Saturday, July 27, 2024

Top 5 This Week

spot_img

Related Posts

ಕಿಷ್ಕಿಂಧೆಗಿಂತ ಕಿರುಗಲ್ಲಿಗಳಾಗಿ ಬಿಟ್ಟರೆ ನಮ್ಮ ನಗರಗಳು ?

ನಗರ ವಿನ್ಯಾಸದ ಕಲ್ಪನೆಯನ್ನು ಸಮಗ್ರವಾಗಿ ನಾವು ಅಂದರೆ ನಾಗರಿಕರು ಮತ್ತು ನಮ್ಮನ್ನಾಳುವವರು ಅರ್ಥ ಮಾಡಿಕೊಳ್ಳದಿದ್ದರೆ ಸುಗ್ರೀವನ ಕಿಷ್ಕಿಂಧೆಯನ್ನು ಮೀರಿಸುವಂಥ ಕಿರುಗಲ್ಲಿಗಳಾಗಿಬಿಡುತ್ತವೆ ನಮ್ಮ ನಗರಗಳು. ಆಗ ನಾವೆಲ್ಲರೂ ಏಕಮುಖೀ ಸಂಚಾರಿಗಳು. ವಾಪಸು ಬರಲು ಮಾರ್ಗಗಳೇ ಇರುವುದಿಲ್ಲ.

*

ನಮ್ಮ ನಗರಗಳು ಸುಂದರವಾಗಿರಬೇಕು ಎಂದು ಬಯಸುವುದು ಸದಾಶಯವೋ, ಅಗತ್ಯವೋ ಎಂಬುದು ಸದಾ ಚರ್ಚೆಗೊಳಪಡಿಸಬೇಕಾದದ್ದೇ. ಸದಾಶಯಗಳೆಲ್ಲಾ ಅಗತ್ಯಗಳಾಗಿರಬೇಕೆಂಬ ಯಾವ ಕಡ್ಡಾಯವೂ ಇಲ್ಲ. ಹಲವು ಬಾರಿ ಆದರ್ಶ ಸಾಮ್ರಾಜ್ಯದಲ್ಲಿ ಒಂದಿಷ್ಟು ವಿಷಯಗಳು-ವಿಚಾರಗಳು ಕಲ್ಪನೆಗೆಂದೆ ಇರುತ್ತವೆ. ಗ್ರೀಕ್‌ ರಾಜನೀತಿಜ ಪ್ಲೇಟೋ ಹೇಳುವ ಆದರ್ಶ ರಾಜ್ಯದ ಕಲ್ಪನೆಯೂ ಇಂಥದ್ದೇ ಒಂದು ನೆಲೆಯಲ್ಲಿ ಬಂದು ನಿಲ್ಲುವಂಥದ್ದು. ಇದಕ್ಕೂ ಕಾರಣವಿದೆ. ಅಗತ್ಯಗಳು ನಿರ್ಧಾರವಾಗುವುದು ವರ್ತಮಾನದ ಕಲ್ಲಿನ ಮೇಲೆ. ಸದಾಶಯಗಳು ಹಾಗಲ್ಲ. ಅವುಗಳು ಹುಟ್ಟಿಕೊಳ್ಳುವುದೆ ಕಲ್ಪನೆಯ ನೆಲೆಯಲ್ಲಿ.

ಯಾವ ವರ್ತಮಾನದ ಸಂದರ್ಭವೂ ಕಲ್ಪನೆಗೆ ತೊಂದರೆ ಮಾಡುವುದಿಲ್ಲ, ಪರಿಣಾಮವನ್ನೂ ಬೀರುವುದಿಲ್ಲ. ಆದರೆ ಅಗತ್ಯಗಳು ಇದಕ್ಕೆ ವಿರುದ್ಧವಾದ ಮನಸ್ಥಿತಿಯಲ್ಲಿರುತ್ತದೆ. ವರ್ತಮಾನದ ಪ್ರತಿ ಕ್ಷಣದ ಬೆಳವಣಿಗೆಯೂ ಅಗತ್ಯಗಳ ದಿಕ್ಕನ್ನು ಬದಲಾಯಿಸುತ್ತಲೇ ಇರುತ್ತದೆ. ಆದರೆ ಈ ಸಂದರ್ಭದಲ್ಲಿ ಸದಾಶಯವೇ ಅಗತ್ಯವಾಗಿ ಮಾರ್ಪಟ್ಟಿರುವುದು ಬಹಳ ಸ್ಟಷ್ಟ.

