Thursday, May 30, 2024
spot_imgspot_img

Top 5 This Week

spot_img

Related Posts

ಬರೀ ಮಾತಿನಲ್ಲೇ ಮುಕ್ಕಾಲು ಆಯುಷ್ಯ ಕಳೆದಿದ್ದೇವೆ !

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸದೇ ನಾವೆಷ್ಟೇ ತಿಪ್ಪರಲಾಗ ಹಾಕಿದರೂ ನಗರೀಕರಣದಲ್ಲಿನ ಅವ್ಯವಸ್ಥೆಯನ್ನು ಸರಿದಾರಿಗೆ ತರಲಾಗದು. ಈ ಅವ್ಯವಸ್ಥೆಯ ನಗರೀಕರಣದಿಂದ ಸೃಷ್ಟಿಯಾಗುವ ಇಬ್ಬರು ರಾಕ್ಷಸರೆಂದರೆ  ವಾಹನ ದಟ್ಟಣೆ ಮತ್ತು ತ್ಯಾಜ್ಯ ವಿಲೇವಾರಿ. ಇವರಿಬ್ಬರ ಸಂಹಾರಕ್ಕೆ ಬರೀ ಸರಕಾರದಿಂದಲೋ, ಆಡಳಿತದಿಂದಲೋ ಸಾಧ್ಯವಾಗದು. ಸಾರ್ವಜನಿಕರ ಸಹಕಾರ ಅವಶ್ಯ. ಅಂಥದೊಂದು ಪರಸ್ಪರ ನಂಬಿಕೆಯ ವ್ಯವಸ್ಥೆ  ಮೊದಲು ನಿರ್ಮಾಣವಾಗಬೇಕು.

ಇಂದು ನಗರಗಳಲ್ಲಿ ಕಾಡುತ್ತಿರುವುದೇ ಎರಡು ದೊಡ್ಡ ಸಮಸ್ಯೆಯೆಂದರೆ ವಾಹನ ದಟ್ಟಣೆ ಮತ್ತು ತ್ಯಾಜ್ಯ ವಿಲೇವಾರಿ. ಇವೆರಡಕ್ಕೂ ಸಾಕಷ್ಟು ಸಮರ್ಥ ಪರಿಹಾರಗಳನ್ನು ಹುಡುಕಿಕೊಳ್ಳುವ ಪ್ರಯತ್ನಗಳು ನಡೆಯುತ್ತಲೇ ಇವೆ. ಒಂದಿಷ್ಟು ನಗರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಯಶಸ್ವಿಯಾಗಿವೆ. ಅದಕ್ಕೆ ಕಾರಣ, ಸರಕಾರಗಳ ನಿಷ್ಠುರ ತೀರ್ಮಾನಗಳು ಹಾಗೂ ಸಾರ್ವಜನಿಕರ ಪಾಲುದಾರಿಕೆ. ಇಂಥದೊಂದು ಸಾಧ್ಯತೆ ತೆರೆದುಕೊಳ್ಳುವುದೂ ಪರಸ್ಪರ ವಿಶ್ವಾಸವಿದ್ದಾಗ ಮಾತ್ರ. ನಮ್ಮಲ್ಲಿ ಆ ವಾತಾವರಣವೇ ಇಲ್ಲ. ಯಾಕೆಂದರೆ, ಸರಕಾರಗಳು ಮತ್ತು ಅದನ್ನು ನಡೆಸುವವರಲ್ಲಿ ಬಹುತೇಕರನ್ನು ನಂಬುವ ಸ್ಥಿತಿಯಲ್ಲೇ ಜನರು ಇಲ್ಲ.

