Thursday, May 30, 2024
spot_imgspot_img

Top 5 This Week

spot_img

Related Posts

ಅಮರಾವತಿ ಯೋಜಿಸಿದಂತೆ ರೂಪುಗೊಂಡರೆ ಮಾದರಿ ನಗರ

ಇಂದ್ರನ ಅಮರಾವತಿ ಬಗ್ಗೆ ಕೇಳಿದ್ದೆವು. ಇದು ಚಂದ್ರನ ಅಮರಾವತಿ ಬಗ್ಗೆ. ಅಂದರೆ ತೆಲುಗು ದೇಶಂನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಅಮರಾವತಿ. ಆಂಧ್ರ ಪ್ರದೇಶದ ಕನಸಿನ ರಾಜಧಾನಿ. ಅಮರಾವತಿ ಇಂದ್ರನ ರಾಜಧಾನಿಗಿಂತ ಚೆನ್ನಾಗಿ ಆಗಬಹುದೇ? ಇಂಥದೊಂದು ಪ್ರಶ್ನೆ ಉದ್ಭವಿಸಿತ್ತು. ಚಂದ್ರಬಾಬು ನಾಯ್ಡು ಕನಸಿದು. ಮುಖ್ಯಮಂತ್ರಿಯಾಗಿದ್ದಾಗ ನಗರ ನಿರ್ಮಾಣಕ್ಕೆ ಚಾಲನೆ ಕೊಟ್ಟರು. ಆದರೆ ನಂತರದ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡರು. ಬಳಿಕ ಬಂದ ವೈಎಸ್‌ ಆರ್‌ ಕಾಂಗ್ರೆಸ್‌ ನ ಜಗನ್‌ ಮೋಹನ್‌ ರೆಡ್ಡಿ ಸರಕಾರ ಈಗ ಅದರ ಉಸ್ತುವಾರಿ ವಹಿಸಿಕೊಂಡಿದೆ. ಕಾಮಗಾರಿಗಳು ನಡೆಯುತ್ತಿವೆ. ಆದರೆ ಆಗಬೇಕಾದಷ್ಟು ವೇಗದಲ್ಲಿ ಅಲ್ಲ. ಬದಲಾದ ಸರಕಾರದ ಆದ್ಯತೆಗಳು ಯೋಜನೆಯ ಜಾರಿಗೆ ಮಂದಗತಿ ಒದಗಿಸಿದೆ. ಒಂದುವೇಳೆ ಮುಂದಿನ ಜೂನ್‌ ನಲ್ಲಿ ಏನಾದರೂ ಸರಕಾರ ಬದಲಾಗಿ ಮತ್ತೆ ಚಂದ್ರಬಾಬು ನಾಯ್ಡು ಅಧಿಕಾರಕ್ಕೆ ಬಂದರೆ ಅಮರಾವತಿ ಅಭಿವೃದ್ಧಿಗೆ ವೇಗ ದೊರಕಬಹುದು.

ಅಮರಾವತಿ ಕಲ್ಪನೆ ಬಗ್ಗೆ ಗಮನಿಸುವುದಾದರೆ ಯೋಜನೆ ಪ್ರಕಾರ ದೇಶದ ರಾಜಧಾನಿಗಳಿಗೆ ಮಾದರಿಯಾಗಬಹುದು. ಅದಕ್ಕಿಂತ ಹೆಚ್ಚಾಗಿ ಕೇಂದ್ರ ಸರಕಾರದ ಸ್ಮಾರ್ಟ್‌ ಸಿಟಿ ಯೋಜನೆಯಡಿ ರೂಪುಗೊಳ್ಳುವ 100 ಸ್ಮಾರ್ಟ್‌ ನಗರಗಳಿಗಿಂತ ಚೆನ್ನಾಗಿ ಇದು ಸ್ಮಾರ್ಟ್‌ ಕ್ಯಾಪಿಟಲ್‌ (ರಾಜಧಾನಿ) ಆಗಬೇಕಿದೆ. ಮುಂದಿನ ದಿನಗಳಲ್ಲಿ ಹೇಗಾಗುತ್ತದೆಯೋ ಕಾದು ನೋಡಬೇಕು.

