ಬೆಂಗಳೂರು ಮತ್ತಷ್ಟು ಕಾವೇರಿ ನೀರನ್ನು ತರಿಸಿಕೊಳ್ಳಲು ಸಿದ್ಧವಾಗುತ್ತಿರುವ ಹೊತ್ತು. ಹಲವು ನಗರಗಳಲ್ಲಿ ನೀರಿನ ಬೇಗೆ ಹೆಚ್ಚಾಗಿ ನಾಗರಿಕರು ಪರಸ್ಪರ ಯುದ್ಧಕ್ಕೆ ಸಜ್ಜಾಗುತ್ತಿರುವ ಹೊತ್ತು. ರಾಜಕಾರಣಿಗಳು ಪರಸ್ಪರ ಧಿಕ್ಕಾರ ಕೂಗಿಕೊಂಡು, ಘೋಷಣೆ ಹಾಕಿಕೊಳ್ಳುತ್ತಾ ಬೈದಾಡಿಕೊಳ್ಳುತ್ತಿರುವ ಹೊತ್ತು..ಈ ಹೊತ್ತು ಇಷ್ಟಕ್ಕೇ ಮುಗಿಯುವುದಿಲ್ಲ. ನೀರಿನ ಕೊರತೆಯ ಹಿಡಿತ ದಿನೇದಿನೆ ನಗರಗಳಲ್ಲಿ ಬಿಗಿಯಾಗುತ್ತಿದೆ. ಈಗಾಗಲೇ ಬಹುತೇಕ ನಗರ, ಅರೆನಗರಗಳಲ್ಲಿ ನೀರಿನ ಸಮಸ್ಯೆ ಆರಂಭವಾಗಿದೆ. ಹಳ್ಳಿಗಳನ್ನೂ ಬಿಟ್ಟಿಲ್ಲ.
ಅಂತರ್ಜಲದ ಮೇಲಿನ ಒತ್ತಡ ಹೆಚ್ಚುತ್ತಿದೆ. ಅತಿ ಕಷ್ಟ ಕಾಲಕ್ಕೆಂದು ಮೀಸಲಿಟ್ಟಿದ್ದ ಅಂತರ್ಜಲವೆಂಬ ನಿಧಿಯೂ ಖಾಲಿಯಾಗತೊಡಗಿದೆ. ಒಂದುವೇಳೆ ಇದೂ ಸಂಪೂರ್ಣ ಖಾಲಿಯಾದರೆ ಯಾವ ಪರಿಸ್ಥಿತಿ ಎಂಬುದಕ್ಕೆ ಈಗಿನ ರಾಷ್ಟ್ರದ ರಾಜಧಾನಿ ದಿಲ್ಲಿಯೇ ಉದಾಹರಣೆ. ಹಲವು ದಿನಗಳಿಂದ ನೀರಿನ ಕೊರತೆ ಬಿಡದೇ ಕಾಡುತ್ತಿದೆ. ದಿಲ್ಲಿ ಸರಕಾರ ಹರಿಯಾಣಕ್ಕೆ, ಹರಿಯಾಣ ದಿಲ್ಲಿಗೆ ಪರಸ್ಪರ ದೋಷಾರೋಪ ಮಾಡಿಕೊಳ್ಳುತ್ತಾ, ಸಮಸ್ಯೆ ಬಗೆಹರಿಸಬೇಕಾದ ಸಚಿವರು ಧರಣಿ ಮಾಡುವುದಾಗಿ ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ. ನಿತ್ಯವೂ ಅಂಗಡಿಯಿಂದ ಬಾಟಲಿ ನೀರು ತರಲಾಗದ ನಾಗರಿಕರು (ಆಮ್ ಆದ್ಮಿ) ದುಡಿಯುವುದನ್ನು ಬಿಟ್ಟು ನೀರು ಹಿಡಿಯುವುದರಲ್ಲಿ ನಿರತರಾಗಿದ್ದಾರೆ.
