Thursday, May 30, 2024
spot_imgspot_img

Top 5 This Week

spot_img

Related Posts

ಉದ್ಯೋಗವೆಂಬುದು ಉದ್ಯಮವಾದದ್ದೇ ಸಮಸ್ಯೆಯೇ?

ಮಾನವ ಸಂಬಂಧಗಳ ನಿರ್ವಹಣೆಗೂ ತ್ಯಾಜ್ಯ ನಿರ್ಮಾಣ ಅಭ್ಯಾಸಕ್ಕೂ ಒಂದು ಸಂಬಂಧವಿದೆ. ಅದರ ನಾಡಿ ಹಿಡಿದು ನಡೆದರೆ ಬಹುಶಃ ಹೊಟೇಲ್‌ ಗಳಲ್ಲೇನು, ನಗರಗಳಲ್ಲೂ ತ್ಯಾಜ್ಯ ಸೃಷ್ಟಿಗೆ ಕೊನೆ ಹೇಳಬಹುದೇನೋ?

*

ಉದ್ಯಮಕ್ಕೂ ಉದ್ಯೋಗಕ್ಕೂ ಇರುವ ವ್ಯತ್ಯಾಸ ಬಹಳ ಸೂಕ್ಷ್ಮದ್ದು. ಆದರೆ ತೀರಾ ಗಹನವಾದದ್ದು. ಪಾಶ್ಚಾತ್ಯ ಜಗತ್ತಿನ ಕನ್ಸೂಮರಿಸಂನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ವಿಶ್ಲೇಷಿಸಿದರೆ ಸಿಗುವ ಅರ್ಥಗಳೇ ಬೇರೆ. ಇದೇ ನೆಲೆ ಒಂದು ಪರಿಕಲ್ಪನೆಯನ್ನೇ ಬದಲಾಯಿಸಿಬಿಡುತ್ತದೆ. ಇಂದು ನಮ್ಮ ಹೊಟೇಲ್‌ ಗಳ ಟೇಬಲ್‌ ಗಳಲ್ಲಿ/ಹೊಟೇಲ್‌ ಗಳಲ್ಲಿ ಸೃಷ್ಟಿಯಾಗುತ್ತಿರುವ ತ್ಯಾಜ್ಯಗಳ ಹಿಂದಿದೆ ಎಂದರೆ ಕೊಂಚ ಅಚ್ಚರಿ ಎನಿಸಬಹುದು.

ಒಂದು ದೃಷ್ಟಿಕೋನ ಹೊಸ ಜಗತ್ತನ್ನು ಸೃಷ್ಟಿಸಬಹುದು ಎಂಬುದು ಎಷ್ಟು ಸತ್ಯವೋ ಹಾಗೆಯೇ ಒಂದು ಜಗತ್ತನ್ನೇ ಕೊಂದು ಬಿಡಬಹುದು ಎನ್ನುವುದೂ ಅಷ್ಟೇ ಮಹತ್ವದ ಸತ್ಯ. ಜಾಗತೀಕರಣ, ಉದಾರೀಕರಣದ ನೆಲೆಯಲ್ಲೇ ಬಂದದ್ದು ಕನ್ಸೂಮರಿಸಂ. ಇದು ನಮ್ಮ ದೃಷ್ಟಿಕೋನದಲ್ಲೇ ಬದಲಾವಣೆ ತಂದದ್ದು ಸುಳ್ಳಲ್ಲ.