ಮೊದಲನೆಯದಾಗಿ ಸ್ಮಾರ್ಟ್‌ ನಗರವಾಗಿಯೇ, ರಾಜಧಾನಿಯಾಗಿಯೇ ಅಮರಾವತಿಯನ್ನು ರೂಪಿಸಲಾಗುತ್ತಿದೆ. ಅಂದರೆ ಈಗಿರುವ ನಗರಗಳನ್ನು ಸ್ಮಾರ್ಟ್‌ ಗೊಳಿಸುವುದಲ್ಲ. ತೇಪೆ ಹಾಕಿ ಹೊಸ ರೂಪ ಕೊಡುವುದಲ್ಲ. ಹೊಸದನ್ನೇ ಸೃಷ್ಟಿಸುವುದು. ಆದ ಕಾರಣ ಎಲ್ಲರ ಕುತೂಹಲದ ಕಣ್ಣು ಅಲ್ಲಿ ನೆಟ್ಟಿದೆ. ಆದರೆ ಎಲ್ಲರ ದೃಷ್ಟಿಯ ಫಲವೋ ಏನೂ ಸರಕಾರ ಬದಲಾಗಿದೆ, ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದೆ.

ಥೀಮ್‌ ನಗರಗಳು

ನವ ನಗರವೆಂದು ಹೇಳಬಹುದಾದ ಮಾದರಿ ಇದು. ಒಂದು ಅಮರಾವತಿಯೊಳಗೆ ಒಂಬತ್ತು ನಗರಗಳಿರಲಿವೆ. ವಾಣಿಜ್ಯ ನಗರ, ಆರೋಗ್ಯ ನಗರ, ಜ್ಞಾನ ನಗರ, ತಂತ್ರಜ್ಞಾನ ನಗರ, ಆರ್ಥಿಕ ನಗರ, ಮಾಧ್ಯಮ ನಗರ, ಕ್ರೀಡಾ ನಗರ, ಪ್ರವಾಸೋದ್ಯಮ ನಗರ ಹಾಗೂ ಸರಕಾರಿ ನಗರ.

ಆರೋಗ್ಯ ನಗರದಲ್ಲಿ ಹೆಸರೇ ಹೇಳುವಂತೆ ಎಲ್ಲ ಆರೋಗ್ಯ ಸೌಲಭ್ಯಗಳೂ ಲಭ್ಯವಾಗಲಿದೆ. ಅತ್ಯಾಧುನಿಕ ಆಸ್ಪತ್ರೆಗಳು, ಆರೋಗ್ಯ ವಿಶ್ವವಿದ್ಯಾಲಯವೆಲ್ಲವೂ ಬರಲಿದೆ. ಇದರೊಂದಿಗೆ ಎಐಎಂಎಸ್‌ ನಂಥ ಶಿಕ್ಷಣ ಸಂಸ್ಥೆಯನ್ನು ಒಳಗೊಂಡ ಹಲವಾರು ವಿಶ್ವವಿದ್ಯಾಲಯಗಳು, ಕಾಲೇಜುಗಳು ಕಾರ್ಯ ನಿರ್ವಹಿಸುವುದು ಶಿಕ್ಷಣ ನಗರಿಯಲ್ಲಿ. ಐನೂರು ಕೋಟಿ ವೆಚ್ಚದಲ್ಲಿ ಹೈದರಾಬಾದ್‌ ಸ್ಕೂಲ್‌ ಆಫ್ ಬ್ಯುಸಿನೆಸ್‌ ಅಸ್ತಿತ್ವ ಕಾಣುತ್ತಿರುವುದು ವಾಣಿಜ್ಯ ನಗರದಲ್ಲಿ. ಸುಮಾರು 33 ಸಾವಿರ ಕೋಟಿ ರೂ. ಗಳ ವೆಚ್ಚದಲ್ಲಿ ನಗರ ನಿರ್ಮಿಸುವ ಇರಾದೆ ಇತ್ತು. ಹುಡ್ಕೊ (ಹೌಸಿಂಗ್‌ ಅಂಡ್‌ ಅರ್ಬನ್‌ ಡೆವಲಪ್‌ ಮೆಂಟ್‌ ಕಾಪೋರೇಷನ್)‌ ನಿಂದ 7, 500 ಕೋಟಿ ರೂ, ವಿಶ್ವ ಬ್ಯಾಂಕ್‌ ನಿಂದ 500 ಮಿಲಿಯನ್‌, ಕೇಂದ್ರ ಸರಕಾರದ 2, 500 ಕೋಟಿ ರೂ.ಗಳನ್ನು ಸೇರಿಸಿ ನಗರ ನಿರ್ಮಿಸುವ ಯೋಜನೆಯಿದೆ.