ಇಡೀ ಜಗತ್ತು ನಗರಮುಖೀಯಾಗಿರುವಾಗ, ಎಲ್ಲ ಹಳ್ಳಿಗಳೂ ನಗರದ ವೇಷ ಹಾಕಿಕೊಂಡು ಕುಣಿಯಬೇಕೆಂದು ಹಂಬಲಿಸುತ್ತಿರುವ ಹೊತ್ತಿನಲ್ಲಿ ಸದಾಶಯ ಅಗತ್ಯವಾಗಿ ಮಾರ್ಪಟ್ಟಿದೆ. ಮೂರು ಗಂಟೆಯ ನಾಟಕದಲ್ಲಿ ರಾಜನ ವೇಷ ಹಾಕಿಕೊಂಡ ಪಾತ್ರಧಾರಿ, ಪರದೆ ಕೆಳಗೆ ಇಳಿದು, ಬೆಳಕು ಆರಿ, ಜನರೆಲ್ಲಾ ಥಿಯೇಟರಿನಿಂದ ಹೊರಗೆ ಹೋದ ಮೇಲೆ ಏನಾಗಿ ಉಳಿಯುತ್ತಾನೆಂಬುದೇ ಸತ್ಯ. ಇಲ್ಲಿ ಸತ್ಯ ಎಂಬುದು ವಾಸ್ತವ ಎಂಬ ಅರ್ಥದಲ್ಲಿ ಬಳಕೆಯಾಗಿರುವಂಥದ್ದು. ಬಹುಪಾಲು ಹಳ್ಳಿಗಳ ಸ್ಥಿತಿ ಅದೇ ರೀತಿಯಿದೆ. ನಗರದಂತೆ ವೇಷ ಹಾಕಿ, ಪಾತ್ರ ಮುಗಿದ ಮೇಲೆ ಏನಾಗಿರುತ್ತವೆ ಎಂಬುದಕ್ಕೆ ಹಲವು ನಿದರ್ಶನಗಳಿವೆ.ಆದರೂ ನಗರದ ಮೇಲಿನ ಮೋಹ ಕಡಿಮೆಯಾಗಿಲ್ಲ. ಹಾಗಾಗಿಯೇ ನಮ್ಮ ನಗರಗಳು ಸುಂದರವಾಗಿರಬೇಕು ಎಂದು ಬಯಸುವುದು ಬರೀ ಸೌಂದರ್ಯೋಪಾಸನೆಯ ಆಯಾಮವಾಗಿರದು.