ಈ ಕನ್ಸೂಮರಿಸಂ ಗೂ ನಮ್ಮ ಹೊಟೇಲ್‌ ಗಳ ಟೇಬಲುಗಳಲ್ಲಿ ಸೃಷ್ಟಿಯಾಗುತ್ತಿರುವ ತ್ಯಾಜ್ಯಕ್ಕೂ ಸಂಬಂಧವಿದೆ ಎಂದರೆ ಅಚ್ಚರಿಯಾಗಬಹುದು. ಆದರೆ, ಖಂಡಿತಾ ಇದೆ.  ಅಷ್ಟೇ ಅಲ್ಲ ; ಇವತ್ತು ನಿರ್ಮಾಣವಾಗುತ್ತಿರುವ ಬಹುತೇಕ ತ್ಯಾಜ್ಯಗಳಿಗೆ ಅಥವಾ ತ್ಯಾಜ್ಯ ಸೃಷ್ಟಿಸುವುದು ಹವ್ಯಾಸವಾಗಿ ಪರಿವರ್ತನೆಗೊಂಡಿರುವುದಕ್ಕೂ ಕನ್ಸೂಮರಿಸಂನ ಕೊಡುಗೆ ಅಪಾರ.

ಉದ್ಯೋಗ ಮತ್ತು ಉದ್ಯಮ

ಇವೆರಡರ ನಡುವಿನ ಸಂಬಂಧ ಮತ್ತು ವ್ಯತ್ಯಾಸ ಕಣ್ಣಿಗೆ ಕಾಣುವಂಥದ್ದು. ಹಿಂದಿನ ಹೊಟೇಲ್‌ ಮಾಲಕರ ಕಾಳಜಿ ಬಗ್ಗೆ ಈಗಾಗಲೇ ಉಲ್ಲೇಖೀಸಿದ್ದೆ. ವ್ಯವಹಾರದ ಸಂಪೂರ್ಣ ಸಮಯ ಮಾಲಕರು ಹೊಟೇಲ್‌ನಲ್ಲೇ ಇರುತ್ತಿದ್ದರು. ಅರ್ಧ ಗಂಟೆಗೊಮ್ಮೆ ಇಡೀ ಹೊಟೇಲ್‌ ನ್ನು ಸುತ್ತು ಹಾಕುತ್ತಿದ್ದರು. ಯಾವ ಮೂಲೆಯಲ್ಲಿ ಯಾವುದು ವ್ಯರ್ಥವಾಗುತ್ತಿದೆ? ತರಕಾರಿ ಕತ್ತರಿಸುವವನು ಮೂಲಂಗಿಯನ್ನು ಕೆತ್ತುತ್ತಿದ್ದಾನೋ, ಸಣ್ಣದಾಗಿ ಕತ್ತರಿಸುತ್ತಿದ್ದಾನೋ ಎಂಬುದರಿಂದ ಹಿಡಿದು ತಟ್ಟೆ ತೊಳೆಯುವ ಹುಡುಗ ಸುಮ್ಮನೆ ಸೋಪಿನ ಆಯಿಲ್‌ ನ್ನು ಲೆಕ್ಕವಿಲ್ಲದೇ ಸುರಿದು ಹಾಳು ಮಾಡುತ್ತಿದ್ದಾನೋ, ಸರಿಯಾಗಿ ಕೆಲಸ ಮಾಡುತ್ತಿದ್ದಾನೋ-ಎನ್ನುವುದರವರೆಗೆ ಎಲ್ಲವನ್ನೂ ಗಮನಿಸುತ್ತಿದ್ದರು. ಯಾಕೆಂದರೆ, ಅದು ಅವರಿಗೆ ಉದ್ಯೋಗವಾಗಿತ್ತು.

ಮಾಲಕನ ಕುಟುಂಬ ಅದರಿಂದ ಬದುಕುತ್ತಿತ್ತು. ಮಾಲಕನಿಗೆ ಆ ಹೊಟೇಲ್‌ ನ್ನು ನಿರ್ವಹಿಸುವುದರ ಹೊರತಾಗಿ ಬೇರೆ ಉದ್ಯೋಗವಿರುತ್ತಿರಲಿಲ್ಲ. ಹಾಗಾಗಿ ಪ್ರತಿ ಹಂತದಲ್ಲೂ ನಿರ್ವಹಣೆ ಸರಿ ಇರಬೇಕಾದದ್ದು ಅನಿವಾರ್ಯವಾಗಿತ್ತು. ಜತೆಗೆ ಒಂದು ನೆಲೆಯಲ್ಲಿ ನಿರ್ವಹಣೆ ನಮ್ಮ ಕೈ ತಪ್ಪಿದರೆ ಆ ರೋಗ ಎಲ್ಲೆಡೆಗೂ ಹಬ್ಬೀತೆಂಬ ಆತಂಕ ಕಾಡುತ್ತಿತ್ತು. ಅದರಿಂದ ತನ್ನ ಕುಟುಂಬ ಉದ್ಯೋಗವಿಲ್ಲದೇ ಬೀದಿಗೆ ಬಿದ್ದೀತೆಂಬ ಭಯ ಸುಮ್ಮನೆ ಕುಳಿತುಕೊಳ್ಳಲು ಬಿಡುತ್ತಿರಲಿಲ್ಲ.