ಇವೂ ಆಸಕ್ತಿಕರವಾದುದೇ : ಕೊಡಗು ಮರುಗುತ್ತಿದೆ; ಕಾವೇರಿ ಸೊರಗುತ್ತಿದ್ದಾಳೆ !

ಇಷ್ಟೇ ಅಲ್ಲ

ಇಂಥ ಪ್ರತ್ಯೇಕ ನಗರಗಳಿಗಷ್ಟೇ ಅಮರಾವತಿ  ಕಾರಣವಾಗುತ್ತಿಲ್ಲ.  ಆಧುನಿಕ ನಗರಗಳಲ್ಲಿ ಅತ್ಯಂತ ದೊಡ್ಡ ಸವಾಲಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವಿಭಿನ್ನ ನೆಲೆಯಲ್ಲಿ ನೋಡುತ್ತಿರುವುದು. ಹೈಕೋರ್ಟ್‌ ಒಂದು ಬಗೆಯಲ್ಲಿ ಬೌದ್ಧ ಸ್ತೂಪ ಮಾದರಿಯಲ್ಲಿರುತ್ತದಂತೆ. ಇನ್ನುಳಿದ ಕಟ್ಟಡಗಳೂ ಪರಿಸರ ಸ್ನೇಹಿಯಾಗಿರುತ್ತವೆ ಎಂಬುದು ಎಲ್ಲರ ನಿರೀಕ್ಷೆ.

ಇನ್ನು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಗ್ಗೆ ಹೇಳಲೇಬೇಕು. ಪ್ರಸ್ತುತ ಇರುವ ಹಲವು ನಗರಗಳಲ್ಲಿ ಒಂದಕ್ಕೊಂದು ಪೂರಕವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಹು ವಿಧಾನಗಳನ್ನು ಬಳಸುತ್ತಿಲ್ಲ. ಈ ಹಿಂದೆಯೇ ಉಲ್ಲೇಖೀಸಿದಂತೆ, ಬಸ್ಸು, ಸಬರ್ಬನ್‌ ರೈಲು ಇತ್ಯಾದಿಗಳೆಲ್ಲವೂ ಪರ್ಯಾಯವಾಗಿಯೇ ಸಂಚರಿಸುತ್ತವೆ. ಇಲ್ಲಿ ಆ ವ್ಯವಸ್ಥೆಯಲ್ಲಿ ಸಣ್ಣದೊಂದು ವ್ಯತ್ಯಾಸ ಮಾಡುವ ಸಾಧ್ಯತೆ ಕಂಡು ಬಂದಿದೆ. ಇಲ್ಲಿ ರೂಪುಗೊಳ್ಳುತ್ತಿರುವುದು ಏಕೀಕೃತ ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಅಂದರೆ ಒಂದಕ್ಕೊಂದು ಪೂರಕವಾಗಿರುತ್ತದೆಂದು ಅರ್ಥ.

