ಎರಡು ದಿನಗಳಿಂದ ಮಳೆ ತೊಟ್ಟಿಕ್ಕತೊಡಗಿದೆ. ಕೆಲವು ಕಡೆ ತುಸು ಜೋರಾಗಿ, ಇನ್ನು ಕೆಲವೆಡೆ ತೊಟ್ಟಿಕ್ಕುವ ಮಾದರಿಯಲ್ಲಿ, ಇನ್ನೂ ಹಲವೆಡೆ ಬಂದು ಹೋದೆ ಎನ್ನುವುದಕ್ಕಷ್ಟೇ ಎನ್ನುವ ಹಾಗೆ ಮಳೆ ಬಂದಿದೆ. ಇದು ಮುಂಗಾರು ಪೂರ್ವ ಮಳೆ. ಹಾಗಾದರೆ ಮುಂಗಾರು ಚೆನ್ನಾಗಿರಬಹುದೆಂದು ರೈತರಾದಿಯಾಗಿ ಭಾವಿಸತೊಡಗಿದ್ದಾರೆ. ನಗರದ ಮಂದಿಯೂ ಮಳೆಯ ನೀರು ಚರಂಡಿಯಲ್ಲಿ ತುಂಬಿ ರಾಡಿ ಎಬ್ಬಿಸುವಾಗ ಬೈದುಕೊಳ್ಳಬಹುದು ಇದೆಂಥ ಮಳೆ ಎಂದು. ಇಡೀ ವಾತಾವರಣವೆಲ್ಲ ತಂಪಾಗಿ ಬೀಸಿ ಬರುವ ಗಾಳಿ ತಂಗಾಳಿಯಾಗಿ ತೀಡುವಾಗ ಮಳೆ ಇರಲಿ ಎಂದುಕೊಳ್ಳುತ್ತಾರೆ.
ಇಡೀ ಜಲಚಕ್ರದ ಮೂಲ ನೆಲೆ-ಸೆಲೆಯೇ ಮಳೆ. ನೀರು ನಮಗೆ ಸಿಗಬೇಕೆಂದರೆ ಮಳೆ ಸರಿಯಾಗಬೇಕು. ಭೂಮಿ ಇಂಗಿಸಿಕೊಳ್ಳಬೇಕು. ಹೀಗೆ..ಇಷ್ಟೆಲ್ಲ ಹೇಳುವಾಗ ನೀರು ಸಮೃದ್ಧಿಯ ಅತ್ಯಂತ ಪ್ರಮುಖ ಮತ್ತು ಮೂಲ ನೆಲೆ ಎನ್ನುವುದರಲ್ಲಿ ಸಂಶಯವೂ ಇಲ್ಲ. ನೀರಿದ್ದರೆ ಬೆಳೆ, ಬೆಳೆ ಇದ್ದರೆ ಬದುಕು. ಇಂತ ಬದುಕಿಗೆ, ಸಮೃದ್ಧಿಗೆ ಮೂಲ ನೆಲೆಯಾದ ನೀರಿನ ಲಭ್ಯತೆ ಮತ್ತು ಹಂಚಿಕೆ ಹಲವಾರು ಕಾರಣಗಳಿಂದ ಅಸಮತೋಲನದಿಂದ ಕೂಡಿದೆ. ಜನಸಂಖ್ಯಾ ಸ್ಪೋಟ, ನಗರೀಕರಣ, ಹವಾಮಾನ ವೈಪರೀತ್ಯ ಎಲ್ಲವೂ ಸೇರಿ ಮಾಡಿದ ಕೆಲಸವೆಂದರೆ ಈ ಅಸಮತೋಲವನ್ನು ಮತ್ತಷ್ಟು ಹೆಚ್ಚಿಸಿದ್ದು.
ವಿಶ್ವಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿದ ಒಂದು ವರದಿ ಪ್ರಕಾರ, ಜಲಮೂಲಗಳ ಲಭ್ಯತೆ, ಅವುಗಳ ಅನುಭವಿಸುವಿಕೆಯ ನಡುವಿನ ಅಂತರ ಹೆಚ್ಚಾಗುತ್ತಿದೆಯಂತೆ. ಆರ್ಥಿಕ ಅಭಿವೃದ್ಧಿ ಮತ್ತು ಮಾನವ ಅಭಿವೃದ್ಧಿಯಲ್ಲಿ ಇದು ಬಹಳ ಮಹತ್ವದ ಪಾತ್ರ ವಹಿಸಲಿದೆ.
