Tuesday, November 19, 2024

Top 5 This Week

spot_img

Related Posts

ಕೊಡಗು ಮರುಗುತ್ತಿದೆ; ಕಾವೇರಿ ಸೊರಗುತ್ತಿದ್ದಾಳೆ !

ನಗರಗಳಿಗೆ ಜೀವಜಲವಾದ ನದಿಗಳ ಮೂಲವೇ ನೀರಿನ ಕೊರತೆಯನ್ನು ಅನುಭವಿಸಲು ಆರಂಭಿಸದರೆ ಇದಕ್ಕೆ ಏನೆನ್ನಬೇಕು? ನಮ್ಮ ನಗರೀಕರಣದ ಹಪಹಪಿಸುವಿಕೆ ಇದಕ್ಕೆ ಕಾರಣವೆನ್ನಬೇಕೇ ಅಥವಾ ಲಭ್ಯ ನೀರನ್ನು ಸಂಪನ್ಮೂಲವನ್ನಾಗಿ ತಿಳಿಯದೇ ಅಂಧಾದುಂಧಿ ಮಾಡಿದುದರ ಪರಿಣಾಮವೇ? ನಮ್ಮ ನಿರ್ಲಕ್ಷ್ಯವೇ, ಅಸಡ್ಡೆಯೇ? ಎಂದು ವಿಶ್ಲೇಷಿಸಿದ್ದಾರೆ ಶ್ಯಾಮಸುಂದರ್.‌ ಕೊಡಗು ಮರುಗುತ್ತಿದೆ; ಕಾಫಿ ಕರಟುತ್ತಿದೆ ; ಕಾವೇರಿ ಸೊರಗುತ್ತಿದ್ದಾಳೆ !

ಒಂದೇ ಸಾಲಿನಲ್ಲಿ ಸರಳವಾಗಿ ಉತ್ತರಿಸಬಹುದಾದರೆ ಇವೆಲ್ಲವೂ. ನಮ್ಮ ನಗರ ವಿಸ್ತರಣೆಯ ವ್ಯಾಮೋಹ ಎಲ್ಲಿಯವರೆಗೆ ತಲುಪಿದೆಯೆಂದರೆ, ಸ್ವತಃ ಆ ನಿರ್ದಿಷ್ಟ ನಗರದೊಳಗೇ ಇರುವ ಹತ್ತಾರು ಜಲಮೂಲಗಳನ್ನು ಕಲುಷಿತಗೊಳಿಸಿಕೊಂಡು ಹಾಳು ಮಾಡಿಕೊಳ್ಳುವುದು. ಇನ್ನೊಂದು ಇನ್ನೆಲ್ಲೋ ಇರುವ ಜಲಮೂಲವನ್ನು ನಂಬಿಕೊಂಡು ನಗರವನ್ನು ಬೆಳೆಸುವುದು, ಕೊನೆಯದಾಗಿ ಸಂಪನ್ಮೂಲವೆಲ್ಲವೂ ನಗರಗಳ ಬಳಕೆಗೆ ಮಾತ್ರ ಎಂಬ ಜಮೀನ್ದಾರಿ ಪ್ರವೃತ್ತಿ- ಇವೆಲ್ಲವೂ ನಿರ್ಮಿಸಿರುವ ಪರಿಸ್ಥಿತಿಯನ್ನು ಈಗ ಅನುಭವಿಸುವಂತಾಗಿದೆ.

ಬೆಂಗಳೂರು ನೀರಿಲ್ಲದೇ ಬಸವಳಿದಿದೆ ಎನ್ನುವ ಸುದ್ದಿ ಹಳೆಯ ಕಡತವಾಗಿ ಮಾರ್ಪಟ್ಟ ಬೆನ್ನಲ್ಲೇ ಈಗ ಕೊಡಗಿನಲ್ಲೂ ನೀರಿನ ಸಮಸ್ಯೆ ಬಗ್ಗೆ ಕೇಳಿಬರುತ್ತಿದೆ. ಕೊಡಗು ಸಂಪೂರ್ಣವಾಗಿ ಮಳೆ ಮಿಶ್ರಿತ ಪ್ರದೇಶ. ಬ್ರಹ್ಮಗಿರಿ ತಪ್ಪಲು, ಕಾಫಿ ಪ್ಲಾಂಟೇಶನ್ಸ್ ಗಳು, ಹಸಿರು-ಎಲ್ಲವೂ ಕೊಡಗನ್ನು ಕರ್ನಾಟಕದ ಕಾಶ್ಮೀರ ಎಂದು ಕರೆಯುವಂತೆ ಮಾಡಿತು. ನಾಲ್ಕು ರಾಜ್ಯಗಳಿಗೆ ನೀರುಣಿಸುವ ಕಾವೇರಿ ಹುಟ್ಟುವುದು ಇದೇ ಜಿಲ್ಲೆಯಲ್ಲಿ.