ನಗರ ವಿನ್ಯಾಸ

ಸುಂದರ ನಗರಗಳು ಎಂಬ ಆವರಣದಲ್ಲೇ ಈ ವಿನ್ಯಾಸದ ವಿಷಯವೂ ಪ್ರಸ್ತಾಪವಾಗುವಂಥದ್ದು. ನಗರದ ವಿನ್ಯಾಸ ಹೇಗಿರಬೇಕು ಎಂದು ಆಲೋಚಿಸುವುದೇ ಕಡಿಮೆ. ನಮಗೆ ಒಟ್ಟೂ ಅಭಿವೃದ್ಧಿಯಾಗಬೇಕು. ಒಂದು ನಗರದ ಸೌಂದರ್ಯವೆಂದರೆ ದೊಡ್ಡ ದೊಡ್ಡ ಬೀದಿಗಳು ಮಾತ್ರವೇ? ಬರೀ ಪಾರಂಪರಿಕ ಕಟ್ಟಡಗಳು ಕೂಡಿದ್ದರೆ ಸಾಕೇ? ಕಾಡಿನಂತೆ ಒಂದಿಷ್ಟು ಹಸಿರು ತುಂಬಿದ್ದರೆ ಸೊಬಗೇ? ಗಗನಚುಂಬಿ ಕಟ್ಟಡಗಳನ್ನು ಸಾಲಾಗಿ ನಿಲ್ಲಿಸಿಬಿಟ್ಟರೆ ಮುಗಿಯುವುದೇ? ಇಂಥ ಯಾವ ಕಲ್ಪನೆಯೂ ಸುಂದರ ನಗರದ ಸಮಗ್ರ ಕಲ್ಪನೆಯನ್ನು ನೀಡದು.

ಮೈಸೂರಿನ ಡಿ. ದೇವರಾಜ ಅರಸ್‌ ರಸ್ತೆಯನ್ನು ನೋಡಿರಬಹುದು. ಕೆ. ಆರ್‌. ಸರ್ಕಲ್‌ ನಿಂದ ಆರಂಭವಾಗಿ ಡಿ ಸಿ ಕಚೇರಿವರೆಗೆ ಸಾಗುತ್ತದೆ. ಅಂದಾಜು ಎರಡು ಕಿ.ಮೀ ನ ದೂರ ಇರಬಹುದು. ಇದು ಮೈಸೂರಿನ ಹೃದಯ ಭಾಗ. ವೃತ್ತಕ್ಕೆ ತಾಗಿಯೇ ಮಾರುಕಟ್ಟೆ, ಎರಡು ನಿಮಿಷ ನಡೆದರೆ ಅರಮನೆ, ಹತ್ತು ನಿಮಿಸ ಸಾಗಿದರೆ ಬಸ್ಸು ನಿಲ್ದಾಣ, ಸ್ವಲ್ಪ ದೂರ ಹೋದರೆ ರೈಲ್ವೆ ನಿಲ್ದಾಣ, ಪ್ರತಿ ದಸರಾದ ಮೆರವಣಿಗೆ ಸಾಗುವ ಪ್ರಮುಖವಾದ ಮಾರ್ಗವಷ್ಟೇ ಅಲ್ಲ. ಇಡೀ ಮೈಸೂರಿಗೊಂದು ಕಳೆ ತುಂಬುವ ರಸ್ತೆ ಇದು.

ಸಂಜೆ ಏಳರ ಸುಮಾರಿಗೆ ನಡೆಯ ತೊಡಗಿದರೆ ಈ ರಸ್ತೆಯ ಸೊಬಗನ್ನು ಸವಿಯಬಹುದು. ಎಲ್ಲ ಅಂಗಡಿಗಳಲ್ಲೂ ಝಗಮಗಿಸುವ ಬೆಳಕಿರುತ್ತದೆ. ರಸ್ತೆಯೇ ವೈಭವದ ರಂಗಿನಿಂದ ಮೈಮರೆತಿರುತ್ತದೆ. ಸುಮಾರು 2 ಕಿ.ಮೀ ರಸ್ತೆ ಮಧ್ಯೆ ಸಿಗುವ ಐದಾರು ಗಲ್ಲಿಗಳಲ್ಲೂ ಜನ ತುಂಬಿರುತ್ತಾರೆ. ನಿಜ, ಇದು ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಂತೆ ಶೋಭಿಸದು. ಅದರಂತೆ ಲಕ್ಷುರಿಯ ವಾತಾವರಣ ಇಲ್ಲಿ ಕಾಣಬರದು. ಆದರೆ, ಇದಕ್ಕೇ ಒಂದು ಸೌಂದರ್ಯವಿದೆ. ಹೀಗೆ ಸಾಗಿ ಹೋಗುವಾಗ ತೀಡಿ ಹೋಗುವ ತಂಗಾಳಿಯ ಅನುಭವ ಈ ರಸ್ತೆ ಕೊಡಬಲ್ಲದು. ಎಂಜಿ ರೋಡ್‌ ನ ಜನಜಂಗುಳಿ ಇಲ್ಲಿ ಅಷ್ಟೊಂದು ಸಿಗದು. ರಾತ್ರಿ ಹನ್ನೆರಡಾದರೂ ನಿಯಾನ್‌ ದೀಪಗಳು ಕಣ್ಣಿಗೆ ಕುಕ್ಕವು. ಯಾಕೆಂದರೆ, ದೇವರಾಜ ಅರಸ್‌ ರಸ್ತೆ ಹತ್ತು ಗಂಟೆಗೆ ಮಲಗಿಕೊಳ್ಳುತ್ತದೆ.