ಅದೇ ಕಾರಣದಿಂದ, ಒಬ್ಬ ಗ್ರಾಹಕ ಒಂದುವೇಳೆ ಟೇಬಲ್‌ ಮೇಲೆ ಅರ್ಧ ತುಂಡು ದೋಸೆ ಬಿಟ್ಟು ಹೋದ ಎಂದುಕೊಳ್ಳಿ. ಆ ಗ್ರಾಹಕನ ಬಳಿ ಮಾಲಕರೇ ಬಂದು ಅಥವಾ ಸಂಬಂಧಪಟ್ಟ ಗ್ರಾಹಕ ಗಲ್ಲ ಪೆಟ್ಟಿಗೆಗೆ ಹಣ ಪಾವತಿಸಲು ಬಂದಾಗ ,’ಏಕೆ ದೋಸೆ ಬಿಟ್ಟಿದ್ದು?’ ಎಂದು ಪ್ರಶ್ನಿಸುತ್ತಿದ್ದರು. ಇದರಲ್ಲಿ ಬಹಳ ಮುಖ್ಯವಾದ ಕಾಳಜಿ, ನಾಳೆ ಈ ಗ್ರಾಹಕ ಬಾರದಿದ್ದರೆ ಎನ್ನುವುದು. ಜತೆಗೆ ನಿಜವಾಗಿಯೂ ಆ ಹಿಟ್ಟಿನಲ್ಲೋ, ಉತ್ಪನ್ನದಲ್ಲೋ ದೋಷವಿದ್ದರೆ ಅಷ್ಟನ್ನೂ ಏನು ಮಾಡುವುದು? ಬಿಸಾಡಿ ವ್ಯರ್ಥ ಮಾಡುವುದೇ ಎಂಬ ಆತಂಕ ಕಾಡುತ್ತಿತ್ತು. ಇದು ಒಂದು ಹೊಟೇಲ್‌ ನ ಕಥೆಯಾಗಿರಲಿಲ್ಲ. ಉದ್ಯೋಗದ ಬಗೆಗಿನ ಕಾಳಜಿಯದು.