ಹಾಗಾದರೆ ಈ ಸಮಸ್ಯೆ ಯಾಕೆ ಇಷ್ಟು ಬಿಗಡಾಯಿಸಿದೆ? ಹರಿಯಾಣದವರು ನೀರು ಬಿಡಲಾಗದ್ದೇ ಸಮಸ್ಯೆಯ ಮೂಲವೇ? ಇತ್ಯಾದಿ ಪ್ರಶ್ನೆಗಳೊಂದಿಗೆ ಒಮ್ಮೆ ಸಮಸ್ಯೆಯ ಗೊಂದಲ ಪುರಕ್ಕೆ ಹೋಗಿ ಬಂದರೆ ತಿಳಿಯುವುದೇ ಬೇರೆ. ಹರಿಯಾಣದವರು ನೀರು ಬಿಟ್ಟರೆ ಈ ಹೊತ್ತಿಗೆ ನೀರು ಸಿಕ್ಕಿತೇನೋ. ಆದರೆ ಸದಾ ಅಲ್ಲ. ಯಾಕಾಗಿ ಗೊತ್ತೇ? ಕೇಂದ್ರ ಅಂತರ್ಜಲ ಮಂಡಳಿ ನೀಡಿರುವ ವರದಿಯ ಅಂಶಗಳನ್ನು ತಿಳಿದುಕೊಳ್ಳಿ. ಆ ವರದಿ ಪ್ರಕಾರ, ದಿಲ್ಲಿಯಲ್ಲೀಗ ಇರುವುದು ಕೇವಲ 1% ಅಂತರ್ಜಲವಷ್ಟೇ. ಶೇ. 99 ರಷ್ಟು ಅಂತರ್ಜಲವನ್ನು ವಸತಿ ಪ್ರದೇಶ, ಕೈಗಾರಿಕೆ, ಉದ್ಯಮ ಎನ್ನುತ್ತಾ ಎಲ್ಲರೂ ಸೇರಿ ಬಸಿದು ಕುಡಿದು ಬಿಟ್ಟಿದ್ದೇವೆ.
ದಿ ಎಕಾನಾಮಿಕ್ ಟೈಮ್ಸ್ ಪತ್ರಿಕೆಯ ವರದಿಯ ಉಲ್ಲೇಖದಂತೆ, 2023 ಅಂದರೆ ಕಳೆದ ಸಾಲಿನಲ್ಲಿ 0.38 ಕ್ಯೂಬಿಕ್ ಮೀಟರ್ ನಷ್ಟು ನೀರನ್ನು ಮರುಪೂರಣ ಮಾಡಲಾಗಿತ್ತಂತೆ. ಅದರಲ್ಲೀಗ 0.34 ಕ್ಯೂಬಿಕ್ ಮೀಟರ್ ನಷ್ಟು ನೀರು ಲಭ್ಯವಿದೆ. ಇದು ಬಿಟ್ಟರೆ ಬೇರೆ ಅಂತರ್ಜಲವಿಲ್ಲ. ಇದರರ್ಥ ಕಳೆದ ವರ್ಷ ಮರು ಪೂರಣ ಮಾಡಿದ್ದಷ್ಟೇ. ಉಳಿದಂತೆ ಯಾವ ಸಿಲ್ಕೂ ಇಲ್ಲ. ಇದರ ಬೆನ್ನಿಗೇ ಅಂತರ್ಜಲ ಬಳಕೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆಯೆಂದರೆ, 2022 ರಲ್ಲಿ ಈ ಪ್ರಮಾಣ 98.16 ರಷ್ಟಿದ್ದರೆ 2023 ಕ್ಕೆ 99.13 ಕ್ಕೆ ಜಿಗಿಯಿತು. ಹಾಗಾದರೆ ಉಳಿದದ್ದು ಎಷ್ಟು?
ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಅಂತರ್ಜಲದ ಬಳಕೆ (ನೀರಾವರಿ, ಕೃಷಿ, ಉದ್ಯಮ, ಸ್ಥಳೀಯ ಸಂಸ್ಥೆಗಳು ಇತ್ಯಾದಿ) ಯೂ ಹೆಚ್ಚಾಗುತ್ತಿದೆ. ಇದು ಬಹುತೇಕ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿನ ಸಮಸ್ಯೆ. ಹಾಗೆಂದು ಇದನ್ನು ವಿನಾಯಿತಿ ಎಂದು ತೆಗೆದುಕೊಳ್ಳುವಂಥದ್ದಲ್ಲ. ದಿಲ್ಲಿ ಸೇರಿದಂತೆ ಯಾವ ನಗರಗಳಲ್ಲೂ ಅಂತರ್ಜಲ ಮರುಪೂರಣಕ್ಕೆ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಬದಲಾಗಿ ಇರುವ ಎಲ್ಲ ಅವಕಾಶಗಳನ್ನು ಮುಚ್ಚಿಕೊಳ್ಳುತ್ತಿದ್ದೇವೆ. ನಮಗೆ ಸದ್ಯಕ್ಕೆ ಖಾಲಿ ಜಾಗ ಬೇಕಾಗಿದೆ !
