ಬೆಂಗಳೂರು : ಇದನ್ನು ಮತ್ತೊಂದು ಸಾಮಾನ್ಯ ಸುದ್ದಿ ಎಂದು ಮೂಗು ಮುರಿಯಬೇಡಿ. ಯಾಕೆಂದರೆ ಹಾಗೆ ಒಂದು ವೇಳೆ ಮೂಗು ಮುರಿದು ಕಡೆಗಣಿಸಿದರೆ ಅದು ನಮ್ಮನ್ನೇ ನುಂಗಿ ಬಿಡಬಹುದು.
ಹಾಗೆಂದು ಮೊಸಳೆಯ ಸಂಗತಿಯಲ್ಲ, ಬದಲಾಗಿ ಮೊಸಳೆಗಿಂತಲೂ ಘೋರ ಎಂಬಂತೆ ಬೆಳೆಯುತ್ತಿರುವ ಪ್ಲಾಸ್ಟಿಕ್ ನ ಕಥೆಯಿದು.
ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ನೇಚರ್ ನ ಹೊಸ ಅಧ್ಯಯನ ವರದಿ ಪ್ರಕಾರ ನಮ್ಮ ದೇಶ ಭಾರತ ಇಡೀ ಪ್ರಪಂಚದಲ್ಲೇ ಅತಿ ಹೆಚ್ಚು ಪ್ಲಾಸ್ಟಿಕ್ ಮಾಲಿನ್ಯ ಮಾಡುತ್ತಿರುವ ದೇಶದ ಸ್ಥಾನ ಪಡೆದಿದೆ. ಅದರ ಪ್ರಕಾರ ಪ್ರತಿ ವರ್ಷ 9.3 ಮಿಲಿಯನ್ ಮೆಟ್ರಿಕ್ ಟನ್ ನಷ್ಟು ಪ್ಲಾಸ್ಟಿಕ್ ಮಾಲಿನ್ಯವನ್ನು ಮಾಡುತ್ತಿದ್ದೇವೆ.
ಇದು ಬೇರೆ ದೇಶಗಳ ಹುನ್ನಾರ ಎಂದೂ ತಿಳಿಯುವ ಅಗತ್ಯವಿಲ್ಲ. ನಮ್ಮ ನಮ್ಮ ಮನೆಗಳಲ್ಲಿ ಬಳಕೆಯಾಗುವ, ಪಟ್ಟಣಗಳಲ್ಲಿ ಬಳಕೆಯಾಗುವ ಪ್ಲಾಸ್ಟಿಕ್ ಬಳಕೆಯನ್ನು ಕಂಡರೆ ಮೇಲಿನ ಮಾತಾಗಲೀ, ಅಧ್ಯಯನದ ವರದಿಯ ಅಂಶವಾಗಲೀ ಸುಳ್ಳೆನಿಸದು.
ಇವುಗಳನ್ನೂ ಓದಿ : ಯಮುನಾ ಒತ್ತುವರಿ: ನದಿಗಳು ಉಳಿದರಷ್ಟೇ ನಾವು !
ಈ 9.3 ಮಿಲಿಯನ್ ಮೆಟ್ರಿಕ್ ಟನ್ ಎಂದರೆ ಒಟ್ಟೂ ಜಗತ್ತಿನಲ್ಲಿ ಉಂಟಾಗುತ್ತಿರುವ ಪ್ಲಾಸ್ಟಿಕ್ ಮಾಲಿನ್ಯದ ಐದನೇ ಒಂದರಷ್ಟು. ಇಷ್ಟಕ್ಕೂ ಈ ಅಧ್ಯಯನದ ಕಥೆ ನಗರಗಳಿಗೆ ಸೀಮಿತವಾದದ್ದು. ಇದರಲ್ಲಿ ಗ್ರಾಮೀಣ ಪ್ರದೇಶದ, ಸುಡುವಂಥ ತ್ಯಾಜ್ಯಗಳನ್ನು ಸೇರಿಸದೇ ನೀಡಿರುವ ಅಂಕಿಅಂಶ.
ಭಾರತದ ಹಿಂದಿರುವ ದೇಶಗಳೆಂದರೆ ನೈಜೀರಿಯಾ (3.5 ಮೆ.ಟನ್), ಇಂಡೋನೇಶಿಯಾ (3.4 ಮೆ.ಟನ್). ಈ ಹಿಂದಿನ ಅಧ್ಯಯನದಲ್ಲಿ ಚೀನಾ ಮೊದಲ ಸ್ಥಾನದಲ್ಲಿತ್ತು. ಆದರೆ ಅದೀಗ ನಾಲ್ಕನೇ ಸ್ಥಾನಕ್ಕೆ ತಲುಪಿದೆ. ಅಧ್ಯಯನದ ಪ್ರಕಾರ ಚೀನಾದಲ್ಲಿ ತ್ಯಾಜ್ಯಗಳನ್ನು ಹೆಚ್ಚಾಗಿ ಸುಡಲಾಗುತ್ತಿದೆ. ಅದರೊಂದಿಗೆ ವ್ಯವಸ್ಥಿತವಾಗಿ ಹೂಳಲಾಗುತ್ತಿದೆ. ಹಾಗಾಗಿ ಪ್ಲಾಸ್ಟಿಕ್ ಮಾಲಿನ್ಯ ಕಡಿಮೆಯಾಗುತ್ತಿದೆ ಎನ್ನಲಾಗಿದೆ. ಆದರೆ ಅದು ಮತ್ತೊಂದು ಬಗೆಯ ಮಾಲಿನ್ಯವಲ್ಲವೇ ಎಂಬುದರ ಬಗ್ಗೆ ಪ್ರಸ್ತಾಪವಾಗಿಲ್ಲ.