ಸುಮಾರು 12 ಕಿ.ಮೀ ವ್ಯಾಪ್ತಿಯಲ್ಲಿ ಮೆಟ್ರೋ ರೈಲು ಕಾರ್ಯ ನಿರ್ವಹಿಸಿದರೆ, ಸುಮಾರು 15 ಕಿ.ಮೀ ವ್ಯಾಪ್ತಿಯಲ್ಲಿ ಬಸ್‌ಗಳು ಲಭ್ಯವಿರುತ್ತವೆ.  ಹಾಗೆಯೇ ಇಲ್ಲಿ ನಿರ್ಮಾಣವಾಗುವ ಬಹುಪಾಲು ಮುಖ್ಯ ರಸ್ತೆಗೆ ಪರ್ಯಾಯವಾಗಿ ಜಲಮಾರ್ಗಗಳನ್ನೂ ರೂಪಿಸಲಾಗುತ್ತದೆ. ಅದರಲ್ಲಿ  ಟ್ಯಾಕ್ಸಿ ಸೇವೆಯನ್ನು ಆರಂಭಿಸುವ ಉದ್ದೇಶವಿದೆ. ಅರ್ಮ್ಸ್ಟ್ರಾಡಂ, ನ್ಯೂಯಾರ್ಕ್‌ನಲ್ಲಿ ಇಂಥ ಸೇವೆ ಲಭ್ಯವಿದೆ. ಇದು ನಿಜಕ್ಕೂ ಕುತೂಹಲದ ಸಂಗತಿಯೇ.

ಉದ್ಯಾನಗಳು

ಕಾಂಕ್ರೀಟ್‌ ಕಟ್ಟಡ, ರಸ್ತೆಗಳು, ವಾಹನ ದಟ್ಟಣೆ ಇತ್ಯಾದಿಗಳಿಂದ ನಲುಗಿರುವ ನಗರಗಳಲ್ಲಿ ಉಸಿರಾಡಲು ಇರುವ ಸಣ್ಣ ಅವಕಾಶವೆಂದರೆ ಉದ್ಯಾನಗಳು. ನಗರ ಬದುಕಿನ ಒತ್ತಡವನ್ನು ಕಡಿಮೆಗೊಳಿಸಿಕೊಳ್ಳುವಲ್ಲಿ ಉದ್ಯಾನಗಳು ವಹಿಸುವ ಪಾತ್ರ ಸಣ್ಣದಲ್ಲ. ಅದರ ಮಹತ್ವ ಎಲ್ಲರಿಗೂ ತಿಳಿದದ್ದೇ. ಇತ್ತೀಚೆಗೆ ನಮ್ಮ ಗ್ರಾಮೀಣ ಪ್ರದೇಶಗಳಲ್ಲೂ ಉದ್ಯಾನಗಳು ತಲೆ ಎತ್ತುತ್ತಿರುವುದು ಇದೇ ಕಾರಣಕ್ಕಾಗಿ. ಸ್ವಲ್ಪ ನಗರ ಪ್ರದೇಶದ ಲಕ್ಷಣವನ್ನು ಹೊಂದುತ್ತಿರುವ ಸ್ಥಳೀಯ ಸಂಸ್ಥೆಗಳೆಲ್ಲಾ ಉದ್ಯಾನಕ್ಕೆ ಜಾಗ ಮೀಸಲಿಡುತ್ತಿವೆ. ಈಗಿರುವಾಗ ಅಮರಾವತಿಯ ಶೇ. 51 ರಷ್ಟು ಭಾಗ ಹಸಿರುಮಯವಾಗಿರುತ್ತದಂತೆ. ಶೇ. 10 ರಷ್ಟು ಭಾಗ ಕೆರೆ, ಕೊಳಗಳಿಂದ ಆವೃತ್ತವಾಗಿರುತ್ತದಂತೆ. ಜತೆಗೆ ಸುಮಾರು 25 ಕಿ.ಮೀ ನಷ್ಟು ಸೈಕ್ಲಿಂಗ್‌ ಟ್ರ್ಯಾಕ್‌ ಹಾಗೂ ವಾಯು ವಿಹಾರ ಟ್ರ್ಯಾಕ್‌ ಗಳನ್ನು ರೂಪಿಸಲಾಗುತ್ತಿದೆ. ಇವೆಲ್ಲವೂ ಮಾಡುತ್ತಿರುವುದು ಜನರು ಖುಷಿಯಾಗಿರಬೇಕೆಂದು ಎಂಬುದು ಸರಕಾರದ ಹೇಳಿಕೆ.

ಈ ಲೇಖನವೂ ಆಸಕ್ತಿಕರವಾದುದೇ : ಹೌಸ್‌ ಫುಲ್…ಮಹಾನಗರಗಳು ಭರ್ತಿಯಾಗಿವೆ !