ಜಗತ್ತಿನಲ್ಲಿ ನಗರಗಳಲ್ಲಿನ ವಾಹನ ದಟ್ಟಣೆಯ ಸಮಸ್ಯೆ ಆಯಾ ದೇಶದ ಅರ್ಥಿಕತೆ, ಸಮೃದ್ಧಿ ಮತ್ತು ಅಭಿವೃದ್ಧಿಯ ಮೇಲೆ ವಿಪರೀತವಾದ ಪರಿಣಾಮವನ್ನು ಬೀರುತ್ತದೆಂದು ಅರ್ಥವಾಗಿದ್ದೇ ಇತ್ತೀಚಿನ ದಿನಗಳಲ್ಲಿ. ಕಳೆದ ದಶಕದವರೆಗೂ ಬಹುತೇಕ ಭಾಗದಲ್ಲಿ ಅನುಷ್ಠಾನವಿದ್ದ ಕಲ್ಪನೆ ‘ಅಭಿವೃದ್ಧಿ’ ಎಂಬುದೊಂದೇ. ಅಂದರೆ ಗುರಿಯೊಂದೇ. ಮಹಾತ್ಮಾ ಗಾಂಧೀಜಿಯವರ ಮಾತಿನಂತೆ ಗುರಿಯೊಂದೇ ಮುಖ್ಯವಲ್ಲ, ಅದಕ್ಕೆ ಸಾಗುವ ಮಾರ್ಗವೂ ಮುಖ್ಯ ಎಂಬುದು ಅರಿವಿಗೆ ಬರುವಷ್ಟರಲ್ಲಿ 20 ನೇ ದಶಕ ಮುಗಿಯುತ್ತಾ ಬಂದಿತ್ತು. ಆಗ ಆರಂಭವಾಗಿದ್ದು ನಾವಿರುವ ನಗರಗಳನ್ನು ಹೇಗೆ ಸುವ್ಯಸ್ಥಿತಗೊಳಿಸಿಕೊಳ್ಳುವುದು ಎಂಬ ಕಲ್ಪನೆ. ಇಲ್ಲಿಂದಲೇ ಸುಸ್ಥಿರ ನಗರೀಕರಣದತ್ತ ಪಯಣ ಆರಂಭವಾಗಿದ್ದು.

ಇವುಗಳನ್ನೂ ಓದಿ : ಮತ್ತಷ್ಟು ಅಡ್ಡ ರಸ್ತೆಗಳನ್ನು ಸೃಷ್ಟಿಸಿಕೊಳ್ಳುತ್ತಾ..

ವಾಹನ ದಟ್ಟಣೆ ಸಮಸ್ಯೆ ದೇಶದ ಆರ್ಥಿಕತೆ ಮೇಲೆ ಬೀರಬಹುದಾದ ಪರಿಣಾಮವನ್ನು ಅರಿತು ತತ್‌ ಕ್ಷಣ ಕಾರ್ಯೋನ್ಮುಖವಾಗಿದ್ದು ಸಿಂಗಾಪುರ ಮಾತ್ರ. ಹಾಗಾಗಿಯೇ ಇಂದಿಗೂ ನಗರೀಕರಣದ ಬಹಳ ಸಮಸ್ಯೆಗಳಿಗೆ ಸಿಂಗಾಪುರದ ಔಷಧ ಅಂಗಡಿಗೆ ಪರಿಹಾರ ಹುಡುಕಿಕೊಂಡು ಹೋಗುತ್ತೇವೆ. ಯಾವುದೇ ನಗರದ ಮೇಯರ್‌ ಗಳನ್ನು ಕೇಳಿದರೂ ಅವರು ಸಿಂಗಾಪುರದ ಬಗ್ಗೆ ಮಾತನಾಡಬಲ್ಲರು. ಯಾಕೆಂದರೆ, ನಗರಗಳ ಕಲ್ಪನೆಗೊಂದು ಕನಸೆಂದೇ ಬಿಂಬಿತವಾಗಿದೆ ಸಿಂಗಾಪುರ. ಅಲ್ಲಿಯೂ 1965 ರಲ್ಲಿ ಸಿಂಗಾಪುರ ಸ್ವತಂತ್ರವಾದಾಗ ಸಮಸ್ಯೆಗಳೇನೂ ಕಡಿಮೆ ಇರಲಿಲ್ಲ.