ಇವುಗಳನ್ನೂ ಓದಿ :ಏಷ್ಯಾದ ಶ್ರೀಮಂತ ಹಳ್ಳಿ ಗುಜರಾತಿನಲ್ಲಿದೆ, ಅಲ್ಲಿ ಎಲ್ಲವೂ ಇದೆ !
ಹದಿನೈದು ವರ್ಷಗಳಲ್ಲಿ ಮುಖ್ಯವಾಗಿ ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹಿಸಲಾಗುವ ತ್ಯಾಜ್ಯ ಗಳ ವ್ಯವಸ್ಥಿತ ವಿಲೇವಾರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಚೀನಾ ಗಮನಹರಿಸಿತು. ಆ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಿತು. ಅದರ ಪರಿಣಾಮವಿದು ಎಂದಿದೆ ಅಧ್ಯಯನ.
ಜಗತ್ತಿನ ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಉಲ್ಲೇಖಿಸಿರುವ ಅಧ್ಯಯನ, 2020 ರಲ್ಲಿ ವಾರ್ಷಿಕ 52.1 ಮೆ.ಟನ್ ನಷ್ಟಿತ್ತು. ಒಟ್ಟೂ ಪ್ಲಾಸ್‌ಟಿಕ್ ತ್ಯಾಜ್ಯದ ಶೇ. 69 ರಷ್ಟು ಅಂದರೆ 35.7 ಮೆ.ಟನ್ ನಷ್ಟು 20 ದೇಶಗಳಿಂದ ಉತ್ಪತ್ತಿಯಾಗುತ್ತಿದೆ. ಈ ಪೈಕಿ 4 ಕಡಿಮೆ ತಲಾ ಆದಾಯ ಹೊಂದಿರುವ ರಾಷ್ಟ್ರಗಳು, 9 ಮಧ್ಯಮ ಆದಾಯ ಹೊಂದಿದ್ದರೆ, 7 ಹೆಚ್ಚು ಆದಾಯ ಹೊಂದಿರುವ ರಾಷ್ಟ್ರಗಳಿವೆ.
ಇವುಗಳನ್ನೂ ಓದಿ :ಇದು ಡಾರ್ಜಿಲಿಂಗ್ ಸಮಸ್ಯೆಯಷ್ಟೇ ಎಂದುಕೊಳ್ಳಬೇಡಿ; ನಮ್ಮ ಊರಿನದ್ದೂ ಸಹ
ವಿಚಿತ್ರವೆಂದರೆ, ಅತಿ ಹೆಚ್ಚು ಆದಾಯ ಹೊಂದಿರುವ ದೇಶಗಳು ಅತಿ ಹೆಚ್ಚು ಪ್ಲಾಸ್ಟಿಕ್ ಮಾಲಿನ್ಯ ಮಾಡುತ್ತಿವೆ. ಆದರೆ ಅವುಗಳು ಕಸ ಸಂಗ್ರಹ ಹಾಗೂ ಸಮರ್ಪಕ ವಿಲೇವಾರಿ ವ್ಯವಸ್ಥೆ ಸ್ಥಾಪಿಸಿರುವ ಕಾರಣ ಅತಿ ಹೆಚ್ಚು ಮಾಲಿನ್ಯ ಮಾಡುತ್ತಿರುವ 90 ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಲ್ಲ ಎಂಬುದು ಅಧ್ಯಯನದ ಅಂಶ. ಇದನ್ನೂ ಪೂರ್ತಿ ನಂಬಲಾಗದು. ಅಧ್ಯಯನದಲ್ಲಿ ಈ ಅತಿ ಹೆಚ್ಚು ಆದಾಯವುಳ್ಳ ರಾಷ್ಟ್ರಗಳ ಇಡೀ ವ್ಯವಸ್ಥೆಯನ್ನು ಗಮನಿಸಿದ್ದಂತೆಯೂ ತೋರುತ್ತಿಲ್ಲ. ಈ ರಾಷ್ಟ್ರಗಳು ತಮ್ಮ ತ್ಯಾಜ್ಯವನ್ನು ಬಡ ರಾಷ್ಟ್ರಗಳಿಗೆ ಸಾಗಿಸುವ ವ್ಯವಸ್ಥಿತ ತಂತ್ರವನ್ನು ಅನುಸರಿಸುವುದೂ ಸುಳ್ಳಲ್ಲ.
ಆದರೂ ಪ್ಲಾಸ್ಟಿಕ್ ಏನು ಮಹಾ ಎಂದು ಮೂಗು ಮುರಿಯಬೇಡಿ. ನಾವು ತಿನ್ನುವ ಅನ್ನ, ಸೇವಿಸುವ ಗಾಳಿ, ಕುಡಿಯುವ ನೀರು ಎಲ್ಲದರಲ್ಲೂ ಮೈಕ್ರೋ ಪ್ಲಾಸ್ಟಿಕ್ಸ್ ನ ಹಾವಳಿ ಹೆಚ್ಚುತ್ತಿದೆ. ಒಂದು ದಿನ ಈ ಮೊಸಳೆ ಕಾಳಸರ್ಪದಂತಾಗಿ ನಮ್ಮ ಕುತ್ತಿಗೆಯನ್ನು ಹಿಸುಕಬಹುದು, ಎಚ್ಚರವಿರಲಿ.