ಬೆಳಕೆಂದರೆ ವಿದ್ಯುತ್ ಎನ್ನುವ ಕಾಲ ಸರಿದು ಹೋಗುತ್ತಿದೆ. ಬೆಳಕೆಂದರೆ ಸೂರ್ಯ ಎನ್ನುವ ಕಾಲ ಹತ್ತಿರವಾಗಿದೆ, ಹತ್ತಿರವಾಗುತ್ತಿದೆ. ಪ್ರತಿ ಹಂತದಲ್ಲೂ ಸೌರಶಕ್ತಿಯ ಪ್ರಭಾವ ಹೆಚ್ಚಾಗುತ್ತಿದೆ. ಇವೆಲ್ಲದರ ಮಧ್ಯೆ ಹತ್ತು ವರ್ಷಗಳ ಹಿಂದೆಯೇ ಸೂರ್ಯನನ್ನು ಕರೆಸಿ ಕುಳ್ಳಿರಿಸಿಕೊಂಡ ಹಳ್ಳಿಯ ಕಥೆ ಕೇಳಿ.
ಸೂರ್ಯ ಮೊದಲು ಬರುವುದು ಎಲ್ಲಿಗೆ ಅಂದರೆ ಹುಟ್ಟೋದು ಎಲ್ಲಿ ಎಂದು ಪ್ರಶ್ನೆ ಕೇಳಿದರೆ ಜಪಾನ್ ಎನ್ನಬಹುದು.
ಯಾಕೆಂದರೆ ನಾವು ಶಾಲೆಯಲ್ಲಿ ಓದಿರುವಂತೆ ಸೂರ್ಯ ಹುಟ್ಟುವ ದೇಶ ಜಪಾನ್ ಎಂದು ಕಲಿತ ನೆನಪು. ಹಾಗೆಯೇ ಬ್ರಿಟಿಷರ ಅನಭಿಷಿಕ್ತ ಸಾಮ್ರಾಜ್ಯ ಎಂದಿಗೂ ಕರಗುವಂಥದ್ದಲ್ಲ ಎಂಬುದಕ್ಕೆ ಒಂದು ನಾಣ್ಣುಡಿ ಹುಟ್ಟಿಸಿದ್ದು ಸೂರ್ಯ ಎಂದಿಗೂ ಮುಳುಗದ ದೇಶ ಬ್ರಿಟನ್ ಎಂದು. ಇಂದು ಬ್ರಿಟನ್ ಸ್ವತಃ ಸಂಕಷ್ಟದಲ್ಲಿದೆ. ಈಸ್ಟ್ ಇಂಡಿಯಾ ಕಂಪೆನಿ ಎಂದಿಗೋ ಬಾಗಿಲು ಹಾಕಿದೆ.
ಆದರೆ ನಮ್ಮ ಬಿಹಾರದ ಒಂದು ಹಳ್ಳಿಯಲ್ಲಿ ಸದಾ ಸೂರ್ಯ ಮೊದಲಿಗೆ ಬರುತ್ತಾನೆ. ಅಲ್ಲಿಗೆ ಬಂದ ತರುವಾಯ ಉಳಿದ ಕಡೆಗೆ ತನ್ನ ಕಿರಣಗಳನ್ನು ಹರಿಯಬಿಡುತ್ತಾನೆ. ನೀವು ಒಪ್ಪದಿರಬಹುದು, ಆದು ಬೇರೆ ಮಾತು.
ಬಿಹಾರದ ಒಂದು ಹಳ್ಳಿ ಧರಣೈ ಆಥವಾ ಧರ್ನೈ ಎಂಬುದು. ಹತ್ತು ವರ್ಷಗಳ ಹಿಂದೆ ಇಲ್ಲಿ ಎಂದಿನಂತೆ ಹಳ್ಳಿಗಳಲ್ಲಿನ ಸೌಲಭ್ಯಗಳ ಕೊರತೆಗೆ ಉದಾಹರಣೆ ಎಂಬಂತಿತ್ತು. ಮುಖ್ಯವಾಗಿ ವಿದ್ಯುತ್. ರಾತ್ರಿಯಾದ ಕೂಡಲೇ ಬೆಳಕಿಗೆ ಚಿಮಣಿಗಳೇ ಅಶ್ರಯ. ಉಳಿದಂತೆ ಡೀಸೆಲ್ ನ ಜನರೇಟರ್ ಗಳು. ವಿದ್ಯುತ್ ಕಂಡಿದ್ದೇ ಇಲ್ಲ. ಒಂದಡೆ ಪರಿಸರ ಮಾಲಿನ್ಯ. ಮತ್ತೊಂದೆಡೆ ಅನಗತ್ಯ ವೆಚ್ಚ.