ಹಾಗಾದರೆ ಸಮಸ್ಯೆ ಏನು?

ಸಮಸ್ಯೆ ಎಂದರೆ ರಸ್ತೆಯಲ್ಲಿ ನಡೆಯುವ ಚಟುವಟಿಕೆಗೆ ತಕ್ಕಂತೆ ಸ್ಥಳಗಳನ್ನು ಉಳಿಸಿಕೊಂಡಿಲ್ಲ. ಹಾಗಾಗಿ ಸಂಜೆಯ ಹೊತ್ತಿಗೆ ದಂಪತಿ ಶಾಪಿಂಗ್‌ ಗೆ ಬಂದರೆನ್ನಿ. ಗಂಡ ಕಾರನ್ನು ಚಾಲನೆ ಸ್ಥಿತಿಯಲ್ಲಿಟ್ಟುಕೊಂಡಿರಬೇಕು. ಹೆಂಡತಿ ಅಂಗಡಿಯ ಒಳಗೆ ಹೋಗಿ ಎಷ್ಟು ಸಾಧ್ಯವೋ ಅಷ್ಟು ಬೇಗ ತನಗೆ ಬೇಕಾದುದನ್ನು ಕೊಂಡು ತರಬೇಕು. ಅಷ್ಟರಲ್ಲಿ ಐದು ಬಾರಿ (ಇದು ಹದಿನೈದು ನಿಮಿಷದ ಶಾಪಿಂಗ್‌ ಲೆಕ್ಕಕ್ಕೆ ತೆಗೆದುಕೊಂಡಿರುವುದು) ಮತ್ತೂಬ್ಬರ್ಯಾರೋ ತಮ್ಮ ಗಾಡಿಯನ್ನು ಹಿಂದಕ್ಕೆ ನಿಲ್ಲಿಸಿ ಹಾರನ್‌ ಮಾಡಿ ‘ನೀವು ಮುಂದೆ ಹೋಗುತ್ತೀರಾ?’ ಎಂದು ಸಂಕೇತ ಭಾಷೆಯಲ್ಲಿ ವಿಚಾರಿಸಿರುತ್ತಾರೆ. ಮೂರು ಬಾರಿ ಸಂಚಾರಿ ಪೊಲೀಸರು ಬಂದು, ‘ನೀವು ಮುಂದೆ ಹೋಗಿ ಸಾರ್‌’ ಎಂದು ಸೂಚನೆ ನೀಡಿರುತ್ತಾರೆ, ಇನ್ನು ಮೂರು ಬಾರಿ ನಿಂತಲ್ಲಿಂದಲೇ ಸೀಟಿ ಊದಿ ಮತ್ತೂಬ್ಬ ಸಂಚಾರಿ ಪೊಲೀಸ್‌ ಮುಂದೆ ಹೋಗುವಂತೆ ಸೂಚನೆ ನೀಡುತ್ತಿರುತ್ತಾರೆ. ಪ್ರತಿಯೊಬ್ಬರಲ್ಲೂ ಕಾರಿನಲ್ಲಿ ಕುಳಿತವ, “ಐದು ನಿಮಿಷ ಸಾರ್‌, ಒಳಗೆ ಹೋಗಿದ್ದಾರೆ. ಇನ್ನೇನು ಬಂದು ಬಿಡ್ತಾರೆ’ ಎಂದು ಹೇಳಿ ಮನವಿ ಮಾಡಿಕೊಳ್ಳಬೇಕು. ಕೆಲವೊಮ್ಮೆ ಜಗಳವಾಗುವ ಸಂಭವವೂ ಇದೆ ಎಂದುಕೊಳ್ಳಿ. ಇದಾವುದರ ತಾಪತ್ರಯವೂ ಬೇಡವೆಂದರೆ, ಆರರ ಮೊದಲೇ ಬಂದು ವಾಹನವನ್ನು ಖಾಲಿ ಇದ್ದ ಜಾಗದಲ್ಲಿ ನಿಲ್ಲಿಸಿಬಿಡಬೇಕು. ವಾಹನ ನಿಲುಗಡೆಯ ಸಮಸ್ಯೆ ಎಷ್ಟಿದೆಯೆಂದರೆ, ಹೇಳಲಾಗದಷ್ಟು.

