Friday, July 26, 2024

Top 5 This Week

spot_img

Related Posts

ಸ್ಥಳೀಯ ಆರ್ಥಿಕತೆಯ ನಾಡಿ ನಮ್ಮ ಊರಿನ ಮಾರುಕಟ್ಟೆಗಳು

ಮಾರುಕಟ್ಟೆ ನಗರದೊಳಗಿನ ಸಂಸ್ಕೃತಿ ವಾಹಕಗಳು. ಹಳ್ಳಿ ಸೊಗಡಿನ ಚಿತ್ರವನ್ನು ನೀಡುತ್ತಲೇ ನಮ್ಮ ಪೂರ್ವ ಊರುಗಳನ್ನು ಸದಾ ನೆನಪಿನಲ್ಲಿಡುವಂಥವು. ಅಂಥ ಮಾರುಕಟ್ಟೆಗಳನ್ನು ನಗರದೊಳಗೆ ಸೃಷ್ಟಿಸಿಕೊಳ್ಳುವ ಚಳವಳಿ ಆರಂಭವಾಗಬೇಕಿದೆ. ಅದು ನಮ್ಮನ್ನು ಮತ್ತೂಂದಿಷ್ಟು ವರ್ಷ ಮನುಷ್ಯ ಸಂಬಂಧಗಳ ಬಂಧದೊಳಗೆ ಕಾಪಿಡಬಹುದು.

*

ನಮ್ಮ ನಗರದಲ್ಲಿರುವ ಮಾರುಕಟ್ಟೆಗೆ ಒಮ್ಮೆಯಾದರೂ ಭೇಟಿ ಕೊಟ್ಟಿದ್ದೀರಾ?

ಇಂಥದೊಂದು ಪ್ರಶ್ನೆ ಹಿಡಿದುಕೊಂಡು ನಗರದ ರಸ್ತೆಗಳಲ್ಲಿ ಸಮೀಕ್ಷೆಗೆ ಹೊರಟರೆ ನಮಗೆ ಸಿಗುವ ಉತ್ತರ ಮೂರು ಮಾದರಿಯದ್ದಾಗಿರುತ್ತದೆ. ಶೇ. 60 ರಷ್ಟು ಮಂದಿ “ಅಪರೂಪ’ಕ್ಕೆ ಹೋಗುವುದಾಗಿ ಹೇಳಬಹುದು. ಶೇ. 30 ರಷ್ಟು ಮಂದಿ “ಹಿಂದೆ ಹೋಗುತ್ತಿದ್ದೆ, ಈಗಿಲ್ಲ” ಎನ್ನಬಹುದು. ಉಳಿದ ಪ್ರಮಾಣದ ಮಂದಿ ‘ಈಗಲೂ ಹೋಗುತ್ತೇನೆ” ಎನ್ನಬಹುದೇನೋ? ಇದಕ್ಕೆ ಕಾರಣವೂ ಬಹಳಷ್ಟಿವೆ. ನಮ್ಮ ನಗರದೊಳಗಿನ ಉಪನಗರಗಳಲ್ಲೆಲ್ಲಾ ಸೂಪರ್‌ ಮಾರ್ಕೆಟ್‌ಗಳು ಬಂದಿವೆ. ಮಾಲ್‌ಗ‌ಳು ತಲೆ ಎತ್ತಿವೆ. ಎದುರಿನ ಅಂಗಡಿಯನ್ನೂ ಬೆಳಗಿಸುವಷ್ಟು ಕಣ್ಣು ಕೋರೈಸುವ ಲೈಟುಗಳು ರಸ್ತೆಯಲ್ಲಿ ಸೆಳೆಯದೇ ಬಿಡಲಾರವು. ಜತೆಗೆ ಅಲ್ಲಿನ ಆಯ್ಕೆ ಸ್ವಾತಂತ್ರ್ಯದ ಭಾವದೊಳಗೆ ಮುಳುಗಿಬಿಡುತ್ತೇವೆ. ಸಣ್ಣದೊಂದು ಗಾಡಿ ಹಿಡಿದುಕೊಂಡು ನಮಗೆ ಬೇಕಾದದ್ದನ್ನೆಲ್ಲಾ ತುಂಬಿಕೊಂಡು ಕೌಂಟರ್‌ ಎದುರು ಬಂದು ಸಾಲುಗಟ್ಟಿ ನಿಲ್ಲುವುದೆಂದರೆ ಒಂದು ಸಂಭ್ರಮದ ಕ್ಷಣವೂ ಹೌದು. ವಾಸ್ತವವಾಗಿ ನಾವೆಲ್ಲರೂ ಸಿಟಿಯವರು ಎಂದು ಎನ್ನಿಸುವುದು ಆಗಲೇ.