ಆಗ ಗ್ರೀನ್ ಪೀಸ್ ಎಂಬ ಸಂಸ್ಥೆಯು ಊರಿಗೆ ಬೆಳಕು ತರಲು ಯೋಜಿಸಿತು. ಮತ್ತೆರಡು ಸಂಸ್ಥೆಗಳ (ceed ಮತ್ತು BASIX ) ಸಹಯೋಗದಲ್ಲಿ ಸೌರಶಕ್ತಿಯನ್ನು ಇಂಧನವಾಗಿ ಬಳಸಿ ಬೆಳಕು ನೀಡಲು ಯೋಜಿಸಿತು. ಅದರಂತೆ ನೂರು ಕಿ.ವ್ಯಾ ಸಾಮರ್ಥ್ಯದ ಸೋಲಾರ್ ಮೈಕ್ರೋ ಗ್ರಿಡ್ ಸೌಲಭ್ಯ ಸ್ಥಾಪಿಸಿತು. ಇದರಿಂದ ಹಳ್ಳಿಯ ಅಗತ್ಯದ 450 ಕ್ಕೂ ಹೆಚ್ಚು ಮನೆಗಳ ಬೆಳಕು, 50 ಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳಿಗೆ ಬೆಳಕು, ಶಾಲೆ, ಬೀದಿ ದೀಪಗಳು, ಒಂದು ಅರೋಗ್ಯ ಕೇಂದ್ರ, ರೈತ ಮಾಹಿತಿ ಕೇಂದ್ರವೆಲ್ಲವೂ ಸೌರಶಕ್ತಿಯ ಬೆಳಕನ್ನು ಪಡೆದವು.
ನಗರದಲ್ಲಿರುವ ನಮಗೆ ಒಂದು ದಿನ ಏಕೆ? ಒಂದು ಗಂಟೆ ವಿದ್ಯುತ್ ಇಲ್ಲದೇ ಕಳೆಯುವುದನ್ನು ನೆನಪಿಸಿಕೊಳ್ಳೋಣ. ಸಾಧ್ಯವೇ? ಖಂಡಿತಾ ಇಲ್ಲ. ಅಷ್ಟೊಂದು ಅವಲಂಬಿತರಾಗಿದ್ದೇವೆ ವಿದ್ಯುತ್ ಗೆ. ಆಂಥದ್ದರಲ್ಲಿ ಹಳ್ಳಿಗಳು, ಆರೆಪಟ್ಟಣಗಳು ಗಂಟೆಗಟ್ಟಲೆ ವಿದ್ಯುತ್ ಇಲ್ಲದೇ ಬದುಕುವುದು ಹೇಗೆ? ಸಾಧ್ಯವಿಲ್ಲದ ಮಾತು. ಆದರೂ ಆನುಭವಿಸುತ್ತಿರುವುದು, ಬದುಕು ಸವೆಸುತ್ತಿರುವುದು ಸುಳ್ಳಲ್ಲ. ಇಂದಿಗೂ ಹಲವಾರು ಹಳ್ಳಿಗಳ ಕತ್ತಲೆ ಇನ್ನೂ ನೀಗಿಲ್ಲ.
ಇಷ್ಟಕ್ಕೂ ಧರ್ನೈ ಇರುವುದು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡೇ. ಜತೆಗೆ ಪ್ರಖ್ಯಾತ ಬೋಧಗಯಾಕ್ಕೂ ಹತ್ತಿರದಲ್ಲೇ. ಆದರೂ ಹಳ್ಳಿಗರ ಬೆಳಕಿನ ಕನಸು ಈಡೇರಿದ್ದು ಹತ್ತು ವರ್ಷಗಳ ಹಿಂದಷ್ಟೇ.

ವಿದ್ಯುತ್ ಬರುವುದು ಮುಖ್ಯವಲ್ಲ. ಮತ್ತೆ ಅದೇ ಸಾಂಪ್ರದಾಯಿಕ ವಿದ್ಯುತ್ ಜಾಲಕ್ಕೆ ನೇತು ಹಾಕಿಕೊಳ್ಳಲಿಲ್ಲ. ಬದಲಾಗಿ ಅಸಾಂಪ್ರದಾಯಕ ವಿದ್ಯುತ್ ನ ಕೈ ಹಿಡಿದುಕೊಂಡಿತು. ಇದೊಂದು ಬಗೆಯಲ್ಲಿ ಸ್ವಾವಲಂಬಿಯ ನಡಿಗೆ. ನಗರದಲ್ಲಿನ ಎಲ್ಲ ವಿದ್ಯುತ್ ಪೂರೈಕೆ ವ್ಯವಸ್ಥೆಯ ಅಪಸವ್ಯಗಳನ್ನು ಅನುಭವಿಸಬೇಕಿಲ್ಲ ಎಂಬುದು ದೊಡ್ಡ ಸಮಾಧಾನ.
ಗ್ರೀನ್ ಪೀಸ್ ಸಂಸ್ಥೆಯ ಹೇಳಿಕೆ ಪ್ರಕಾರ, ಇದು ಸೌರಶಕ್ತಿಯಿಂದಲೇ ಸಾಗುತ್ತಿರುವ ಭಾರತದ ಮೊದಲ ಹಳ್ಳಿಯಂತೆ. ಮೂರು ಕೋಟಿ ರೂ. ಗಳ ವೆಚ್ಚದಲ್ಲಿ ಇಡೀ ಹಳ್ಳಿಗೆ ಬೆಳಕು ಹರಿಸಲಾಗಿದೆಯಂತೆ. ಈ ಊರಿನ ಮಂದಿಯ ಮುಖ್ಯ ಕಸುಬು ಕೃಷಿ. ಈಗ ಸೌರಶಕ್ತಿಯ ಬೆಳಕು ಬಂದ ಮೇಲೆ ಮಕ್ಕಳಿಗೆ ಓದಲು ಅಡ್ಡಿಯಿಲ್ಲವಂತೆ. ರಾತ್ರಿ ಹೊತ್ತು ಊರು ಕತ್ತಲೆಯಲ್ಲಿ ಮುಳುಗುವುದಿಲ್ಲ !
ಚಿತ್ರ ಕೃಪೆ : ಗ್ರೀನ್ ಪೀಸ್ ಸಂಸ್ಥೆ