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪೂರ್ಣ ಹಾಳಾಗಿತ್ತು. ಬಸ್‌ ಸಂಸ್ಥೆಯ ಸಿಬಂದಿಯ ಕಾರ್ಯ ವೈಖರಿಯಿಂದ ಹಿಡಿದು ಇಡೀ ವ್ಯವಸ್ಥೆಯೇ ತುಕ್ಕು ಹಿಡಿದಿತ್ತು. ದಿನೇ ದಿನೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಜನಸಂಖ್ಯೆ ಹಾಗೂ ಭವಿಷ್ಯದಲ್ಲಿ ನಿರ್ಮಾಣವಾಗಬಹುದಾದ ವಾಹನ ದಟ್ಟಣೆಯನ್ನು ಗ್ರಹಿಸಿ ನಿಧಾನವಾಗಿ ವ್ಯವಸ್ಥೆಯ ಸುಧಾರಣೆಗೆ ನಿರ್ಧರಿಸಿತು ಸಿಂಗಾಪುರ ಸರಕಾರ. 1970 ರವರೆಗೂ ಒಂದೇ ಕಂಪನಿ (ಎಸ್‌ಟಿಸಿ) ಏಕಸ್ವಾಮ್ಯ ಮೆರೆದಿತ್ತು. ಗುಣಮಟ್ಟದ ಸೇವೆಗೂ ವಸೂಲಿ ಮಾಡುವ ದರಕ್ಕೂ ಸಂಬಂಧವೇ ಇರಲಿಲ್ಲ. ಜನರು ಅನಿವಾರ್ಯವಾಗಿ ಈ ವ್ಯವಸ್ಥೆಯನ್ನು ಅಪ್ಪಿಕೊಂಡಿದ್ದರು.

ಇದೆಲ್ಲವನ್ನೂ ಗಮನಿಸಿದ ಸರಕಾರ, ನಿಧಾನವಾಗಿ ಸರಕಾರ ತನ್ನ ಕೃಪಾಕಟಾಕ್ಷದಿಂದ ಕಂಪೆನಿಯನ್ನು ಹೊರಗಿಟ್ಟಿತು. ಇದು ಹೊಸ ಪರಿಸರ ಮತ್ತು ಸ್ಪರ್ಧಾತ್ಮಕ ವಾತಾವರಣಕ್ಕೆ ಹೊಂದಿಕೊಳ್ಳಲು ಹರಸಾಹಸ ಪಟ್ಟ ಕಂಪೆನಿ ಆರ್ಥಿಕ ನಷ್ಟದ ಕಾರಣದಿಂದ ಮುಚ್ಚಿತು.

ಆಗ ಸುಧಾರಣೆಯ ಕಾರ್ಯಕ್ರಮ ಆರಂಭವಾಯಿತು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಭವಿಷ್ಯದಲ್ಲಿ ಬರಬಹುದಾದ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕುವ ಪ್ರಯತ್ನ ಸಿಂಗಾಪುರ ಸರಕಾರದ್ದಾಗಿತ್ತು. ಹಾಗಾಗಿ ಎಸ್‌ಬಿಸಿ ಎಂಬ ಹೊಸ ಕಂಪೆನಿ ಆರಂಭಿಸಿ. ಸುಧಾರಿತ ಬಸ್‌ ಸೇವೆಯನ್ನು ಒದಗಿಸ ತೊಡಗಿತು. ಅದು ಒಂದಿಷ್ಟು ಫ‌ಲ ಕೊಡ ತೊಡಗಿದ ಕೂಡಲೇ 1980 ರ ಸುಮಾರಿನಲ್ಲಿ ಮತ್ತೂಂದು ಕಂಪೆನಿಯನ್ನು ಆರಂಭಿಸಿತು. ಹೊಸ ಕಂಪೆನಿ ಅರ್ಥಿಕವಾಗಿ ಸದೃಢವಾಗಲು ಹಳೆಯ ಕಂಪೆನಿಯಿಂದ ಕೆಲವು ಮಾರ್ಗಸೂಚಿಗಳನ್ನು, ಬಸ್‌ ಗಳನ್ನು ವರ್ಗಾಯಿಸಿತು. ಇಂದು ಎಲ್ಲೆಡೆಯೂ ಬಸ್‌ ಸೌಲಭ್ಯ ಬೇಕಾದಷ್ಟಿದೆ. ನಾಲ್ಕು ಕಂಪೆನಿಗಳ ಲೆಕ್ಕದಲ್ಲಿ ಇಡೀ ಸಿಂಗಾಪುರದ ಬಸ್‌ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿವೆ.