ಈ ಬಾರಿಯ ಬರ ಎಲ್ಲದರ ನಡುವೆ ಇದ್ದ ವ್ಯತ್ಯಾಸವನ್ನು ತೆಗೆದು ಹಾಕಿತು. ಕಾಡು, ನದಿ, ಮರ-ಗಿಡ ಎಂಬೆಲ್ಲ ವಿಶೇಷ ಅಭಿದಾನಗಳನ್ನು ಹೊಂದಿದ್ದ ಊರುಗಳನ್ನೂ ಬರ ಮತ್ತು ಬಿಸಿಲು ಬಿಟ್ಟಿಲ್ಲ. ಕಾವೇರಿಯ ತವರು ಕೊಡಗಿಗೂ ನೀರಿನ ಸಮಸ್ಯೆ ಕೇಳಿಬರುತ್ತಿದೆ ಎಂದರೆ ಮೇಲಿನ ಮಾತು ಸುಳ್ಳಲ್ಲವಲ್ಲ.

ಬೆಂಗಳೂರು ನೀರಿನ ಸಮಸ್ಯೆಯನ್ನು ಹಲವು ವರ್ಷಗಳಿಂದ ಎದುರಿಸುತ್ತಿದೆ. ಆದರೆ ಬೆಂಗಳೂರಿಗೂ ನೀರು ಪೂರೈಸುವ ಕಾವೇರಿ ಹುಟ್ಟುವ ಕೊಡಗಿನಲ್ಲಿ ನೀರಿಗೇ ಬರ ಬಂದರೆ ಹೇಗೆ ? ಎಂಬುದು ಈಗ ಚರ್ಚೆಯಾಗುತ್ತಿರುವ ಸಂಗತಿ.

ಕೊಡಗು ಕಾಫಿ ಎಸ್ಟೇಟ್‌ ಗಳು, ಬೆಟ್ಟ ಗುಡ್ಡಗಳನ್ನು ಹೊಂದಿರುವ ಜಿಲ್ಲೆ. ಕರ್ನಾಟಕದ ಶಿಮ್ಲಾ, ಊಟಿ ಎಂದೆಲ್ಲ ಕರೆಸಿಕೊಳ್ಳುವ ಜಿಲ್ಲೆ. ಕರ್ನಾಟಕದ ಕಾಶ್ಮೀರವೆಂಬ ಅಭಿದಾನವೂ ಇದೇ ಜಿಲ್ಲೆಗೆ. ಹೊರಗೆಲ್ಲ ಬೆಂಕಿ ಉರಿದು ಶಾಖದ ಧಗೆ ಇದ್ದರೂ ಈ ಜಿಲ್ಲೆಯಲ್ಲಿ ಇಡೀ ವಾತಾವರಣವೇ ತಣ್ಣಗೆ ಇರುತ್ತದೆ ಎಂದು ನಂಬುತ್ತಿದ್ದ ಕಾಲ. ವರ್ಷದಲ್ಲಿನ ಆರು ತಿಂಗಳು ಮಳೆಗಾಲ ಎಂದು ಬೀಗುತ್ತಿದ್ದ ಊರು. ಅಲ್ಲಿ ಎಲ್ಲವೂ ಬದಲಾಗಿದೆ. ಅದರಂತೆಯೇ ನೀರಿನ ಕೊರತೆ ಈ ಊರಿನ ಚಾವಡಿಯ ಒಳಗೆ ಬಂದು ಕುಳಿತಿದೆ.

ಕಾವೇರಿ ಸೊರಗಿದಳು !