 ಈ ರಸ್ತೆಯಲ್ಲಿ ಎಷ್ಟು ಅಂಗಡಿಗಳಿವೆಯೋ ಅದಕ್ಕಿಂತ ಶೇ. 10 ರಷ್ಟು ಹೆಚ್ಚು ವಾಹನಗಳ ನಿಲುಗಡೆಗೆ ಜಾಗವಿರಬಹುದೇನೋ? ಅದಕ್ಕಿಂತ ಹೆಚ್ಚಿಗೆ ಜಾಗವಿಲ್ಲ. ಹಾಗಾಗಿ ಬೆಳಗ್ಗೆ 9 ಕ್ಕೆ ಅಂಗಡಿಗಳು ತೆರೆಯುತ್ತಿದ್ದಂತೆಯೇ ಬಹುತೇಕ ವಾಹನ ನಿಲುಗಡೆ ಸ್ಥಳಗಳು ಅವರವರ ವಾಹನಗಳಿಂದ ಭರ್ತಿಯಾಗುತ್ತವೆ. ರಾತ್ರಿ ಅಂಗಡಿ ಮುಚ್ಚುವವರೆಗೂ ವಾಹನಗಳು ಅಲ್ಲಿಂದ ಕದಲುವುದಿಲ್ಲ. ಇದು ಹಲವು ವರ್ಷಗಳಿಂದ ಇರುವ ಸಮಸ್ಯೆ. ಈಗಲೂ ಮುಂದುವರಿದಿದೆ. ಇಷ್ಟಕ್ಕೂ ಇದು  ಏಕಮುಖೀ ಮಾರ್ಗ.