ಕ್ರಮೇಣ ಒಬ್ಬ ಮಾಲಕ ದೊಡ್ಡ ನಗರಕ್ಕೆ ಬಂದು ನಾಲ್ಕೈದು ಹೊಟೇಲ್‌ ಗಳನ್ನು ತೆರೆದ. ಆರಂಭದಲ್ಲಿ ಎಲ್ಲ ಕಡೆಗೂ ದಿನದ ಒಂದು ಗಂಟೆ ಎಲ್ಲ ಹೊಟೇಲ್‌ ಗಳಲ್ಲೂ ಕಳೆಯತೊಡಗಿದ. ಉಳಿದದ್ದಕ್ಕೆಲ್ಲಾ ಮ್ಯಾನೇಜರ್‌ ಗಳನ್ನು ನೇಮಿಸಿದ. ಮ್ಯಾನೇಜರ್‌ಗಳು ಅದನ್ನು ನಿರ್ವಹಿಸತೊಡಗಿದರು. ಅವರಿಗೆ ಗ್ರಾಹಕನು ಏನು ಕೇಳಿದರೂ ಕೊಟ್ಟರೆ, ಅವರು ಕಾಮಧೇನುವಾಗುತ್ತಾರೆ ಎಂಬ ನಂಬಿಕೆಯಿತ್ತು. ಅದರ ಪ್ರಯೋಗ ಆರಂಭವಾಯಿತು. ಹಾಗಾಗಿಯೇ ಒಂದು ದೋಸೆಯೆಂಬ ಸ್ವರಕ್ಕೆ ಹತ್ತಾರು ವ್ಯಂಜನಗಳು ಬಂದದ್ದು. ಅವೆಲ್ಲವನ್ನೂ ಲೆಕ್ಕದಲ್ಲಿಟ್ಟುಕೊಂಡು ಏರಿಸಿದ ಬೆಲೆಗೆ ಗ್ರಾಹಕರೂ ಏನೂ ಹೇಳಲಿಲ್ಲ. ಇದರ ಮಧ್ಯೆ ಮಾಲಕ ವಾರಕ್ಕೊಮ್ಮೆಯೋ, ಎರಡು ದಿನಕ್ಕೊಮ್ಮೆಯೋ ಲೆಕ್ಕ ತೆಗೆದುಕೊಳ್ಳಲಿಕ್ಕೆ ಬರತೊಡಗಿದ. ಐದಾರು ಹೊಟೇಲ್‌ಗ‌ಳ ಶಾಖೆಯಾದ ಮೇಲೆ ಗ್ರೂಪ್‌ ಆಫ್ ಕಂಪೆನೀಸ್‌ ರೀತಿ ಆಯಿತು. ಅಂದರೆ ಉದ್ಯಮವಾಗಿ ಪರಿವರ್ತಿತವಾಯಿತಲ್ಲವೇ? ದೊಡ್ಡ ದೊಡ್ಡ ಕಂಪೆನಿಗಳಲ್ಲೂ ಮುಖ್ಯಸ್ಥರು ಮಾಡುವುದು ಅದನ್ನೇ. ಗ್ರಾಹಕನಿಗೆ ಸಂತಸಪಡಿಸಿ ಉಳಿದದ್ದನ್ನು ನಿರ್ವಹಿಸುವುದು. ಆ ಸಂದರ್ಭದಲ್ಲಿ ಸಂಪನ್ಮೂಲದ ಬಗೆಗಿನ ಕಾಳಜಿಯಾಗಲೀ ಮುಖ್ಯವಾಗುವುದಿಲ್ಲ. ಹಾಗಾಗಿ ಗ್ರಾಹಕ ಎಷ್ಟು ತಿಂದ, ಎಷ್ಟು ಬಿಟ್ಟ, ಯಾಕೆ ಬಿಟ್ಟ ಯಾವುದೂ ಮುಖ್ಯವಾಗುವುದಿಲ್ಲ. ಅವರಿಗೆ ಅದರ ಬಿಲ್‌ ಬಂದರೆ ಸಾಕು. ಇಂಥ ಧೋರಣೆಯೂ ಟೇಬಲ್‌ ಗಳ ಮೇಲಿನ ತ್ಯಾಜ್ಯ ಸೃಷ್ಟಿಗೆ ಕಾರಣವಾಗುತ್ತಿದೆ ಎಂಬುದನ್ನು ನಾವು ಅರಿಯಬೇಕಾದ ಸಂದರ್ಭವಿದು.