ಇವುಗಳನ್ನೂ ಓದಿ : ಒಂದು ಹನಿ ನೀರು ಇದ್ದರೆ ಸಾಲ ಕೊಡಿ !

ಇದಕ್ಕೆ ಸಮಾನಾಂತರವಾಗಿ ರೈಲು ವ್ಯವಸ್ಥೆಯನ್ನೂ ಬಲಪಡಿಸತೊಡಗಿತು. ಇಂದು ಮೆಟ್ರೋ ರೈಲು, ಮೋನೋ ರೈಲುಗಳಿವೆ. ಇದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೂಲ ದ್ರವ್ಯವಾಗಿ ಕೆಲಸ ಮಾಡುತ್ತಿವೆ. ಇದರೊಂದಿಗೆ ಸಾರ್ವಜನಿಕ ಟ್ಯಾಕ್ಸಿ ವ್ಯವಸ್ಥೆಯನ್ನೂ ನಡೆಸುತ್ತಿದೆ. ಹಾಗೆಂದು ಇದನ್ನೆಲ್ಲಾ ಸರಕಾರ ತನ್ನ ಕೃಪಾಕಟಾಕ್ಷದಿಂದ ನಡೆಸುತ್ತಿಲ್ಲ. ಎಲ್ಲವನ್ನೂ ಕಂಪೆನಿ ಮಾದರಿಯಲ್ಲಿ ರಚಿಸಿ ಸ್ವತಂತ್ರ ಅಸ್ತಿತ್ವ ನೀಡಿ ಕೈ ತೊಳೆದುಕೊಂಡಿದೆ. ಇದರೊಂದಿಗೆ ಆರೋಗ್ಯಕರ ಸ್ಪರ್ಧೆಯನ್ನು ಉಂಟು ಮಾಡುವ ಸಲುವಾಗಿ ಮತ್ತೂಂದು ಸಂಸ್ಥೆಯನ್ನು ಹುಟ್ಟು ಹಾಕಿತು. ಅವೆರಡೂ ಬಸ್‌, ರೈಲು, ಟ್ಯಾಕ್ಸಿ ವ್ಯವಸ್ಥೆಯನ್ನು ನಡೆಸುತ್ತಿವೆ. ಎಸ್‌ಬಿಎಸ್‌ ಒಂದೇ ಹೇಳಿಕೊಳ್ಳುವ ಪ್ರಕಾರ ಪ್ರತಿ ದಿನವೂ ಸುಮಾರು 30 ಲಕ್ಷ (ಮೂರು ಮಿಲಿಯನ್‌) ಮಂದಿಗೆ ಸೇವೆ ಒದಗಿಸುತ್ತಿದೆ. ಅಲ್ಲಿಯ ಅರ್ಧ ಜನಸಂಖ್ಯೆ ತಮ್ಮ ಕೆಲಸ ಕಾರ್ಯಗಳಿಗೆ ಅವಲಂಬಿಸಿರುವುದು ಈ ವ್ಯವಸ್ಥೆಯನ್ನೇ.

ಹಾಗಾಗಿ ಇಂದು ಸಿಂಗಾಪುರ ಜಗತ್ತಿನಲ್ಲೇ ಅತ್ಯಂತ ಮಿತವ್ಯಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೊಂದಿರುವ ಖ್ಯಾತಿಗೆ ಒಳಗಾಗಿದೆ. ಲಂಡನ್‌ ನ ಒಂದು ಸಲಹಾ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ,  ಬಸ್‌, ರೈಲು, ಟ್ಯಾಕ್ಸಿಯಂಥ ವಿವಿಧ ರೀತಿಯ ಆಯ್ಕೆಯಿರುವ ಸಮರ್ಥ ಸಾರ್ವಜನಿಕ ವ್ಯವಸ್ಥೆಯನ್ನು ಸಿಂಗಾಪುರ ಹೊಂದಿದೆ ಎಂದು ಅಭಿಪ್ರಾಯಪಟ್ಟಿದೆ. ಇಷ್ಟೆಲ್ಲಾ ಸಾಧ್ಯವಾದದ್ದು ಒಂದೆರಡು ವರ್ಷಗಳಲ್ಲ. ಆದರೆ, ಸುಧಾರಣೆ ಆರಂಭವಾದದ್ದು ದೊಡ್ಡ ಕನಸಿನಿಂದ ಎನ್ನುವುದು ಇಲ್ಲಿ ಮುಖ್ಯ.