ಈಗಾಗಲೇ ಉಲ್ಲೇಖಿಸಿದಂತೆ ಜಲವು ಸಮೃದ್ಧಿಯ ಮೂಲ ಬಿಂದುವಾದರೂ ಉತ್ತಮ ಗುಣಮಟ್ಟದ ಕುಡಿಯುವ ನೀರು ಹಾಗೂ ನೈರ್ಮಲ್ಯ ಕಾಪಾಡಲು ಅಗತ್ಯವಿರುವ ನೀರು ಇನ್ನೂ ಕೋಟ್ಯಂತರ ಮಂದಿಗೆ ಲಭ್ಯವಾಗುತ್ತಿಲ್ಲ. ಇಲ್ಲವೇ ಅದನ್ನು ಪಡೆಯಲು ಹರಸಾಹಸ ಪಡುತ್ತಿದ್ದಾರೆ ಎನ್ನುತ್ತದೆ ಬಾಲಿಯಲ್ಲಿ ಬಿಡುಗಡೆಯಾದ ವರದಿ.
ಆಘಾತಕಾರಿ ಎನ್ನಿಸುವ ಅಂಕಿಅಂಶಗಳೆಂದರೆ, 2022 ರಲ್ಲಿ 2.2 ಶತಕೋಟಿ ಜನರು ಯೋಗ್ಯ ಕುಡಿಯುವ ನೀರನ್ನು ಪಡೆಯವಲ್ಲಿ ವಿಫಲರಾದರು. ಹಾಗೆಯೇ ಇನ್ನೂ 3.5 ಶತಕೋಟಿ ಜನರು ಸುರಕ್ಷ ಹಾಗೂ ಸೂಕ್ತ ನೈರ್ಮಲ್ಯ ವ್ಯವಸ್ಥೆಯನ್ನು ಹೊಂದಲಿಲ್ಲ. ಹಾಗೆಯೇ ಈ ಕೊರತೆ ಗ್ರಾಮೀಣ ಪ್ರದೇಶಗಳನ್ನು ತುಸು ಹೆಚ್ಚಾಗಿಯೇ ಬಾಧಿಸತೊಡಗಿದೆ.
ಬಹಳ ಮುಖ್ಯವಾಗಿ ಕಡಿಮೆ ಜಿಡಿಪಿ ಹೊಂದಿರುವ ರಾಷ್ಟ್ರಗಳಲ್ಲಂತೂ 23 ವರ್ಷಗಳಿಂದ ನಿರಂತರವಾಗಿ ಸುಮಾರು 197 ದಶಲಕ್ಷದಷ್ಟು ಮಂದಿ ಯೋಗ್ಯ ಕುಡಿಯುವ ನೀರಿನ ಹುಡುಕಾಟದಲ್ಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಹತ್ತು ಜನರಲ್ಲಿ ಎಂಟು ಮಂದಿಗೆ ಯೋಗ್ಯ ಕುಡಿಯುವ ನೀರು ಹಾಗೂ ನೈರ್ಮಲ್ಯ ವ್ಯವಸ್ಥೆಯಿಂದ ದೂರ ಉಳಿದಿದ್ದಾರೆ. ಕಡಿಮೆ ಜಿಡಿಪಿಯ ರಾಷ್ಟ್ರಗಳಲ್ಲಿ 2 ದಶಕಗಳಿಂದ ಈ ಗ್ರಾಮೀಣ-ನಗರದ ನಡುವಿನ ಸೌಲಭ್ಯದ ಅಂತರ ಹೆಚ್ಚುತ್ತಲೇ ಹೋಗಿದೆ.