ಕೊಡಗಿಗೆ ಬರ ಬಂದರೆ, ನೀರಿಗೇ ತೊಂದರೆಯಾದರೆ ನಾನಾ ಅವಘಡಗಳಿಗೆ ಕಾರಣವಾಗುತ್ತದೆ. ಈ ಅವಘಡಗಳು ಬೆಂಗಳೂರಿನಂಥ ನಗರಕ್ಕೆ ಬೇರೆ, ಕೊಡಗಿನಂಥ ಜಿಲ್ಲೆಗೆ ಬೇರೆಯದೇ ಪರಿಣಾಮವನ್ನು ಬೀರುತ್ತವೆ ಎಂಬುದು ಈಗ ಕಾಣತೊಡಗಿದೆ. ಬೆಂಗಳೂರಿನಲ್ಲಿ ನೀರಿಗೆ ಬರ ಬಂದರೆ ಎಲ್ಲಿಂದಾದರೂ ನೀರು ಕೊಂಡುಕೊಳ್ಳಬಲ್ಲೆವು ಎಂಬ ಸಾಧ್ಯತೆಯಿಂದ ಬೀಗುತ್ತಾರೆ. ಆದರೆ ಕೊಡಗಿನಂಥ ಕಡೆ ನೀರಿನ ಕೊರತೆ ಉದ್ಭವಿಸಿದರೆ ಎಲ್ಲಿಂದ ಕೊಂಡುಕೊಳ್ಳುವುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಮೃದ್ಧಿ ಹಾಗೂ ಚೈತನ್ಯಕ್ಕೆ ಪ್ರತೀಕವಾಗಿ ಹರಿಯುತ್ತಿದ್ದ ಕಾವೇರಿ ಈಗ ಬರಡಾಗಿದ್ದಾಳೆ. ಹಿಂದಿನ ರಭಸವೂ ಇಲ್ಲ, ಚೈತನ್ಯವೂ ಇಲ್ಲ, ಸಮೃದ್ಧಿಯೂ ಇಲ್ಲ. ಸಣ್ಣ ತೊರೆಯಂತೆ ಹರಿಯತೊಡಗಿದ್ದಾಳೆ. ಇನ್ನೆಷ್ಟು ದಿನ ಎಂಬ ಆತಂಕವನ್ನೂ ಹುಟ್ಟಿಸುತ್ತಿದ್ದಾಳೆ. ಕಾವೇರಿ ಸೊರಗುತ್ತಿದ್ದಾಳೆ !

ಕೊಡಗಿನಂಥ ಪ್ರದೇಶದಲ್ಲಿ ಕಾಫಿ ಬೆಳೆಯೊಂದಿಗೆ ಪ್ರವಾಸೋದ್ಯಮ ಸ್ಥಳೀಯರ ಆದಾಯದ ಮೂಲ. ಉದಾಹರಣೆಗೆ ಕುಶಾಲನಗರದಲ್ಲಿರುವ ದುಬಾರೆ ನಿಸರ್ಗಧಾಮಕ್ಕೆ ರಜೆ ದಿನಗಳಲ್ಲಿ ಹಾಗೂ ವಾರಾಂತ್ಯಗಳಲ್ಲಿ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಸಾವಿರಾರು. ಆನೆ ಶಿಬಿರಗಳಿಂದ ಹಿಡಿದು ನದಿ ವಿಹಾರ, ನೌಕಾ ವಿಹಾರ ಹೀಗೆ ಹತ್ತಾರು ಚಟುವಟಿಕೆಗಳಲ್ಲಿ ಪ್ರವಾಸಿಗರು ತೊಡಗುತ್ತಾರೆ. ಇವೆಲ್ಲದರ ಪರಿಣಾಮದಿಂದಾಗಿ ಸ್ಥಳೀಯ ಆರ್ಥಿಕತೆಯ ಆರೋಗ್ಯ ಚೆನ್ನಾಗಿತ್ತು. ಈ ಎಲ್ಲ ಚಟುವಟಿಕೆಗಳನ್ನು ಆಶ್ರಯಿಸಿಕೊಂಡು ಸಾವಿರಾರು ಕುಟುಂಬಗಳು ಜೀವಿಸುತ್ತಿದ್ದವು. ಈಗ ಕಾವೇರಿ ಬರಡಾಗಿ ನೀರಿಗೆ ತೊಂದರೆ ಆಗಿರುವುದರಿಂದ ಪ್ರವಾಸೋದ್ಯಮ ಚಟುವಟಿಕೆಗಳೂ ಕ್ಷೀಣಿಸತೊಡಗಿವೆ. ಈ ಸಮಸ್ಯೆ ಇಲ್ಲಿಗೇ ಮುಗಿಯದು. ನೂರಾರು ಹೋಮ್‌ ಸ್ಟೇ, ರೆಸಾರ್ಟ್‌ಗಳನ್ನು ಹೊಂದಿರುವ ಆತಿಥ್ಯೋದ್ಯಮ ಸಹ ಸಂಕಷ್ಟದಲ್ಲಿದೆ.