ಪ್ರಸಂಗ ಒಂದು

ಸುಮಾರು ನಲವತ್ತು ವರ್ಷಗಳ ಹಿಂದಿನಿಂದ ಒಬ್ಬರು ಮಾಲಕರು ಹೊಟೇಲ್‌ ನಡೆಸುತ್ತಿದ್ದರು. ಬಹಳ ಪ್ರಸಿದ್ಧವಾದ ಹೊಟೇಲ್‌. ಪ್ರತಿಯೊಂದರ ಬಗ್ಗೆಯೂ ಕಾಳಜಿ ತೋರುತ್ತಾ, ಯಾವುದೂ ವ್ಯರ್ಥವಾಗದಂತೆ ಉಸ್ತುವಾರಿ ವಹಿಸಿದ್ದರು. ಒಂದು ದಿನ ತಾನು ಯಾವುದೋ ಬಂಧುವಿನ ಮದುವೆಗೆ (ಆಪ್ತ ಬಂಧುಗಳನ್ನು ಹೊರತುಪಡಿಸಿ) ಹೋಗಿ ಬಂದರೆ, ಇಲ್ಲಿ ಏನಾಗುತ್ತದೋ ಎಂಬ ಆತಂಕದಿಂದ ಬದುಕುತ್ತಿದ್ದರು. ಕೆಲವು ವರ್ಷಗಳ ಬಳಿಕ ಅವರ ಮಗ ಅದನ್ನು ನಿರ್ವಹಿಸತೊಡಗಿದ. ಹೆಚ್ಚು ಶಾಖೆ ಇತ್ಯಾದಿ ಗೋಜಿಗೆ ಹೋಗಲಿಲ್ಲ. ಅದನ್ನೇ ಚೆಂದವಾಗಿ ನಿರ್ವಹಿಸತೊಡಗಿದ್ದ. ಮಧ್ಯೆ ಸಹಾಯಕರಿದ್ದರು. ಸಹಾಯಕರೊಬ್ಬರು ಸಾಮಗ್ರಿ ಖರೀದಿಯಲ್ಲಿ ಗುಣಮಟ್ಟದ ಬಗ್ಗೆ ಕಾಳಜಿ ತೋರದಿದ್ದುದು ಅರ್ಥವಾಯಿತು. ಕೂಡಲೇ ಆ ಕೆಲಸವನ್ನು ತಾನೇ ನಿರ್ವಹಿಸತೊಡಗಿದ. ತಿಂಗಳಿಗೆ ಒಂದಿಷ್ಟು ಹಣವಷ್ಟೇ ಉಳಿತಾಯವಾಗಲಿಲ್ಲ ; ಅಪಾರ ಪ್ರಮಾಣದ ಆಹಾರ ಸಂಪನ್ಮೂಲ ಉಳಿತಾಯವಾಗತೊಡಗಿತು. ಇದು ಸಮರ್ಪಕ ನಿರ್ವಹಣೆ ಮತ್ತು ಉದ್ಯೋಗದ ಬಗೆಗಿನ ಕಾಳಜಿಯಿಂದ ಆದ ಬದಲಾವಣೆ. ಯಾಕೆಂದರೆ ಇವರಿಗೂ ಉದ್ಯೋಗವೇ ಆ ಹೊಟೇಲ್‌.