ಇವೆಲ್ಲವೂ ಇರಬಹುದು. ಆದರೆ ನಗರದೊಳಗೂ ಸಂತೆಗಳನ್ನು ಸೃಷ್ಟಿಸಲು ಸಾಧ್ಯವೇ? ಹಳ್ಳಿಗಳಲ್ಲಿನ ನಳನಳಿಸುವ ಸೊಬಗನ್ನು ಉಳಿಸಿಕೊಳ್ಳಲು ಸಾಧ್ಯವೇ? ಮಾರುಕಟ್ಟೆಗಳನ್ನು ತುಂಬಿಕೊಳ್ಳಲು ಸಾಧ್ಯವಾಗದೇ? ಇಂಥ ಹಲವು ಪ್ರಶ್ನೆಗಳು ಇಂದು ಹೆಚ್ಚು ಚರ್ಚೆಗೆ ಒಳಗಾಗುತ್ತಿರುವಂಥವು. ಪಾಶ್ಚಿಮಾತ್ಯ ನಗರಗಳ ಜನರಿಗೂ ಈ ಸೂಪರ್‌ ಮಾಲ್‌ ಗಳು ಏಕತಾನತೆಯ ತಾಣಗಳಂತೆ ಅನ್ನಿಸತೊಡಗಿವೆ. “ನಮ್ಮಷ್ಟಕ್ಕೆ ಹೋಗಿ, ನಮಗೆ ಬೇಕಾದದ್ದನ್ನು ಮೌನವಾಗಿ ತುಂಬಿಕೊಂಡು ತರುವುದು ಯಾಕೋ ಇತ್ತೀಚೆಗೆ ಮಜಾ ಎನ್ನಿಸುತ್ತಿಲ್ಲ’ ಎಂದರು ನನ್ನ ಬೆಂಗಳೂರಿನ ಗೆಳೆಯರೊಬ್ಬರು. ಬಹುಶಃ ಸೂಪರ್‌ ಮಾರ್ಕೆಟ್‌ಗಳಲ್ಲಿನ ಆಯ್ಕೆಯ ಸ್ವಾತಂತ್ರ್ಯ ಭಾವವೇ ಅನಾಥ ಭಾವವನ್ನು ಸೃಷ್ಟಿಸುತ್ತಿದೆಯೋ? ಖಂಡಿತಾ ಗೊತ್ತಿಲ್ಲ. ಇನ್ನಷ್ಟು ದಿನ ಕಾದು ನೋಡಬೇಕು.