ವನ್ಯಜೀವಿಗಳಿಗೆ ನೀರು, ಆಹಾರ ಎಲ್ಲದರ ಕೊರತೆ ಉಂಟಾಗಿ ಕಾಡೆಲ್ಲ ಬರಿದಾಗಿದೆ. ಎಲ್ಲೂ ಹಸಿರೇ ಕಾಣುತ್ತಿಲ್ಲ. ಕಾಡಿನೊಳಗೂ ನೀರಿಲ್ಲ ಎಂಬ ಫಲಕ ತೂಗು ಹಾಕಬೇಕಾದ ಸ್ಥಿತಿ ನಾಗರಹೊಳೆಯಂತ ಕಡೆಯೂ ಉದ್ಭವಿಸಿದೆ.

ಕಾಫಿ ಬೆಳೆ ಮತ್ತು ಉದ್ಯಮ ಈ ಜಿಲ್ಲೆಯ ಮೂಲಾಧಾರ. ಆದರೀಗ ಬರ ಕಾಫಿ ಬೆಳೆಗಾರರಿಗೆ ಮೂರು ಬಗೆಯ ಸಂಕಷ್ಟಗಳನ್ನು ತಂದೊಡ್ಡಿದೆ. ಒಂದೆಡೆ ಬಿಸಿಲಿನ ಶಾಖಕ್ಕೆ ಕಾಫಿ ಹೂವುಗಳು ಕರಗತೊಡಗಿವೆ, ಮತ್ತೊಂದೆಡೆ ಮಳೆಯ ಕೊರತೆಯಿಂದ ಬೆಳೆಯ ಇಳುವರಿಗೂ ಹೊಡೆತ ಬೀಳತೊಡಗಿದೆ. ಕಾಫಿ ಗಿಡಗಳಿಗೆ ಒಂದಿಷ್ಟು ನೀರು ಪೂರೈಸಿ ಬೊಗಸೆಯಷ್ಟಾದರೂ ಬೆಳೆಯನ್ನು ಉಳಿಸಿಕೊಳ್ಳೋಣವೆಂದರೆ ಅದಕ್ಕೂ ಭೂಮಿಯಲ್ಲಿ ನೀರಿಲ್ಲ. ಪ್ರತಿ ವರ್ಷ ಮಾರ್ಚ್‌ ಮತ್ತು ಎಪ್ರಿಲ್‌ ನಲ್ಲಿ ಬರುವ ಮಳೆ ಕಾಫಿ ಗಿಡಗಳನ್ನು ಬೇಸಗೆಯನ್ನು ಎದುರಿಸುವ ಶಕ್ತಿಯನ್ನು ತುಂಬಬಲ್ಲವು. ಆದರೆ ಈ ವರ್ಷ ಆ ಮಳೆಯೂ ಬಂದಿಲ್ಲ. ಹಾಗಾಗಿ ಮುಂದೇನು ಎಂಬ ಪ್ರಶ್ನೆ ಬೃಹದಾಕಾರವಾಗಿದೆ.

ಅಂತರ್ಜಲದ ಕಥೆ ಗೊತ್ತೇ?