ಪ್ರಸಂಗ ಎರಡು

ಇಂಥದ್ದೇ ಒಂದು ಸಂದರ್ಭದಲ್ಲಿ ಮತ್ತೂಬ್ಬ ಮಾಲಕರು ಹೊ  ಟೇಲ್‌ ನಡೆಸುತ್ತಿದ್ದರು. ಕಾಳಜಿಗೆ ಕಡಿಮೆ ಇರಲಿಲ್ಲ. ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದರು. ಒಳ್ಳೆ ವಹಿವಾಟೂ ನಡೆಯುತ್ತಿತ್ತು. ವ್ಯವಹಾರದ ಅಷ್ಟೂ ಗಂಟೆ ಹೊಟೇಲ್‌ ನಲ್ಲಿರುತ್ತಿದ್ದರು. ನಷ್ಟವೆಂಬುದಾಗಲೀ, ವ್ಯಥವೆಂಬುದಾಗಲೀ ಘಟಿಸಬಾರದೆಂದು ನಿರ್ಧರಿಸಿದಂತೆ ಇತ್ತು. ಒಮ್ಮೆ ಸ್ವಲ್ಪ ವ್ಯವಹಾರ ಕುಸಿಯತೊಡಗಿತು. ಆಗ ಎಲ್ಲಿ ವ್ಯಾಪಾರ ನಷ್ಟವಾಗುತ್ತೋ ಎಂಬ ಆತಂಕ ಕಾಡತೊಡಗಿತು. ತತ್‌ ಕ್ಷಣವೇ ಜಾಗೃತರಾಗಿ, ಗ್ರಾಹಕರ ಮನವೊಲಿಸಲು ತೊಡಗಿದರು. ಗ್ರಾಹಕರ ಬೇಡಿಕೆಗೆ ತಕ್ಕಂತೆ ಉತ್ಪನ್ನಗಳನ್ನು ತಯಾರಿಸತೊಡಗಿದರು. ಇವೆಲ್ಲದರ ಹಿನ್ನೆಲೆಯಲ್ಲಿ ಮತ್ತೆ ವ್ಯಾಪಾರ ಚಿಗುರಿತು. ಈ ಮಧ್ಯೆ ಅವರ ಮಗ ವ್ಯವಹಾರಕ್ಕೆ ಬಂದ. ಬದಲಾಗುತ್ತಿರುವ ವರ್ತಮಾನಕ್ಕೆ ನಮ್ಮ ಹೊಟೇಲ್‌ ಸರಿ ಇಲ್ಲ ಎನಿಸತೊಡಗಿತು. ವಿನ್ಯಾಸದಿಂದ ಹಿಡಿದು ಆಹಾರದವರೆಗೂ ಒಂದಿಷ್ಟು ಬದಲಾವಣೆ ತಂದ. ಜತೆಗೆ ನಾಲ್ಕಾರು ಶಾಖೆಗಳನ್ನು ತೆರೆದ. ಎಲ್ಲ ಕಡೆಗೂ ಮ್ಯಾನೇಜರ್‌ ಗಳನ್ನು ಇಟ್ಟ. ನಿತ್ಯವೂ ಸ್ವಲ್ಪ ಹೊತ್ತು ಒಂದೊಂದು ಹೊಟೇಲ್‌ಗ‌ಳಲ್ಲಿ ಇರತೊಡಗಿದ. ತನ್ನ ಜನರಿಂದ ಇಡೀ ವ್ಯಾಪಾರವನ್ನು ನಿಯಂತ್ರಿಸತೊಡಗಿದ.  ಹೇಗೋ ನಡೆಯುತ್ತಿತ್ತು. ಕ್ರಮೇಣ ಒಂದೊಂದೇ ಕಡೆ ನಷ್ಟ ಆರಂಭವಾಗತೊಡಗಿತು. ನಂತರದ ಕಥೆ ಇಲ್ಲಿಗೆ ಅಪ್ರಸ್ತುತ. ಯಾಕೆಂದರೆ, ನಾನು ಎರಡೂ ಪ್ರಸಂಗಗಳಲ್ಲಿ ವ್ಯಾಪಾರ-ವಹಿವಾಟಿನ ಬಗ್ಗೆ ಹೇಳಲು ಹೊರಟಿದ್ದಲ್ಲ. ಬದಲಾಗಿ, ಉದ್ಯೋಗ ಮತ್ತು ಉದ್ಯಮದ ಮಧ್ಯೆ ಇರಬಹುದಾದ ಕಾಳಜಿಯ ನೆಲೆಯನ್ನು ಹೇಳುವುದಷ್ಟೇ.