ಕಾಂಗೋ ರಿಪಬ್ಲಿಕ ರಾಷ್ಟ್ರ ಇಡೀ ಆಫ್ರಿಕಾ ಖಂಡದ ಅರ್ಧದಷ್ಟು ಜಲ ಸಂಪನ್ಮೂಲವನ್ನು ಹೊಂದಿದೆ. ಸಹೆಲ್, ಆಗ್ನೇಯ ಆಫ್ರಿಕಾ ಹಾಗೂ ದಕ್ಷಿಣ, ಮಧ್ಯ ಏಷ್ಯಾದ ಭಾಗಗಳು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿವೆ ಎಂಬುದನ್ನು ವರದಿ ಉಲ್ಲೇಖಿಸಿದೆ. ವರದಿಯು, ಹೆಚ್ಚು ಮತ್ತು ಕಡಿಮೆ ಜಿಡಿಪಿಯ ರಾಷ್ಟ್ರಗಳು, ಸಂಪದ್ಭರಿತ ಮತ್ತು ಕಡು ಬಡವರ ನಡುವಿನ ಅಸಮಾನತೆಯನ್ನು ಪಟ್ಟಿ ಮಾಡಿದೆ. ಈ ದೃಷ್ಟಿಯಲ್ಲೇ ಅಧ್ಯಯನ ಮಾಡಲಾಗಿದೆ. ಆದಾಯ ಗಳಿಕೆಯಲ್ಲಿನ ಅಸಮಾನತೆಗೆ ಪೂರಕವಾಗಿ ನೀರನ್ನು ಬಳಸುವಲ್ಲಿ ಬೇರೆ ರೀತಿಯ ಅಸಮಾನತೆಗಳು ಸೇರಿವೆ. ಲಿಂಗ, ಭೌಗೋಳಿಕ, ಜಾತಿ, ಸಮುದಾಯ, ರಾಜಕೀಯ ನಂಬಿಕೆಗಳ ಹಾಗೂ ಸಾಮಾಜಿಕ ಸ್ಥಾನಮಾನಗಳೂ ಕಾರಣವಾಗುತ್ತಿವೆ ಎನ್ನುತ್ತದೆ ವರದಿ.
ಹವಾಮಾನ ವೈಪರೀತ್ಯವೂ ಈ ನೀರಿನ ಸಂಬಂಧಿತ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಜಾಗತಿಕ ಮಾಲಿನ್ಯದ ಪರಿಣಾಮದಿಂದ ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ಹೆಚ್ಚಿನ ಒತ್ತಡಕ್ಕೆ ಹೈರಾಣಾಗುತ್ತಿವೆ. ಎರಡು ದಶಕಗಳಲ್ಲಿ (2000-2021)ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಹೆಚ್ಚು ತೀವ್ರವಾದ ಬರ ಹಾಗೂ ನೆರೆ ಸಮಸ್ಯೆ ಉದ್ಭವಿಸಿತು. ಈ ಸಮಸ್ಯೆ ಅಭಿವೃದ್ಧಿಗೊಂಡ ರಾಷ್ಟ್ರಗಳಲ್ಲಿ ಕಡಿಮೆ ಇತ್ತು. ಈ ಸಮಸ್ಯೆ ಬರೀ ಬರ ಮತ್ತು ನೆರೆ ಕಾಲಕ್ಕೆ ಅನ್ವಯಿಸುವುದಿಲ್ಲ. ಬದಲಾಗಿ ಅಪೌಷ್ಟಿಕತೆ, ಶೈಕ್ಷಣಿಕ ಚಟುವಟಿಕೆಗಳಿಂದ ತಲೆಮಾರುಗಳು ಹೊರಗುಳಿಯುವಂಥ ಸಮಸ್ಯೆಗಳಿಂದ ದೀರ್ಘ ಕಾಲಕ್ಕೆ ಬಾಧಿಸುತ್ತದೆ.
ಜಾಗತಿಕವಾಗಿ ವರದಿ ಉಲ್ಲೇಖಿಸುವಂತೆ, 800 ದಶಲಕ್ಷ ಜನರು ತೀವ್ರ ಬರವನ್ನು ಎದುರಿಸಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಜತೆಗೆ ನೆರೆಯ ಭೀತಿಯನ್ನೂ ಎದುರಿಸಬೇಕಾಗಿದೆ ಎಂದು ಹೇಳಿದೆ.
ಅರೋಗ್ಯ ಮತ್ತು ಶಿಕ್ಷಣ, ಉದ್ಯೋಗ ಮತ್ತು ಆದಾಯ, ಶಾಂತಿ/ನೆಮ್ಮದಿ ಮತ್ತು ಸಾಮಾಜಿಕ ಸಾಮರಸ್ಯ ಹಾಗೂ ಪರಿಸರ- ಇಷ್ಟೂ ಪರಸ್ಪರ ಒಂದನ್ನೊಂದು ಬೆಸೆದಿರುವ ಸಮೃದ್ಧಿಯ ಮೂಲ ಬಿಂದುಗಳು ಎಂದೂ ವರದಿ ಉಲ್ಲೇಖಿಸಿದೆ.