ಸುಸ್ಥಿರ ನಗರೀಕರಣದ ಕಲ್ಪನೆ‌ಯಲ್ಲೂ ಇದೇ. ಒಂದು ಸುಸಜ್ಜಿತ ವ್ಯವಸ್ಥೆಯನ್ನು  ನಿರ್ಮಿಸದೇ ಮತ್ತೂಂದು ವ್ಯ ವಸ್ಥೆಯ ಕನಸನ್ನು ಕಾಣುವುದಕ್ಕೆ ಆಗದು. ಇದು ವಾಸ್ತವವೂ ಸಹ. ನಮ್ಮ ಆಡಳಿತದಲ್ಲಿ ಆಗಿರುವ ಸಮಸ್ಯೆ ಏನೆಂದು ಈಗ ಅರ್ಥವಾಗಬಹುದು. ಈ ಮಾತು ಹೇಳುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ, ಸಿಂಗಾಪುರದ ಸರಕಾರ ಪ್ರಬಲವಾದ ಸಾರ್ವಜನಿಕ ವ್ಯವಸ್ಥೆಯನ್ನು ವರ್ಷದಿಂದ ವರ್ಷಕ್ಕೆ ಸದೃಢಗೊಳಿಸದೇ ಹೋಗಿದ್ದಿದ್ದರೆ ಶೇ. 50 ರಷ್ಟು ಸಿಂಗಾಪುರದ ಮಂದಿ ಆ ವ್ಯವಸ್ಥೆಯನ್ನು ನಂಬಿಕೊಳ್ಳುತ್ತಿರಲಿಲ್ಲ. ಆಗ ಮತ್ತೂಂದು ವ್ಯವಸ್ಥೆಯ ಸೃಷ್ಟಿಯ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಸಿಂಗಾಪುರ

ವಾಹನ ದಟ್ಟಣೆ ಎಂಬ ಸಮಸ್ಯೆಯನ್ನು ಸಿಂಗಾಪುರವೂ ಎದುರಿಸಿದೆ. ಅದಕ್ಕೆ ಕಳೆದ ದಶಕದಲ್ಲಿ ನಾನು ಬಹಳ ನಿಷ್ಠುರ ನಿಯಮಗಳನ್ನು ಜಾರಿಗೆ ತಂದಿದೆ. ಅವುಗಳು ಹೇಗಿದೆಯೆಂದೆರ, ಕೆಲವೊಮ್ಮೆ ಬರೀ ಉಳ್ಳವರ ಪರ ಎಂದೂ ತೋರಬಹುದು. ಇನ್ನು ಕೆಲವೊಮ್ಮೆ ಸರಕಾರವೇ ಜನರನ್ನು ಸುಲಿಗೆ ಮಾಡುತ್ತಿದೆ ಎಂದೆನಿಸಬಹುದು. ಇನ್ನೂ ಕೆಲವೊಮ್ಮೆ ಬೇರೆ ಏನೋ ಅರ್ಥವನ್ನು ಹೊಳೆಸಬಹುದು. ಆದರೂ, ಒಪ್ಪಿಕೊಳ್ಳಬೇಕಾದ ಸಂಗತಿಯೆಂದರೆ ಅವ್ಯವಸ್ಥಿತ ನಗರೀಕರಣದಿಂದ ಸೃಷ್ಟಿಯಾಗುವ ಎರಡು ರಾಕ್ಷಸರನ್ನು ಸದೆಬಡಿಯಲು ಒಂದಿಷ್ಟು ಪರಿಹಾರ ಸೂತ್ರಗಳನ್ನು ಅದು ಹುಡುಕಿಕೊಂಡಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ನಾವು ಹಾಗಲ್ಲ. ಯಾವುದೇ ಸಮಸ್ಯೆಯ ಬಗ್ಗೆ ಸಾಕಷ್ಟು ವಿಳಂಬವಾಗಿ ಯೋಚಿಸುತ್ತೇವೆ. ಆದರೆ, ಪರಿಹಾರಕ್ಕೆ ಅವಸರ ಪಡುತ್ತೇವೆ. ಅದರ ಪರಿಣಾಮವೇ ಈಗ ಬೆಂಗಳೂರಿನಲ್ಲಿನ ಸಮಸ್ಯೆ. ಎಲ್ಲಿರಗೂ ಗೊತ್ತಿರುವಂಥದ್ದೇ.ಇನ್ನೂ  ಉಕ್ಕಿನ ಸೇತುವೆಯ ಚರ್ಚೆ ಇನ್ನೂ ಮುಗಿದಿಲ್ಲ. ಅದು ನಡೆಯುತ್ತಲೇ ಇದೆ. ರಾಜ್ಯ ಸರಕಾರವೂ ಅದನ್ನು ಒಂದು ಬಗೆಯಲ್ಲಿ ತನ್ನ ಸ್ವಾಭಿಮಾನಕ್ಕೆ ಧಕ್ಕೆ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ. ಸಾರ್ವಜನಿಕರ ಸಾಕಷ್ಟು ವಿರೋಧವೂ ಸರಕಾರದ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ. ಸದ್ಯಕ್ಕೆ ಹಸಿರು ನ್ಯಾಯ ಪೀಠದ ತಡೆಯಾಜ್ಞೆ ತಾತ್ಕಾಲಿಕ ತಡೆಯೊಡ್ಡಿರಬಹುದು. ಆದರೆ ಸರಕಾರ ಮತ್ತು ಸಚಿವರು ಆ ಸೇತುವೆ ನಿರ್ಮಿಸುವವರೆಗೂ ನಿದ್ರಿಸರು. ಅಲ್ಲಿಗೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿತೇ ಎಂದರೆ ಸಿಗದು ಎಂಬುದೇ ಸರಿಯಾದ ಉತ್ತರ. ಸಮಸ್ಯೆಯನ್ನೇ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಉಪಶಮನಕ್ಕೆ ಹೊರಟರೆ ಪರಿಹಾರವಾದರೂ ಎಲ್ಲಿ ಸಿಕ್ಕೀತು?

ಸಿಂಗಾಪುರದಲ್ಲಿ ಜಾರಿಗೆ ತಂದಿರಬಹುದಾದ ಒಂದು ನಿಯಮವನ್ನು ಇಲ್ಲಿ ಅನುಷ್ಠಾನಕ್ಕೆ ತರಲು ಬಹುಶಃ ಸಾಧ್ಯವೇ ಇಲ್ಲವೇನೋ? ನಮ್ಮಲ್ಲಿ ಎಲ್ಲದಕ್ಕೂ ಬಹುಕೋನಗಳಿರುತ್ತವೆ. ಉತ್ತರ ಮಾತ್ರ ಶೂನ್ಯ. ನಾವೀಗ ಬರೀ ಮಾತಿನಲ್ಲೇ ಮುಕ್ಕಾಲು ಆಯುಷ್ಯವನ್ನು ಕಳೆದಿದ್ದೇವೆ.

(ಲೇಖನ ಸೌಜನ್ಯ : ಅರವಿಂದ ನಾವಡ, ಉದಯವಾಣಿ)

RurbanIndia
RurbanIndia
RurbanIndia is a space to redesign, revalue and rejuvenate our Rurban Development. A comprehensive strategy and think tank towards our Rurbansphere. RurbanIndia is a webspace of EkaAneka Media.

LEAVE A REPLY

Please enter your comment!
Please enter your name here

Popular Articles