ಇತ್ತೀಚಿನ ಒಂದು ದಶಕದ ಲೆಕ್ಕ ತೆಗೆದುಕೊಂಡರೆ ಜಿಲ್ಲೆಯಲ್ಲಿ ಅಂತರ್ಜಲದ ಪ್ರಮಾಣ ಗಣನೀಯವಾಗಿ ಕುಸಿದಿದೆ. ಈ ಅಂಶವನ್ನು 2014 ರಿಂದ 2023 ರವರೆಗಿನ ಅಂಕಿಅಂಶಗಳೇ ಹೇಳುತ್ತವೆ. ಕೊಳವೆಬಾವಿಗಳಲ್ಲಿನ ಅಂತರ್ಜಲ ಲಭ್ಯವಾಗುವ ಮಟ್ಟ 2023 ರಲ್ಲಿ 15.7 ಮೀಟರ್‌ ಗೆ ಕುಸಿದಿದೆ. ಇದೇ ಪ್ರಮಾಣ 2014 ರಲ್ಲಿ 13.4 ಮೀಟರ್‌ ಗಳಿತ್ತು. ಹಾಗೆಯೇ ಬಾವಿಗಳಲ್ಲಿನ ನೀರಿನ ಮಟ್ಟವೂ ಸಕಾರಾತ್ಮಕ ನೆಲೆಯಲ್ಲಿಲ್ಲ. ಆರು ಮೀಟರ್‌ ನಿಂದ 6.7 ಮೀಟರ್‌ ಗೆ ಕುಸಿದಿದೆ.

ಜಿಲ್ಲಾ ಅಂತರ್ಜಲ ಕಚೇರಿಯ ಅಧಿಕಾರಿಗಳು ಡೌನ್‌ ಟು ಅರ್ಥ್‌ ಪತ್ರಿಕೆಗೆ ಪ್ರತಿಕ್ರಿಯಿಸುವಾಗ ಒಂದು ಅಂಶವನ್ನು ಉಲ್ಲೇಖಿಸಿದ್ದರು. ಅದರ ಪ್ರಕಾರ ಬದಲಾಗುತ್ತಿರುವ ಮಳೆಯ ನಮೂನೆಯ ಪರಿಣಾಮವೂ ಇದೆ. ಜತೆಗೆ ಅತಿ ಹೆಚ್ಚು ನೀರನ್ನು ಕೊಳವೆ ಬಾವಿಗಳ ಮೂಲಕ ಹೊರತೆಗೆಯುತ್ತಿರುವುದರಿಂದ ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆಯಂತೆ.

ಈ ಮಾತು ಹೌದೆನ್ನಿಸುತ್ತದೆ. ಎರಡು ದಶಕಗಳ ಹಿಂದಿನ ಕೊಡಗಿಗೂ ಇಂದಿನ ಕೊಡಗಿಗೂ ಬಹಳಷ್ಟು ವ್ಯತ್ಯಾಸಗಳಾಗಿವೆ. ಪ್ರಮುಖವಾಗಿ ವ್ಯಾಪಕ ನಗರೀಕರಣ, ವಾಣೀಜ್ಯೀಕರಣ, ಅದಕ್ಕೆ ಪೂರಕವಾಗಿ ಜಲಮೂಲಗಳ ದುರ್ಬಳಕೆ ಎದ್ದು ಕಾಣುತ್ತದೆ. ಇದಕ್ಕೆ ಪೂರಕವಾಗಿ ಹವಾಮಾನ ವೈಪರೀತ್ಯದ ಕಾರಣದಿಂದ  ಬದಲಾಗುತ್ತಿರುವ ಮಳೆಯ ನಮೂನೆಗಳು, ವಿಧಾನಗಳೂ ಕೊಡುಗೆ ನೀಡುತ್ತಿವೆ.