ಮಾನವ ಸಂಬಂಧದ ಕೊಂಡಿ

ಎಲ್ಲಿ ಮಾನವ ಸಂಬಂಧದ ಕೊಂಡಿ ಕಳಚುತ್ತದೆಯೋ, ಯಾಂತ್ರಿಕತೆ ಆವರಿಸುತ್ತದೆಯೋ ಅಲ್ಲೆಲ್ಲಾ ಕಾಳಜಿ ಎಂಬುದು ಇರುವುದಿಲ್ಲ. ಅದು ಅಕ್ಷರಶಃ ಸತ್ಯ. ಹಿಂದಿನ ಹೊಟೇಲ್‌ ಮಾಲಕರು ಗೆದ್ದದ್ದು ಮಾನವ ಸಂಬಂಧ ನಿರ್ವಹಿಸುವಲ್ಲಿ. ಉದ್ಯೋಗ ಉದ್ಯಮವಾಗುವ ಸಾಧ್ಯತೆ ಹುಟ್ಟಿಕೊಂಡಿದ್ದೇ  ಅಲ್ಲಿ. ಇಪ್ಪತ್ತು ನಿಮಿಷದಲ್ಲಿ ಪ್ರತಿ ಗ್ರಾಹಕನ ಅಭ್ಯಾಸಗಳನ್ನು ಆಗಿನವರು ಪಟ್ಟಿ ಮಾಡಿಕೊಡುತ್ತಿದ್ದರು. ಅಷ್ಟೊಂದು ವರ್ತನಾ ಅಧ್ಯಯನ ನಿಷ್ಣಾತರಾಗಿದ್ದರು. ಈಗಿನ ಸಂದರ್ಭಗಳನ್ನು ಹೊಂದಿಸಿಕೊಂಡು ನೋಡಿದರೆ ಈ ಮಾತು ಇನ್ನಷ್ಟು ಸ್ಪಷ್ಟವಾಗುತ್ತದೆ.

ನನಗೆ ಅನಿಸುವುದು ಹೀಗೆ. ತ್ಯಾಜ್ಯಗಳ ಸೃಷ್ಟಿ (ಬರೀ ಹೊಟೇಲ್‌ನದ್ದಲ್ಲ) ಕಡಿಮೆಯಾಗಬೇಕೆಂದರೆ, ನಿರ್ವಹಣೆ ಸಮರ್ಪಕವಾಗಬೇಕೆಂದರೆ ನಮ್ಮ ಮಾನವ ಸಂಬಂಧಗಳ ಕೊಂಡಿಯನ್ನು ಗಟ್ಟಿಗೊಳಿಸಿಕೊಳ್ಳಬೇಕು. ನಮ್ಮ ನಡುವೆ ಸಂಭಾಷಣೆ ಸಾಧ್ಯವಾಗಬೇಕು (ಮಾಲಕ-ಗ್ರಾಹಕ, ನಾಗರಿಕ-ಸ್ಥಳೀಯ ವ್ಯವಸ್ಥೆ ಇತ್ಯಾದಿ). ಇದರಲ್ಲಿ ಸಿಗುವ ಯಶಸ್ಸಿನ ಪ್ರತಿಫ‌ಲವೆಂದರೆ ಎಲ್ಲ ಬಗೆಯ ಸಂಪನ್ಮೂಲಗಳ ವ್ಯರ್ಥಕ್ಕೆ ಕೊನೆ.

ಪ್ರತಿ ಕ್ಷಣವೂ ನಾವು ಸಾಮಾಜಿಕ ಮಾಧ್ಯಮಗಳ ಮಗ್ಗುಲಲ್ಲಿ ಮಲಗಲು ಹೊರಟು, ಕುಟುಂಬದೊಳಗಿನ ಸಂಬಂಧಗಳಿಂದಲೇ ಕಳಚಿಕೊಳ್ಳುತ್ತಿರುವಾಗ ಸಾಮಾಜಿಕ ಸಂಬಂಧ ಪುನರ್‌ ಸ್ಥಾಪನೆ ಕಷ್ಟವಲ್ಲವೇ ಎನಿಸುತ್ತದೆ. ಇದಕ್ಕೂ ನಮ್ಮ ನಗರ ಸಂಸ್ಕೃತಿಗೂ, ಅಲ್ಲಿ ಸೃಷ್ಟಿಯಾಗುತ್ತಿರುವ ತ್ಯಾಜ್ಯಕ್ಕೂ ಅವಿನಾಭಾವ ಸಂಬಂಧವಿದೆ ಎಂದರೆ ನಂಬಲೇಬೇಕು.

RurbanIndia
RurbanIndia
RurbanIndia is a space to redesign, revalue and rejuvenate our Rurban Development. A comprehensive strategy and think tank towards our Rurbansphere. RurbanIndia is a webspace of EkaAneka Media.

LEAVE A REPLY

Please enter your comment!
Please enter your name here

Popular Articles