ಇವರ ಮಾತು ಕೇಳ್ಳೋಣ

ಬಾರ್ಸಿಲೋನಾದ ಜನರು ತಮಗೆ ಅತ್ಯಂತ ಇಷ್ಟವಾದ ಸಾರ್ವಜನಿಕ ಸ್ಥಳ ಯಾವುದು ಎಂಬ ಪ್ರಶ್ನೆಗೆ ‘ಸಾರ್ವಜನಿಕ ಗ್ರಂಥಾಲಯದ ಬಳಿಕ ಮಾರುಕಟ್ಟೆ’ ಎಂದು ಹೇಳಿದ್ದರು. ಎಂಥದೊಂದು ಅಸಾಮಾನ್ಯ ಹೋಲಿಕೆ. ಗ್ರಂಥಾಲಯದ ಬಳಿಕ ಮಾರುಕಟ್ಟೆ. ಇದಕ್ಕೆ ಹಲವು ಕಾರಣಗಳನ್ನೂ ನೀಡುತ್ತಾ ಹೋಗುತ್ತಾರೆ ಅಲ್ಲಿಯವರು. ಅದು ಕೇವಲ ಭಾವನಾತ್ಮಕ ಕೇಂದ್ರವಾಗಿಯೂ ನೋಡುವುದಿಲ್ಲ, ಆರ್ಥಿಕ ನೆಲೆಯಾಗಿಯೂ ಗುರುತಿಸುತ್ತಾರೆ. ಅದಕ್ಕೆ ನೀಡುವ ಕಾರಣ ಕೇಳಿ, “ಮಾರುಕಟ್ಟೆಗಳು ನಮಗೆ  ಈ ರೆಫ್ರಿಜರೇಟರ್‌ಗಳು ಹಾಗೂ ಆಹಾರ ಸಂರಕ್ಷಕಗಳಿಂದ ಕಾಪಾಡುತ್ತಿವೆ’. ಹಾಗಾಗಿ ನಮಗೆ ಮಾರುಕಟ್ಟೆ ನಗರಗಳು ಬೇಕು ಎನ್ನುತ್ತಾರೆ ಅವರು. ಬಾರ್ಸಿಲೋನಾದ ಜನರ ದೃಷ್ಟಿಯಲ್ಲಿ ಮಾರುಕಟ್ಟೆಗಳು ಒಂದುಬಗೆಯ ಸಮಾಜ ಸುಧಾರಕರ ಪಾತ್ರವನ್ನು ನಿರ್ವಹಿಸಬಲ್ಲವು ಎಂಬ ನಂಬಿಕೆ.

ಈ ಮಾತು ಸುಳ್ಳು ಎಂದು ನನಗನಿಸುವುದಿಲ್ಲ. ಮೈಸೂರಿಗೆ ಭೇಟಿ ನೀಡಿದವರಿಗೆ ಅಲ್ಲಿನ ದೇವರಾಜ ಮಾರುಕಟ್ಟೆಯ ಸೊಬಗು ಸವಿದಿರಬಹುದು. ಒಂದುವೇಳೆ ಹೋಗದಿದ್ದರೆ, ಖಂಡಿತಾ ಹೋಗಿಬನ್ನಿ. ಅದರೊಳಗೆ ತಿರುಗಾಡಿದ ಮೇಲೆ ನಮಗೊಂದು ಇಂಥದ್ದೇ ಮಾರುಕಟ್ಟೆ ಬೇಕು ಎನ್ನದೇ ಇರುವುದಿಲ್ಲ. ಹಾಗೆಂದು ಅದರ ಇತಿಹಾಸವನ್ನೆಲ್ಲಾ ಹೇಳಲು ಹೋಗುವುದಿಲ್ಲ. ಸರಳವಾಗಿ ಕೆಲವೇ ಸಾಲುಗಳಲ್ಲಿ ಹೇಳಿ ಮುಗಿಸುವುದಾದರೆ,ಶತಮಾನ ಕಂಡಿರುವ ಮಾರುಕಟ್ಟೆ. ಮೈಸೂರಿನ ಅತ್ಯಂತ ಜನಪ್ರಿಯತಾಣ.  ಒಂದು ಸಂದರ್ಭದಲ್ಲಿ ಸುಮಾರು 750 ರಷ್ಟು ಮಂದಿ ವ್ಯಾಪಾರಿಗಳು ಇದರಲ್ಲಿ ವ್ಯಾಪಾರ ನಡೆಸುತ್ತಿದ್ದರಂತೆ. ಇದರೊಳಗೆ ಎಲ್ಲವೂ ಇದೆ. ದಿನಸಿ ಸಾಮಾನುಗಳಿಂದ ಹಿಡಿದು ಹಬ್ಬಗಳಿಗೆ ಬೇಕಾಗುವ ಸರಂಜಾಮುಗಳವರೆಗೂ ಪ್ರತಿಯೊಂದೂ ಲಭ್ಯ. ಅದಕ್ಕಿರುವ ನಾಲ್ಕು ದ್ವಾರಗಳ ವಿಶೇಷವೂ ಚೆನ್ನಾಗಿದೆ. ಒಂದೊಂದು ದ್ವಾರವೂ ಕರೆದೊಯ್ಯುವುದು ಒಂದೊಂದು ಲೋಕಕ್ಕೆ.