ಈ ಮಂಡಳಿಯ ವರದಿಯು ಪ್ರಸ್ತಾವಿಸಿರುವ ಇನ್ನೊಂದು ಅಂಶವೆಂದರೆ, ನೀರಾವರಿ-ಕೃಷಿ ಉದ್ದೇಶಕ್ಕೂ ಅಂತರ್ಜಲವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಇದೂ ಸಹ ಅಂತರ್ಜಲ ಪ್ರಮಾಣ ಕುಸಿತಕ್ಕೆ ಕಾರಣ ಎಂದಿದೆ. ಹಾಗಾದರೆ ಇರುವ ಪರಿಹಾರಗಳು ಏನು? ಇನ್ನೇನು? ನೀರಿನ ಬಳಕೆಯನ್ನು ಮಿತಿಗೊಳಿಸುವುದು ಹಾಗೂ ಅದರ ಮೌಲ್ಯ ಅರಿತು ಬಳಸುವುದು. ಅಂತರ್ಜಲ ಮಂಡಳಿಯೂ ಸಹ ಒಂದಿಷ್ಟು ಕ್ರಮಗಳನ್ನು ಆಲೋಚಿಸಲೇ ಬೇಕು ಎಂದಿದೆ.
ಮಳೆ ನೀರು ಇಂಗಿಸುವಿಕೆ, ಸಂಸ್ಕರಿತ ನೀರಿನ ಮರು ಬಳಕೆ ಹೆಚ್ಚಿಸುವುದು, ಜನರಲ್ಲಿ ನೀರಿನ ಮಿತ ಬಳಕೆ ಕುರಿತು ಜಾಗೃತಿ ಅಭಿಯಾನ ಕೈಗೊಳ್ಳುವುದು, ವಿದ್ಯಾರ್ಥಿಗಳಿಂದ ಹಿಡಿದು ಎಲ್ಲರಿಗೂ ನೀರಿನ ಬಳಕೆ ಕುರಿತು ಮಾಹಿತಿ ನೀಡುವುದು, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು ಇತ್ಯಾದಿ ಕ್ರಮಗಳು ಅಗತ್ಯವಿದೆ ಎಂದಿದೆ.
ಇದರ ಮಧ್ಯೆ ದಿಲ್ಲಿ ನಡೆಸುತ್ತಿರುವ ಸರಕಾರದ ಮಂದಿ ಧರಣಿಗೆ ಮುಂದಾಗಿದ್ದಾರೆ. ಇದು ಖಂಡಿತಾ ಧರಣಿ ಕುಳಿತುಕೊಳ್ಳುವ ಹೊತ್ತಲ್ಲ, ರಾಜಕೀಯ ಮಾಡುವ ಸಮಯವೂ ಅಲ್ಲ. ಕೇಂದ್ರ ಸರಕಾರ ಹಾಗೂ ದಿಲ್ಲಿ ಸರಕಾರ ಒಟ್ಟಿಗೆ ಕುಳಿತು ಪರಿಹಾರ ಹುಡುಕಬೇಕಾದ ಹೊತ್ತು. ಇದು ಒಂದು ನಗರದ ಸಮಸ್ಯೆಯಲ್ಲ, ಹಲವು ನಗರಗಳ ಸಮಸ್ಯೆ. ಆದ ಕಾರಣ ನೀತಿ ನಿರೂಪಣೆ ನೆಲೆಯಲ್ಲೇ ಸಮಗ್ರವಾದ ಪರಿಹಾರ ಹುಡುಕಬೇಕಿದೆ.
ಅದಾಗಬೇಕು. ನಮ್ಮ ಬೆಂಗಳೂರು ಸೇರಿದಂತೆ ಉಳಿದ ನಗರಗಳು ದಿಲ್ಲಿಯಿಂದ ಪಾಠಗಳನ್ನು ಕಲಿತುಕೊಳ್ಳುತ್ತೇವೆಯೋ ಕಾದು ನೋಡಬೇಕು. (Pic : India TV News)