ಆಂಧ್ರ ಪ್ರದೇಶ ಸರಕಾರ ಸುಮಾರು 16 ಸಾವಿರ ಕೋಟಿ ರೂ. ಗಳನ್ನು ಇಂಧನ ವ್ಯವಸ್ಥೆಗೆ ವೆಚ್ಚ ಮಾಡುತ್ತಿದೆ. ಇಂಧನ ದಕ್ಷತೆಯಲ್ಲಿ ಎಲ್ಲರಿಗಿಂತಲೂ ಮುಂದಿರಬೇಕೆಂಬ ಮಹಾತ್ವಾಕಾಂಕ್ಷೆ ಇದರ ಹಿಂದೆ ಕೆಲಸ ಮಾಡುತ್ತಿದೆ.  ಹಾಗಾಗಿ ಕಟ್ಟಡಗಳ ನಿರ್ಮಾಣ ಹಂತದಿಂದಲೂ ಇಂಧನ ದಕ್ಷತೆಗೆ ಗಮನ ನೀಡಲಾಗುತ್ತದೆ. ಎಷ್ಟರ ಮಟ್ಟಿಗೆ ಎಂದರೆ ಗಾಳಿ, ಬೆಳಕು ಹಾಗೂ ಹವಾಮಾನದ ಅಧ್ಯಯನವನ್ನೂ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ ನವೀಕರಿಸಬಹುದಾದ ಇಂಧನ ಮೂಲಗಳನ್ನು ಯಥೇತ್ಛವಾಗಿ ಇಲ್ಲಿ ಬಳಸಿಕೊಳ್ಳುತ್ತಿರುವುದು ಉಲ್ಲೇಖನೀಯ.

ಇಂಥದೊಂದು ಅಮರಾವತಿ ?

ಹೌದು, ಇಂಥದೊಂದು ಅಮರಾವತಿ ಸಂಪೂರ್ಣವಾಗಿ ನಮ್ಮ ಕಣ್ಣೆದುರುನಿಲ್ಲಲು ಕನಿಷ್ಠ 10 ವರ್ಷಗಳು ಬೇಕು ಎಂದು ಅಂದಾಜಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದರೆ, 2029 ರೊಳಗೆ ಅಮರಾವತಿ ಎದ್ದು ನಿಲ್ಲಬೇಕು. ಸಾಕಷ್ಟು ಕಾಮಗಾರಿಗಳು ಆರಂಭವಾದವು. ಆದರೆ ಇದರ ಮಧ್ಯೆ ಬದಲಾದ ಸರಕಾರದ ಕಾರಣದಿಂದ ಯೋಜನೆಗಳಲ್ಲಿ ಕೆಲವು ಬದಲಾದವು. ರಾಜಧಾನಿಯೇ ವಿಜಯವಾಡಕ್ಕೆ ಸ್ಥಳಾಂತರವಾಗಿ ಅಲ್ಲಿ ಅಭಿವೃದ್ಧಿ ನಡೆಯುತ್ತದೆಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಸರಕಾರದ ಜನಪ್ರಿಯ ಕೆಲವು ಆಲೋಚನೆಗಳು ಯೋಜನೆಯ ರೂಪ ಪಡೆದವು.ಅದಕ್ಕೆ ಸ್ಥಳ ಕಲ್ಪಿಸಲು ಬೇರೆ ಯೋಜನೆಗಳನ್ನು ಮಾರ್ಪಾಡು ಮಾಡಲಾಯಿತು. ಇದರ ಮಧ್ಯೆ ಕೆಲವರು ಕೋರ್ಟ್‌ ಮೆಟ್ಟಿಲೇರಿದರು. ಇಷ್ಟಕ್ಕೇ ಮುಗಿಯಲಿಲ್ಲ. ಮೂರು ರಾಜಧಾನಿಗಳು ಬೇಕು, ಒಂದಲ್ಲ ಎಂಬ ಆಲೋಚನೆಯೂ ಮೂರ್ತ ರೂಪ ಪಡೆಯಿತು. ಅದು ವಿಧಾನಸಭೆಯಲ್ಲಿ ಕಾಯಿದೆ ಆಗುವ ಮಟ್ಟಿಗೆ ಬೆಳೆಯಿತು. ಆಮೇಲೆ ಸರಕಾರಕ್ಕೇ ಏನನ್ನಿಸಿತೋ, ಆ ಆಲೋಚನೆಯನ್ನು ಕೈಬಿಟ್ಟಿತು. ಹೈಕೋರ್ಟ್‌ ಸಹ ಒಂದೇ ರಾಜಧಾನಿ ಸೂಕ್ತ ಎಂದು ಅಭಿಪ್ರಾಯಪಟ್ಟಿತು. ಹೀಗೆ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ. ಇನ್ನೆಷ್ಟು ವರ್ಷಗಳು ಬೇಕೋ ಅಥವಾ ಯೋಜಿತ ಅವಧಿಯೊಳಗೆ ನಗರ ಎದ್ದು ನಿಲ್ಲುವುದೋ ಕಾದು ನೋಡಬೇಕು. ನಗರವನ್ನು ರೂಪುಗೊಳಿಸಲು ಯಾವುದೇ ಸ್ಪಷ್ಟ ಕಾಲಮಿತಿಯನ್ನು ಹೊಂದಿಲ್ಲವೆಂಬಂತೆ ತೋರುತ್ತಿದೆ.