ಎದುರಿನ ದ್ವಾರದಿಂದ ಹೋದರೆ ನಿಮ್ಮನ್ನು ಹಣ್ಣುಗಳ ಸಾಮ್ರಾಜ್ಯ ನಿಮ್ಮನ್ನು ಸ್ವಾಗತಿಸಬಹುದು. ಹಿಂದಿನಿಂದ (ಮತ್ತೂಂದು ಮುಖ್ಯರಸ್ತೆಯ ಭಾಗದಿಂದ) ಒಳಹೊಕ್ಕರೆ ಪರಿಮಳ ದ್ರವ್ಯಗಳ ಅಂಗಡಿಗಳು ಸ್ವಾಗತಿಸುತ್ತವೆ. ಇನ್ನೆರಡು ಬದಿಯಿಂದ ಒಳ ಹೊಕ್ಕರೆ, ಒಂದೆಡೆ ಬಳೆಗಳ ವ್ಯಾಪಾರ, ಮತ್ತೂಂದೆಡೆ ದಿನಸಿ ಸಾಮ್ರಾಜ್ಯ. ಒಳ ಹೊಕ್ಕರೆ ಹೊರಗೆ ಬರಲಿಕ್ಕೆ ಕನಿಷ್ಠ ಎರಡು ಗಂಟೆ ಬೇಕು. ತರಕಾರಿಗಳು ಹಾಗೂ ಇತರೆ ಸಾಮಾನುಗಳ ಬಣ್ಣಗಳ ಸಾಮ್ರಾಜ್ಯದಲ್ಲಿ ನಾವು ಕಳೆದುಹೋಗುತ್ತೇವೆ. ಅಲ್ಲಿ ಪ್ರತಿ ವ್ಯಾಪಾರಿಯ ಹಿಂದೆಯೂ ಒಂದೊಂದು ಜೀವನ ಕಥೆಗಳಿವೆ.

ಬಹಳ ಹಿಂದೆ ಕೇಳಿದ್ದು ಮತ್ತು ಅನುಭವಿಸಿದ ಕಥೆ. ಮಾರುಕಟ್ಟೆಯ ಬಾಗಿಲ ಎದುರಲ್ಲೇ ಒಂದು ಅಜ್ಜಿ ಕುಳಿತಿರುತ್ತಿದ್ದಳು. ಅವಳು ಸುಮಾರು ವರ್ಷಗಳಿಂದ ಮಾರುತ್ತಿದ್ದುದು ಒಂದೇ. ಅದು ಸಂಪಿಗೆ. ಹೆಚ್ಚಾಗಿ ಕೆಂಡಸಂಪಿಗೆ. ಅವರ ಯಜಮಾನರ ಕಾಲದಿಂದಲೂ ಅದನ್ನೇ ಮಾರುತ್ತಿದ್ದರು. ವಿಚಿತ್ರವೆಂದರೆ ಇಡೀ ಮಾರುಕಟ್ಟೆಯಲ್ಲಿ ಆ ಅಜ್ಜಿಯ ಬಳಿ ಬಿಟ್ಟರೆ ಬೇರೆಲ್ಲೂ ಸಂಪಿಗೆ ಹೂವು ಸಿಗುತ್ತಿರಲಿಲ್ಲ. ಅಂದ ಹಾಗೆ ಇಂದಿಗೂ ಆ ಮಾರುಕಟ್ಟೆಯಲ್ಲಿ ಕನಿಷ್ಠವೆಂದರೆ ನೂರಕ್ಕೂ ಹೆಚ್ಚು ಹೂವಿನ ಅಂಗಡಿಗಳಿವೆ.  ಹಲವು ತಲೆಮಾರುಗಳಿಂದಲೂ ಮಾರುಕಟ್ಟೆಯೊಳಗೆ ಮಳಿಗೆ ಹಿಡಿದು ವ್ಯಾಪಾರ ಮಾಡುವವರೂ ಇದ್ದಾರೆ. ಬಾಳೆಹಣ್ಣಿನ ಮಂಡಿ ನೋಡಬೇಕು. ಅಲ್ಲಿಯೂ ಹಾಗೆಯೇ. ನಂಜನಗೂಡಿನ ರಸಬಾಳೆಯಿಂದ ಆರಂಭಿಸಿ ಕೇರಳದ ನೇಂದ್ರಬಾಳೆಯವರೆಗೂ ಸಿಗುತ್ತದೆ. ಅವರ ಮಾತು, ಗ್ರಾಹಕರೊಂದಿಗಿನ ಚರ್ಚೆ ಎಲ್ಲವೂ ಹೊಸ ಲೋಕವನ್ನು ತೆರೆಯುವುದು ನಿಜಕ್ಕೂ ಸುಳ್ಳಲ್ಲ.