ವಿನ್ಯಾಸದ ಪಾತ್ರ

ಹೊಸ ನಗರಗಳನ್ನು ನಿರ್ಮಿಸುವಾಗ ಮುಂದಿನ ಐವತ್ತು ವರ್ಷದ ದೃಷ್ಟಿಯಲ್ಲಿಟ್ಟುಕೊಂಡು ಆಧುನಿಕ ಸಂದರ್ಭಗಳಿಗೆ ತಕ್ಕಂತೆ ರೂಪಿಸಬಹುದು. ಈಗ ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ ಹೇಗೂ ರೂಪುಗೊಳ್ಳುತ್ತಿದೆ. ಇಲ್ಲಿ ರಸ್ತೆಗಳು ಎಷ್ಟು ಅಗಲವಾಗಿರಬೇಕು? ಎಷ್ಟು ಉದ್ದವಾಗಿರಬೇಕು? ವಾಹನ ನಿಲುಗಡೆಗೆ ಎಷ್ಟು ಜಾಗವಿರಬೇಕು ಇತ್ಯಾದಿ ಸಂಗತಿಗಳನ್ನೆಲ್ಲಾ ಯೋಚಿಸಬಹುದು. ಆದರೆ ಈಗಾಗಲೇ ಇದ್ದ ನಗರಗಳನ್ನು ಹೇಗೆ ಸರಿ ಮಾಡುವುದು ಎಂಬುದು ಕಾಡುವ ಪ್ರಶ್ನೆ. ಇಂಥ ಸಂದರ್ಭಗಳಲ್ಲಿ ಪೂರಕ ಪರಿಹಾರಗಳನ್ನು ಹುಡುಕಿಕೊಳ್ಳುವ ಬಗೆಯೊಂದೇ ಇರುವ ಮಾರ್ಗ. ಏಕಮುಖ ಸಂಚಾರ ವ್ಯವಸ್ಥೆ ಅಂಥದೊಂದು ಪರಿಹಾರವೆಂದುಕೊಳ್ಳಿ. ಅದಷ್ಟೇ ಅಲ್ಲ ; ಒಂದಿಷ್ಟು ನಿಯಮಗಳನ್ನು ಬದಲಿಸಬೇಕು. ಹತ್ತಿರದ, ಹೊಂದಿಕೊಂಡು ಇರುವ ರಸ್ತೆಗಳನ್ನು ಬಳಸಿಕೊಂಡು, ಅಲ್ಲಿಗೆ ಪರ್ಯಾಯ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವ ವ್ಯವಸ್ಥಿತ ಪರಿಹಾರಗಳನ್ನು ಹುಡುಕುವ ಅಗತ್ಯ ಬಹಳ ಇದೆ. ಅದನ್ನೇ ವಿನ್ಯಾಸವೆನ್ನುವುದು. ಒಂದು ಸಮಸ್ಯೆಗೆ ಪರಿಹಾರವನ್ನು ರೂಪಿಸುವುದೇ ವಿನ್ಯಾಸದ ಒಂದು ಭಾಗ. ಅದು ನಗರದ ಸೌಂದರ್ಯದ ಭಾಗವೂ ಸಹ.

ಸೋತಿರುವುದು ಇಲ್ಲೇ

ನಾವು ಸೋತಿರುವುದು ಇಲ್ಲಿಯೇ. ಒಂದು ನಗರದ ಅಗತ್ಯಗಳು ಮತ್ತು ಅವು ಬೆಳೆಯುವ ವೇಗವನ್ನು ಗ್ರಹಿಸದೇ ಅಂದಿನ ಲೆಕ್ಕಕ್ಕೆ ಏನು ಬೇಕೋ ಅದನ್ನು ಮಾಡಿಕೊಳ್ಳುತ್ತಾ ಸಂಸಾರ ನಡೆಸಿದರೆ ಆಗುವ ಸಮಸ್ಯೆಗಳೆಲ್ಲಾ ಇಂಥದ್ದೇ. ನಮ್ಮ ಪ್ರತಿ ನಗರಗಳ ಸ್ಥಳೀಯ ಸಂಸ್ಥೆಗಳಲ್ಲಿ ಪಟ್ಟಣ ಅಭಿವೃದ್ಧಿ ಮತ್ತು ಯೋಜನಾ ಸಮಿತಿಗಳಿರುತ್ತವೆ. ಅವುಗಳೆಲ್ಲಾ ನಗರದ ವಿನ್ಯಾಸದ ಹೊಣೆಯನ್ನು ನಿರ್ವಹಿಸಬೇಕಾದಂಥವು. ಒಂದು ಕಟ್ಟಡದ ಎದುರು ಮತ್ತೂಂದು ಕಟ್ಟಡ ಎಂಥದ್ದು ಬರಬೇಕು ಎಂಬುದನ್ನೂ ಈ ಸಮಿತಿಗಳು ನಿರ್ಧರಿಸಬೇಕು. ಕೆಲವೊಂದು ಸ್ಥಳೀಯ ಸಂಸ್ಥೆಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ವಿಭಾಗಗಳಿರುತ್ತವೆಂದುಕೊಳ್ಳಿ. ಎಲ್ಲವೂ ಮಾಡಬೇಕಾದುದು ಅದನ್ನೇ.