ಇದೇ ಸಂದರ್ಭದಲ್ಲಿ ಕೊಡಗಿನ ಸೂಕ್ಷ್ಮ ಪರಿಸರವನ್ನು ಸಂರಕ್ಷಿಸಿ ಇನ್ನಷ್ಟು ಬರಡಾಗದಿರಲು ಸುಸ್ಥಿರ ಪ್ರವಾಸೋದ್ಯಮದತ್ತ ಹೊರಳಬೇಕಿದೆ. ನಗರೀಕರಣ ಬೆಳವಣಿಗೆ ಕಡಿವಾಣ ಹಾಕುವುದು, ಜಲಮೂಲಗಳ ಸಂರಕ್ಷಣೆಗೆ ಒತ್ತು ನೀಡುವುದು, ನದಿ ಜಲಾನಯನ ಪ್ರದೇಶದ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಒತ್ತು ನೀಡುವುದು, ಬರುವ ಮಳೆ ನೀರನ್ನು ಉಳಿಸಿಕೊಳ್ಳುವ, ಸಂರಕ್ಷಿಸಿಕೊಳ್ಳುವ ಹಾಗೂ ಮರು ಬಳಕೆ ಮಾಡುವಂಥ ಆಧುನಿಕ ವಿಧಾನಗಳಿಗೆ ಮೊರೆ ಹೋಗುವುದು ಹಾಗೂ ಭೂ ಪರಿವರ್ತನೆಯಂತ ಚಟುವಟಿಕೆಗಳಿಗೆ ಕಡಿವಾಣ ಹಾಕವುದು ಅಗತ್ಯ. ಅರ್ಥವಿಲ್ಲದ ಪ್ರವಾಸೋದ್ಯಮವೂ ಭೀಕರ ಪರಿಣಾಮವನ್ನುಂಟು ಮಾಡಬಲ್ಲದು ಎಂಬುದೂ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿ.

ಕಾಫಿಯ ಪರಿಮಳ ಕರಟುತ್ತಿದೆ

ಜಿಲ್ಲೆಯ 1.06 ಲಕ್ಷ ಹೆಕ್ಟೇರ್‌ ಪ್ರದೇಶಗಳಲ್ಲಿ ಕಾಫಿ ಬೆಳೆಯನ್ನು ಬೆಳೆಯಲಾಗುತ್ತಿದೆ. ರಾಜ್ಯದ ಒಟ್ಟೂ ಕಾಫಿ ಬೆಳೆಯುವ ಪ್ರದೇಶದ ಪೈಕಿ ಶೇ. 44 ರಷ್ಟು ಕೊಡಗು ಜಿಲ್ಲೆಯಲ್ಲಿದೆ. ವಾರ್ಷಿಕ 1.10 ಲಕ್ಷ ಮೆಟ್ರಿಕ್‌ ಟನ್‌ ನಷ್ಟು ಕಾಫಿ ಉತ್ಪಾದನೆ ಮಾಡುತ್ತದೆ. ರಾಜ್ಯದ ಶೇ. 50 ರಷ್ಟು ಹಾಗೂ ದೇಶದ ಒಟ್ಟೂ ಕಾಫಿ ಉತ್ಪಾದನೆಯ ಶೇ. 35 ರಷ್ಟು ಕೊಡಗು ಜಿಲ್ಲೆಯಲ್ಲಿ ಉತ್ಪಾದಿಸಲಾಗುತ್ತದೆ. ಇಂಥ ಕಾಫಿ ಬೇಳೆಯೀಗ ಬೇಸಗೆ ಮತ್ತು ಬರದ ಕಾವಲಿಯ ಮೇಲೆ ಕರಟುತ್ತಿದೆ.

ಹಸಿರು ಹೊದಿಕೆಗಳ ನಾಶದಿಂದ ಸಾಧಿಸುವುದಾದರೂ ಏನು ಎಂಬ ಪ್ರಶ್ನೆಗೆ ಉತ್ತರ ಸಿಗತೊಡಗಿದೆ. ಈಗಲಾದರೂ ಹಸಿರು ಹೊದಿಕೆಯ ಅಗತ್ಯವನ್ನು ಅರ್ಥ ಮಾಡಿಕೊಂಡು ಸುಸ್ಥಿರ ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ಮೊರೆ ಹೋಗದಿದ್ದರೆ, ಜಲಮೂಲವನ್ನು ಸಂರಕ್ಷಿಸಿಕೊಂಡು ಕಾಪಿಟ್ಟುಕೊಳ್ಳುವ ಜಾಣ ನಡೆ ಪ್ರದರ್ಶಿಸದಿದ್ದರೆ ಕರ್ನಾಟಕದ ಕಾಶ್ಮೀರ ಬರಡು ಭೂಮಿಯಾಗುವುದರಲ್ಲಿ ಸಂದೇಹವಿಲ್ಲ.

RurbanIndia
RurbanIndia
RurbanIndia is a space to redesign, revalue and rejuvenate our Rurban Development. A comprehensive strategy and think tank towards our Rurbansphere. RurbanIndia is a webspace of EkaAneka Media.

LEAVE A REPLY

Please enter your comment!
Please enter your name here

Popular Articles