ಬೆಳೆಯಲಾಗುತ್ತದೆ. ಇವುಗಳಿಗೆಲ್ಲ ಸಕಾಲದಲ್ಲಿ ನೀರು ಪೂರೈಸಲೇಬೇಕು. ಇಲ್ಲವಾದರೆ ಬೆಳೆ ನಷ್ಟ ಎಂಬುದು ರೈತನ ಕೈ ಕಚ್ಚುತ್ತದೆ.

ನದಿಗಳನ್ನು ಮಲಿನಗೊಳಿಸುವ ಚಟ

ರಾಜ್ಯ ಸರಕಾರ ಬರದ ಹಿನ್ನೆಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ 12 ಲಕ್ಷ ರೂ. ಗಳಂತೆ ಪ್ರತಿ ಪಂಚಾಯತ್‌ ಗೆ ನೀಡಿದೆಯಂತೆ. ಆದರೆ ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಲ್ಲವೇ? ಎಂಬ ಪ್ರಶ್ನೆ ಹಲವರದ್ದು. ಜೊತೆಗೆ ಪ್ರತಿ ವರ್ಷವೂ ಇದೇ ಮಾದರಿಯಲ್ಲೇ ನಾವು ಬೇಸಗೆಯನ್ನು, ಬರವನ್ನು ಹಾಗೂ ಕುಡಿಯುವ ನೀರಿನ ಕೊರತೆಯನ್ನು ನಿರ್ವಹಿಸುತ್ತೇವೆಯೇ ಹಾಗೂ ನಿರ್ವಹಿಸಲು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನೆ.

ಕೇರಳದಲ್ಲಿಈ ವರ್ಷ ನಿರೀಕ್ಷಿಸಿದ್ದ ಸರಾಸರಿ ಮಳೆ ಪ್ರಮಾಣ ಸುಮಾರು ಮೂರು ಸಾವಿರ ಮಿ.ಮೀ. ಆದರೆ ಸುರಿದದ್ದು ಕೇವಲ ಎರಡು ಸಾವಿರ ಮಿ.ಮೀ. ಒಂದು ಸಾವಿರ ಮಿ.ಮೀ ಕೊರತೆ ಎಂದರೆ ಎಷ್ಟು ದೊಡ್ಡದು ಎಂಬುದು ಈಗ ಅರ್ಥವಾಗುತ್ತಿದೆ.

ಇದುವರೆಗೂ ಹೇಳಿದ್ದು ಬರದ ಒಂದೇ ಮುಖ. ಇದರ ಹಲವಾರು ಮುಖಗಳಿವೆ. ಒಂದು ಊರಿಗೆ ಅಥವಾ ಪ್ರದೇಶಕ್ಕೆ ಅಥವಾ ಜಿಲ್ಲೆಗೆ ಬರ ಬಂದರೆ ಬರೀ ಕುಡಿಯವ ನೀರಿನ ಕೊರತೆ ಬಾಧಿಸುವುದಿಲ್ಲ. ಸರಣಿ ಸಮಸ್ಯೆಗಳು ಶುರುವಾಗುತ್ತವೆ. ಹೊಲಗಳು ಬರಡಾಗುತ್ತವೆ, ಬೆಳೆಗಳ ಬೆಲೆಗಳು ಹೆಚ್ಚಾಗುತ್ತವೆ, ಸ್ಥಳೀಯ ರೈತರೆಲ್ಲ ಕೆಲಸವಿಲ್ಲದೇ, ಕನಿಷ್ಠ ಆದಾಯವೂ ಇಲ್ಲದೇ ಗುಳೆ ಹೋಗುವ ಸಂದರ್ಭ ಬರುತ್ತದೆ, ದೊಡ್ಡ ನಗರದಲ್ಲೂ ಜನದಟ್ಟಣೆ ಒತ್ತಡ ಹೆಚ್ಚುತ್ತದೆ, ಅನಾರೋಗ್ಯಕರ ಸ್ಪರ್ಧೆ ಹೆಚ್ಚಾಗುತ್ತದೆ, ಶೋಷಣೆ ತೀವ್ರಗೊಳ್ಳುತ್ತದೆ. ಇದರ ಒಳ ಪೆಟ್ಟು ಇನ್ನೂ ಘೋರವಾಗಿರುತ್ತದೆ. ಅದನ್ನು ಮತ್ತೊಮ್ಮೆ ಚರ್ಚಿಸೋಣ.

ಒಂದು ಬರ ಸ್ಥಳೀಯ ಆರ್ಥಿಕತೆಯ ಮೇಲೆ ಸೃಷ್ಟಿಸುವ ಸವಾಲು ಬಹಳ ದೊಡ್ಡದು. ಆಯಾ ಗ್ರಾಮಗಳು, ಪಟ್ಟಣಗಳ ಆರ್ಥಿಕ ಶಕ್ತಿಯನ್ನೇ ಕುಂದಿಸಿಬಿಡಬಲ್ಲದು. ಅಂಥದೊಂದು ಬೆಳವಣಿಗೆ ಸ್ಥಳೀಯ ಆರ್ಥಿಕತೆಯ ಪ್ರಧಾನ ಬಿಂದುಗಳಾದ ಸಣ್ಣ ಪಟ್ಟಣ, ಪಟ್ಟಣಗಳನ್ನು ನುಂಗಿ ಹಾಕಬಲ್ಲದು. ಅದಕ್ಕೇ ಸ್ಥಳೀಯ ಆರ್ಥಿಕತೆಯ ದೃಷ್ಟಿಕೋನದಿಂದಲೇ ಸರಕಾರದ ನೀತಿಗಳು ರಚನೆಯಾಗಬೇಕು. ಅದು ಸಾಧ್ಯವಿದೆ, ಸಾಧುವೂ ಹೌದು. ಅಂಥದೊಂದು ನೀತಿಗಾದರೂ ಇಂಥ ಬರಗಳು ಯೋಚಿಸುವಂತೆ ಮಾಡಬೇಕು.

ಪ್ರಕೃತಿ ಸಂಪತ್ತು ಸಾಕಷ್ಟು ಇರುವ ದೇವರ ನಾಡಿನ ಸಮಸ್ಯೆಯಿದು. ಪರಿಹಾರ ಹುಡುಕಬೇಕಾದ ಕಾಲವೂ ಹೌದು. ಅದು ನಮ್ಮ ಮೊದಲ ಆದ್ಯತೆಯ ಸಂಗತಿಯಾಗಬೇಕು. ಕರ್ನಾಟಕವೂ ಸಹ ಈ ಸಮಸ್ಯೆಗಳಿಂದ ಪಾಠವನ್ನು ಕಲಿಯಬೇಕಿದೆ.‌

RurbanIndia
RurbanIndia
RurbanIndia is a space to redesign, revalue and rejuvenate our Rurban Development. A comprehensive strategy and think tank towards our Rurbansphere. RurbanIndia is a webspace of EkaAneka Media.

LEAVE A REPLY

Please enter your comment!
Please enter your name here

Popular Articles