ಮತ್ತೆ ಬಾರ್ಸಿಲೋನಾಕ್ಕೆ ಬರೋಣ

ಬಾರ್ಸಿಲೋನಾದವರು ಹೇಳುವ ಮತ್ತೂಂದು ಮಾತು ಕೇಳಿ. ‘ಈ ಮಾರುಕಟ್ಟೆ ನಮಗೆ ತಾಜಾ ತರಕಾರಿಗಳನ್ನು, ವಸ್ತುಗಳನ್ನು ಪೂರೈಸುವ ತಾಣ. ನಮ್ಮ ಆರೋಗ್ಯವನ್ನು ಕಾಪಾಡುವ ತಾಣ’ ಎನ್ನುತ್ತಾರೆ. ನಮ್ಮ ಸಂತೆಗಳೂ ಇಂಥದ್ದೇ ಒಂದು ಪರಿಕಲ್ಪನೆಯಲ್ಲಿ ಹುಟ್ಟಿಕೊಂಡದ್ದು. ಇಂದಿಗೂ ನಮ್ಮ ಹಳ್ಳಿಗಳಲ್ಲಿನ ಸಂತೆಗಳು ಬದುಕಿರುವುದೇ ಹೀಗೆ.  ಊರ ದೇವಸ್ಥಾನದ ಎದುರೋ, ಸರ್ಕಲ್‌ನ ಎದುರೋ ನಿಗದಿತ ಒಂದು ದಿನ ಸಾಲಾಗಿ ಸುತ್ತಲಿನ ತರಕಾರಿ ಬೆಳೆಗಾರರು ತಾಜಾ ತರಕಾರಿಗಳನ್ನು ತಂದು ಮಾರಿ ಹೋಗುವ ಸಂಪ್ರದಾಯ. ಹನುಮಂತನ ಗುಡಿಗೆ ಶನಿವಾರ ಹೆಚ್ಚು ಜನ ಬರುತ್ತಾರೆಂದರೆ ಅಲ್ಲಿಯೇ ಅಂದು ಸಂತೆ ಆರಂಭವಾಗಬಹುದು. ಹೀಗೆ ಸ್ಥಳೀಯ ಬೆಳೆಗಾರರಿಗೆ ಸ್ಥಳೀಯವಾಗಿಯೇ ಗ್ರಾಹಕರನ್ನು ಹುಡುಕಿಕೊಡುವ ಸುಂದರವಾದ ವೇದಿಕೆ ಸಂತೆ. ಮಾರುಕಟ್ಟೆಯೂ ಅದರ ಸಣ್ಣದೊಂದು ಸಾಂಸ್ಥಿಕ ರೂಪ ಎನ್ನುವುದರಲ್ಲಿ ತಪ್ಪೇನೂ ಇಲ್ಲ. ಅಂದರೆ ಬಾರ್ಸಿಲೋನಾದವರ ಅಭಿಪ್ರಾಯ ಸುಳ್ಳಲ್ಲ.

ಇಂದು ಏಕೆ ತುರ್ತು?