ಅಮರಾವತಿ ಕನಸು ಸುಂದರವಾಗಿದೆ. ನಗರಗಳೆಂಬ ಎಲ್ಲ ಕನಸುಗಳೂ ಹೀಗೆಯೇ ಇರಬೇಕೆಂದು ಬಯಸುವುದು ತೀರಾ ಸಹಜ. ಆದರೆ ಸಾಧ್ಯವೇ ಎಂಬುದು ದೊಡ್ಡ ಪ್ರಶ್ನೆ. ಆದರೂ ಅಮರಾವತಿಯನ್ನು ಜಗತ್ತಿನ ಅತ್ಯಂತ ಸುಂದರ ಬದುಕಿನ ನಗರವಾಗಿ ರೂಪಿಸಬೇಕೆಂಬ ಅಭಿಲಾಷೆ ಆ ಕನಸು ಕಂಡ ಆಗಿನ ಸರಕಾರದ್ದಾಗಿತ್ತು.

ಅಸಕ್ತಿಕರ ಸಂಗತಿಯೆಂದರೆ, ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಎನ್‌ ಡಿ ಎ ತೆಕ್ಕೆಗೆ ಮತ್ತೆ ತೆಲುಗುದೇಶಂ ಪಕ್ಷ ಬಂದಿದೆ. ಇದರೊಂದಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಹ ಇತ್ತೀಚೆಗೆ ಆಂದ್ರ ಪ್ರದೇಶದಲ್ಲಿ ನಡೆಸಿದ ಸಭೆಯಲ್ಲಿ ಅಮರಾವತಿ ಅಭಿವೃದ್ಧಿಗೆ ಬಿಜೆಪಿ ಸಿದ್ಧ ಎಂದು ಪ್ರಕಟಿಸಿತ್ತು. ಈಗಿನ ಲೋಕಸಭಾ ಚುನಾವಣೆಯಲ್ಲಿ (2024) ಮತ್ತೆ ಬಿಜೆಪಿ ಗೆದ್ದು ಬಂದು, ಆಂದ್ರ ಪ್ರದೇಶದಲ್ಲೂ ತೆಲುಗು ದೇಶಂ ಅಧಿಕಾರಕ್ಕೆ ಬಂದರೆ ಅಮರಾವತಿಗೆ ಅಭಿವೃದ್ಧಿ ಯೋಗ ಮತ್ತೆ ಕೂಡಿ ಬರಬಹುದು.

RurbanIndia
RurbanIndia
RurbanIndia is a space to redesign, revalue and rejuvenate our Rurban Development. A comprehensive strategy and think tank towards our Rurbansphere. RurbanIndia is a webspace of EkaAneka Media.

LEAVE A REPLY

Please enter your comment!
Please enter your name here

Popular Articles