ಆದರೆ ನಡೆಯುತ್ತಿರುವುದೇನು? ಅಭಿವೃದ್ಧಿ ಯೋಜನೆಗಳಲ್ಲಿ ಬಹುಪಾಲು ಎಸಿ ಕೊಠಡಿಯಲ್ಲೋ, ಅಧಿಕಾರಿಗಳ ಕೋಣೆಗಳಲ್ಲೋ, ಮತ್ತೆಲ್ಲೋ ಅನುಮೋದನೆಗೊಳಗಾಗುತ್ತವೆ. ನಕ್ಷೆ ನೋಡಿ ಸಹಿ ಹಾಕಿಬಿಡುತ್ತಾರೆ. ಆ ಚಿಕ್ಕ ನಕ್ಷೆ ವಾಸ್ತವವಾಗಿ ಬೃಹತ್‌ ರೂಪದಲ್ಲಿ ಬಂದಾಗ ನಾಗರಿಕರು ಪ್ರತಿಭಟನೆ ನಡೆಸುತ್ತಾರೆ, ಗಲಾಟೆ ಮಾಡುತ್ತಾರೆ. ಆಗ ನಮ್ಮ ಆಡಳಿತ ವ್ಯವಸ್ಥೆ ಒಂದು ನೊಟàಸ್‌ ಕೊಟ್ಟು, ಜೋರು ಮಾಡಿ, ಎರಡು ಪತ್ರಿಕಾ ಹೇಳಿಕೆ ನೀಡಿ ಸುಮ್ಮನಾಗಿ ಬಿಡುತ್ತದೆ. ಆ ಕಟ್ಟಡ ಮತ್ತೆ ಏಳುತ್ತಲೇ ಇರುತ್ತದೆ. ಅಂಥದೊಂದು ಸ್ಪಷ್ಟವಾದ ಉದಾಹರಣೆ ನಾವು ಮೈಸೂರಿನ ಕೆಆರ್‌ ಸರ್ಕಲ್ಲಿನ ಬಳಿಯೇ ನೋಡಬಹುದು.

ಇಂಥ ಅವಘಡಗಳನ್ನು ತಪ್ಪಿಸುವುದೆಂತು? ಹಾಗಾದರೆ ನಗರ ವಿನ್ಯಾಸವೆಂದರೆ ಏನು ಎಂಬುದನ್ನೇ ನಾವೀಗ ಅರ್ಥ ಮಾಡಿಕೊಳ್ಳುವ ಕಾಲ. ಇಲ್ಲದಿದ್ದರೆ ಸುಗ್ರೀವನ ಕಿಷ್ಕಿಂಧೆಗಿಂತ ದಯನೀಯ ಸ್ಥಿತಿ ನಾವು ಸೃಷ್ಟಿಸಿಕೊಂಡ ಗಲ್ಲಿಗಳಿಗೆ ಬಂದುಬಿಡುತ್ತದೆ. ಆಗ ನಾವು, ನಮ್ಮನ್ನಾಳುವವರು ಏಕಮುಖೀ ಸಂಚಾರಿಗಳೇ. ಯಾಕೆಂದರೆ ತಿರುಗಿ ಬರಲು ಮಾರ್ಗಗಳೇ ಇರುವುದಿಲ್ಲ !

(ಲೇಖನ ಸೌಜನ್ಯ : ಉದಯವಾಣಿ)

RurbanIndia
RurbanIndia
RurbanIndia is a space to redesign, revalue and rejuvenate our Rurban Development. A comprehensive strategy and think tank towards our Rurbansphere. RurbanIndia is a webspace of EkaAneka Media.

LEAVE A REPLY

Please enter your comment!
Please enter your name here

Popular Articles