ಈ ಪ್ರಶ್ನೆಗೆ ಉತ್ತರ ಹುಡುಕಿಕೊಳ್ಳುವ ತುರ್ತು ಸದ್ಯದ್ದು. ನಾವೆಲ್ಲಾ  ಬ್ಯುಸಿಯ ಪಂಜರದಲ್ಲಿ ಸಿಲುಕಿಕೊಂಡಿರುವಾಗ, ನಮ್ಮದೆಂದು ಎರಡು ಗಳಿಗೆ ಕಳೆಯಲು ಸ್ಥಳಗಳಿಲ್ಲ ಎನ್ನಿಸುವುದುಂಟು. ಜೀವನ ಸ್ಫೂರ್ತಿಯನ್ನು ತುಂಬಿಕೊಳ್ಳಲು ಆ್ಯಕ್ಸಿಜನ್‌ ಸೆಂಟರ್‌ಗಳು ಬೇಕು. ಅಂಥ ಹೊತ್ತಿನಲ್ಲಿ ನಮ್ಮ ಪೂರ್ವಊರಿನ ಪರಿಮಳದೊಂದಿಗೆ ಇಂದಿನ ಬದುಕನ್ನು ಜೋಡಿಸಿಕೊಳ್ಳಲು ಇರಬಹುದಾದ ಏಕಮೇವ ಜಾಗವದು ಮಾರುಕಟ್ಟೆಗಳು. ಅಲ್ಲಿನ ಪರಿಸರ ರಂಗೇರಿಕೊಳ್ಳುವುದೇ ಹಾಗೆ. ನಮ್ಮ ಪೂರ್ವ ಊರಿನವನ ಭಾಷೆ ಸೊಗಡು, ಉತ್ಪನ್ನಗಳ ಬಣ್ಣ ಈ ನಿಯಾನ್‌ ಬೆಳಕಿನ ಬಣ್ಣಗಳಿಗಿಂತ ಮೇಲುಗೈ ಸಾಧಿಸುತ್ತವೆ. ಅವುಗಳು ಸದಾ ತೋರುವುದು ಸಂಸ್ಕೃತಿ ವಾಹಕಗಳಂತೆ. ಹಳ್ಳಿ ಸೊಗಡಿನ ಚಿತ್ರವನ್ನು ನೀಡುತ್ತಲೇ ನಮ್ಮ ಪೂರ್ವ ಊರುಗಳನ್ನು ನಮ್ಮೊಳಗೆ ಕಾಪಾಡುತ್ತವೆ. ಅಂಥ ಮಾರುಕಟ್ಟೆಗಳನ್ನು ನಗರದೊಳಗೆ ಸೃಷ್ಟಿಸಿಕೊಳ್ಳುವ ಚಳವಳಿ ಆರಂಭವಾಗಬೇಕಿದೆ. ಅದು ನಮ್ಮನ್ನು ಮತ್ತೂಂದಿಷ್ಟು ವರ್ಷ ಮನುಷ್ಯ ಸಂಬಂಧಗಳ ಬಂಧದೊಳಗೆ ಕಾಪಿಡಬಹುದು. ಅಂಥದೊಂದು ಶಕ್ತಿ ಅವುಗಳಿಗಿವೆ. ಮತ್ತೂಂದು ಮಾರುಕಟ್ಟೆಯ ಬಗ್ಗೆ ಹೇಳುವುದಿದೆ.

ಅಂದ ಹಾಗೆ, ನಾವೀಗ ಇಂಥದೊಂದು ಚಳವಳಿಗೆ ಸಿದ್ಧವಾಗಬೇಕಿದೆ.  ನಮ್ಮೂರಿನ ಸಂತೆಗಳನ್ನು ಮರು ಸ್ಥಾಪಿಸೋಣ, ಮಹಾನಗರಗಳಲ್ಲಿ ಮಾರುಕಟ್ಟೆಗಳನ್ನು ಪುನರ್‌ ಕಟ್ಟೋಣ.

(ಲೇಖನ ಸೌಜನ್ಯ : ಉದಯವಾಣಿ)

RurbanIndia
RurbanIndia
RurbanIndia is a space to redesign, revalue and rejuvenate our Rurban Development. A comprehensive strategy and think tank towards our Rurbansphere. RurbanIndia is a webspace of EkaAneka Media.

LEAVE A REPLY

Please enter your comment!
Please enter your name here

Popular Articles